ಹರಿತಲೇಖನಿ ದಿನಕ್ಕೊಂದು ಕಥೆ: ಕಾಡಿನ ಜಾಣರು. ಭಾಗ 2
ಹರಿತಲೇಖನಿ ದಿನಕ್ಕೊಂದು ಕಥೆ: ಕಾಡಿನ ಜಾಣರು. ಭಾಗ 2

ಹರಿಣಾಕ್ಷಿಗೂ ಅದು ಸರಿ ಕಾಣಿಸಿತು. ಅವರು ಒಪ್ಪಿದರು. ಕರಿಮುಸುಡಮ್ಮ ಗಡವನನ್ನು ಹತ್ತಿರ ಕರೆದು ಕೆಲವು ಸಲಹೆ ನೀಡಿ ಕಳಿಸಿದರು. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಗಡವ ಮಾಯವಾದ. ಹೆದರಿದ ಜಿಂಕೆಗಳು ಒಂದರ ಹಿಂದೆ ಒಂದು ಒತ್ತೊತ್ತಿ ನಿಂತವು. ಕೋಳಿಗಳು ಪೊದರಿನ ಮರೆಯಲ್ಲಿ ತಲೆ ಮರೆಸಿಕೊಂಡವು. ಕೋತಿಗಳು ಆದಷ್ಟು ಎತ್ತರದ ಮರ ನೋಡಿ ಹತ್ತಿ ಕುಳಿತವು.

ಸದ್ದು ಹಾಗೆ ಕೇಳಿಸುತ್ತಲಿತ್ತು. ಎಲ್ಲರೂ ಭಯದಿಂದ ನಡುಗುತ್ತ ಕುಳಿತರು. ಅಷ್ಟರಲ್ಲಿ ಗಡವ ಛಂಗನೆ ನೆಲಕ್ಕೆ ಹಾರಿನಿಂತ. ಹರಿಣಾಕ್ಷಮ್ಮ, ಕೆಂಪುಜುಟ್ಟಪ್ಪ ಓಡಿ ಹತ್ತಿರ ಬಂದು 'ಏನು? ಯಾರದು?' ಎಂದು ಕುತೂಹಲದಿಂದ ಕೇಳಿದರು.

'ಸಾರ್ ಅಲ್ಲಿ ಒಬ್ಬರು ಮನುಷ್ಯರು ಕಬ್ಬಿಣದ ಗರಗಸದಿಂದ ಗಂಧದ ಮರ ಕುಯ್ತಾ ಇದ್ದಾರೆ. ಅವರ ಹತ್ತಿರ ಬಂದೂಕು ಇದೆ. ದೂರದಲ್ಲಿ ಇನ್ನಿಬ್ಬರು ನಿಂತಿದ್ದಾರೆ. ಅವರು ಖಂಡಿತ ಕಳ್ಳರೇ ಇರಬೇಕು' ಎಂದ ಗಡವ.

ತಕ್ಷಣ ಮುಂದೆ ಬಂದ ಕರಿಮುಸುಡಮ್ಮ 'ನೀವ್ಯಾರು ಹೆದರಬೇಡಿ. ನನಗೆ ಆಚೆ ಕಾಡಿನ ಬಳಿಯಲ್ಲಿರುವ ಫಾರೆಸ್ಟ್ ಆಫೀಸರ್ ಮನೆ ಗೊತ್ತು. ನಾನು ಹೋಗಿ ಅವರನ್ನು ಕರೆತರುತ್ತೇನೆ. ಹರಿಣಾಕ್ಷಮ್ಮ, ನೀನು ಕೂಡಲೇ ಓಡಿಹೋಗಿ ಹೇಮಾ ಬಿಳಿಕರೆಡಪ್ಪನವರನ್ನೂ, ಶಾಲಾ ಸಮಿತಿಯ ಅಧ್ಯಕ್ಷ ಶ್ರೀ ಗಜರಾಯರನ್ನೂ ಕರೆತನ್ನಿ, ಅವರು ಆ ಕಡೆಯಿಂದ ಬಂದು ಆ ಕಳ್ಳರು ಓಡಿಹೋಗದಂತೆ ನೋಡಿಕೊಳ್ಳಲಿ.

ಕೋಳಿಗಳೂ, ಕೋತಿಗಳೂ, ಜಿಂಕೆಗಳು ಅವರವರ ಮನೆಗೆ ತೆರಳಿ' ಎಂದರು. ಅವರ ಸಲಹೆ ಎಲ್ಲರಿಗೂ ಒಪ್ಪಿಗೆಯಾಯಿತು. ಕರಿಮುಸುಡಮ್ಮ ಒಂದು ಕ್ಷಣವೂ ನಿಲ್ಲದೆ ಮರದಿಂದ ಮರಕ್ಕೆ ನೆಗೆಯುತ್ತ ಕಾಡಿನ ಹಸಿರಿನಲ್ಲಿ ಮಾಯವಾದಳು. ಜಿಂಕೆ, ಕೋತಿ, ಕೋಳಿಗಳು ತಮ್ಮ ತಮ್ಮ ಮನೆಗೆ ತೆರಳಿದವು. ಹರಿಣಾಕ್ಷಮ್ಮ ಎಲ್ಲರಿಗೂ ತನ್ನ ಜೊತೆ ಓಡಿ ಬರುವಂತೆ ಸೂಚಿಸಿ ಓಡಿದರು.

ರೇಂಜ್ ಆಫೀಸರ್ ಕರಿಯಪ್ಪನವರು ಬೆಳಗಿನ ಉಪಾಹಾರ ಮುಗಿಸಿ ಗಸ್ತು ತಿರುಗಲು ಜೀಪ್ ರೆಡಿಮಾಡಿ ನಿಂತಿದ್ದರಷ್ಟೆ, ಆಗ ಛಂಗನೆ ಅವರ ಬಳಿ ನೆಗೆದು ನಿಂತ ಕರಿಮುಸುಡಮ್ಮನನ್ನು ಕಂಡು 'ಏನಮ್ಮ, ಬೆಳಿಗ್ಗೆಯೆ ಬಂದುಬಿಟ್ಟೆ. ಲೋ ಬೋರಾ ಒಂದೆರಡು ಬಾಳೆಹಣ್ಣು ತಾ' ಎಂದು ಆಳಿಗೆ ಹೇಳಿದರು.

ಕರಿಮುಸುಡಮ್ಮ ಕರಿಯಪ್ಪನವರ ಕೈ ಹಿಡಿದು ಜೀಪಿನ ಕಡೆ ತೋರಿಸಿತು. ಕರಿಯಪ್ಪನವರಿಗೆ ಅರ್ಥವಾಯಿತು. ತನ್ನ ಕಾಡಿನ ಕಡೆ ಕೈ ತೋರಿಸುತ್ತಾ ಕರಿಮುಸುಡಮ್ಮ ಮರ ಕುಯ್ಯುವ ಅಭಿನಯ ಮಾಡಿದಳು. ಅದೂ ಅವರಿಗೆ ತಿಳಿಯಿತು. ಕೂಡಲೇ ತನ್ನ ಜೇಬಿನಿಂದ ಸೀಟಿ ತೆಗೆದು ಊದಿದರು.

ಹತ್ತಿರದ ಕ್ವಾರ್ಟಸ್ರಗಳಲ್ಲಿದ್ದ ಅರಣ್ಯ ಪೊಲೀಸ್ ಬಂದೂಕು ಧರಿಸಿ ಹೊರಬಂದರು. 'ಲೋ ತಿಮ್ಮಯ್ಯ, ಒಡನೇ ಇನ್ನೊಂದು ಜೀಪಿನಲ್ಲಿ ಆರು ಜನರೂ ಮತ್ತು ಈ ಜೀಪಿನಲ್ಲಿ ಆರು ಜನ ಹತ್ತಿ, ಆ ಕಡೆ ಕಾಡಿಗೆ ಹೋಗಬೇಕು. ಅಲ್ಲೆಲ್ಲೋ ಗಂಧದ ಮರ ಕುಯ್ತಿದ್ದಾರೆ' ಎಂದು ಕರಿಯಪ್ಪ ದಫೇದಾ‌ರ್ ತಿಮ್ಮಯ್ಯನಿಗೆ ಹೇಳಿದರು.

ಜೀಪುಗಳು ಸದ್ದು ಮಾಡದೆ ಹೊರಟವು. ಕರಿಮುಸುಡಮ್ಮ ಮುಂದೆ ಮರದಿಂದ ಮರಕ್ಕೆ ಹಾರುತ್ತಾ ಸಾಗಿ ತನಗೆ ಸದ್ದು ಕೇಳಿಸಿದ ಜಾಗಕ್ಕೆ ಬಂದಳು.

ಜೀಪು ನಿಂತಾಗ ಕರಿಯಪ್ಪನವರಿಗೂ ಮರ ಕುಯ್ಯುವ ಸದ್ದು ಕೇಳಿಸಿತು. ಅವರು ತಮ್ಮ ದಳಕ್ಕೆ ತಕ್ಕ ಸೂಚನೆ ನೀಡಿ ಕಳ್ಳರನ್ನು ಹಿಡಿಯುವ ಉಪಾಯ ಹೇಳಿಕೊಡುತ್ತಿದ್ದರು. ಅಷ್ಟರಲ್ಲಿ ಆ ಕಡೆ ಗಜರಾಯರು ಘೀಳಿಡುವ ಸದ್ದು ಕೇಳಿಸಿತು. ಒಡನೆ ನಾಲ್ಕು ಜನ ದಡ ದಡ ಓಡುತ್ತಾ ಬರುವುದೂ ಕಾಣಿಸಿತು.

ನಾಲ್ಕು ಕಡೆಗಳಿಂದ ಅವರನ್ನು ಅರಣ್ಯ ಪೊಲೀಸರು ಸುತ್ತುವರಿದಿದ್ದರು. 'ನಿಲ್ಲಿ ನಿಮ್ಮ ಕೈಯಲ್ಲಿರುವ ಬಂದೂಕು ಬಿಸಾಡಿ, ಅಲುಗಾಡಿದರೆ ಗುಂಡು ಹಾರಿಸುತ್ತೇವೆ' ಎಂದು ಗರ್ಜಿಸಿದರು ಕರಿಯಪ್ಪ, ಗಂಧದ ಮರ ಕುಯ್ಯುವ ನಾಲ್ಕು ಜನ ಕಳ್ಳರು ಬಂದೂಕು ಬಿಸಾಡಿ ಶರಣಾಗತರಾದರು. ಅಷ್ಟರಲ್ಲಿ ಹೇಮಾ ಬಿಳಿಕರಡೆಪ್ಪನವರೂ, ಶ್ರೀ ಗಜರಾಯರೂ ಕಾಣಿಸಿಕೊಂಡರು.

'ಸಾರ್ ಆನೆ, ಸಾರ್ ಕರಡಿ' ಎಂದು ದಫೇದಾರ್ ತಿಮ್ಮಯ್ಯ ಕೂಗಿದ. ಅಷ್ಟರಲ್ಲಿ ಕರಿಮುಸುಡಮ್ಮ ಗಜರಾಯರ ಬೆನ್ನಿಗೆ ಹಾರಿ ತಲೆಯನ್ನೊಮ್ಮೆ ತನ್ನ ಎದೆಯನ್ನೊಮ್ಮೆ ಮುಟ್ಟಿ 'ಇವರು ನಮ್ಮವರು' ಎಂದು ಸನ್ನೆ ಮಾಡಿದಳು.

'ಅವು ಏನೂ ಮಾಡೊಲ್ಲ. ಅವೆಲ್ಲ ಅಭಯಾರಣ್ಯದ ಪ್ರಾಣಿಗಳು ನಡೀರಿ. ಈ ಕಳ್ಳರನ್ನು ಬೇಡಿ ಹಾಕಿ ಜೀಪಿಗೆ ನೂಕಿ. ಇವರು ಮರ ಕಡೀತಿದ್ದ ಜಾಗಕ್ಕೆ ನಡೀರಿ' ಎಂದರು.

ಕರಿಮುಸುಡಮ್ಮ, ಹರಿಣಾಕ್ಷಮ್ಮ, ಕೆಂಪುಜುಟ್ಟಪ್ಪ, ಹೇಮಾ ಬಿಳಿಕರಡೆಪ್ಪ, ಶ್ರೀ ಗಜರಾಯ ಮುಂತಾದವರು ಕಳ್ಳರ ಕಡೆ ದುರು ದುರು ನೋಡುತ್ತಾ ನಿಂತಾಗ ಕರಿಯಪ್ಪನವರು ಮುಂದೆ ಬಂದು ಕರಿಮುಸುಡಮ್ಮನ ಕೈ ಕುಲುಕಿ, 'ತುಂಬ ಧನ್ಯವಾದಗಳು ಕರಿಮುಸುಡಮ್ಮ. ನಿಮ್ಮಿಂದಾಗಿ ನಮ್ಮ ಕಾಡಿನ ಸಂಪತ್ತು ಉಳಿಯಿತು' ಎಂದರು.

ಶಾಲಾರಂಭದ ದಿನ ಹೇಮಾ ಬಿಳಿಕರಡಪ್ಪನವರು ಈ ಸಂಗತಿಯನ್ನು ಎಲ್ಲರ ಮುಂದೆ ಹೇಳಿದಾಗ, ಗಜರಾಯರು ಎರಡು ಹಾರಗಳನ್ನು ತಂದು ಒಂದನ್ನು ಗಡವನಿಗೂ, ಇನ್ನೊಂದನ್ನು ಕರಿಮುಸುಡಮ್ಮನಿಗೂ ತೊಡಿಸಿ, ಹರಿಣಾಕ್ಷಿಯ ಬೆನ್ನು ಚಪ್ಪರಿಸಿದರು.

ಕೃಪೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

health

HL

others

HL

politics

HL

crime

HL

crime

HL

politics

HL

crime

HL

crime

HL

others

HL

economy

HL

economy

HL

travel

HL

health

HL

others

HL

politics

HL

others

HL

health

HL

crime

HL

others

HL

others

HL

politics

HL

others

HL

others

HL

politics

HL

others

HL

crime

HL

others

HL

others

HL

politics

HL

politics