ಹರಿತಲೇಖನಿ ದಿನಕ್ಕೊಂದು ಕಥೆ:‌ ಹನುಮಂತ ಮಾಡಿದ ಉಪಾಯಗಳು
ಹರಿತಲೇಖನಿ ದಿನಕ್ಕೊಂದು ಕಥೆ:‌ ಹನುಮಂತ ಮಾಡಿದ ಉಪಾಯಗಳು

ರಾಮಾಯಣದಲ್ಲಿ ರಾಮ ರಾವಣರ ಯುದ್ಧ ನಡೆಯುತ್ತಿದೆ. ಶ್ರೀ ರಾಮನ ಮುಂದಾಳತ್ವದಲ್ಲಿ ವಾನರ ಸೇನೆ ಹಾಗೂ ರಾವಣನ ಸೇನೆಯ ರಾಕ್ಷಸರು ಯುದ್ಧ ಮಾಡುತ್ತಿದ್ದರು. ಹಗಲೆಲ್ಲ ಯುದ್ಧ ಮಾಡಿ ರಾತ್ರಿ ಮಲಗುವಾಗ ರಾಮ ಲಕ್ಷ್ಮಣರ ಸುರಕ್ಷತೆಗಾಗಿ, ಹನುಮಂತನು ತನ್ನ ಬಾಲವನ್ನು ಸುತ್ತಿ ಸುತ್ತಿ ಸುತ್ತಿ ಎತ್ತರದ  ಕೋಟೆಯ ತರಹ ಮಾಡಿ ಅದರ ಒಳಗಡೆ  ಮಲಗುವಂತೆ ಮಾಡಿದ್ದ  ತಾನು ಕಾವಲು ಕಾಯುತ್ತಾ ನಿಂತಿರುತ್ತಿದ್ದ.

ಹೀಗಿರುವಾಗ ಒಂದು ದಿನ ಬೆಳಗಾದ ಮೇಲೆ  ಹನುಮಂತನು ನಿತ್ಯದಂತೆ ರಾಮ ಲಕ್ಷ್ಮಣರನ್ನು ನೋಡಲು ಬಂದರೆ ಅವನ ಬಾಲದೊಳಗೆ ರಾಮ ಲಕ್ಷ್ಮಣರು ಮಲಗಿರಲಿಲ್ಲ. ಎಲ್ಲಿ ಹೋದರು ಎಂದು ಸುತ್ತಲೂ ನೋಡಿದ ಎಲ್ಲೂ ಕಾಣಲಿಲ್ಲ. ಅವನು ತಕ್ಷಣ ರಾಮ- ಲಕ್ಷ್ಮಣರು ಎಲ್ಲಿ ಮಲಗಿದ್ದರೋ ಆ ಜಾಗದಲ್ಲಿ ಪಾತಾಳದಿಂದಲೇ ಸುರಂಗ ಕೊರೆದಿತ್ತು, ಹನುಮಂತನ ಅನುಮಾನ ಬಲವಾಯಿತು ಯಾರಿಗೂ ಗೊತ್ತಾಗದಂತೆ  ಸುರಂಗದ ಮೂಲಕ ಬಂದು ಬಂದು ರಾಮ ಲಕ್ಷ್ಮಣರನ್ನು ಅಪಹರಿಸಿದ್ದಾರೆ ಎಂದುಕೊಂಡ. 

ಕೂಡಲೇ ಅವನು ಎಲ್ಲಿ ಸುರಂಗವಿತ್ತೋ ಆ ಜಾಗದೊಳಗೆ ಜಿಗಿದನು. ಅವನು ಇಳಿಯುತ್ತಾ ಇಳಿಯುತ್ತಾ ಪಾತಾಳ ಲೋಕಕ್ಕೆ ಬಂದನು. ಅಲ್ಲೊಂದು ಸಮುದ್ರದವಿದ್ದು  ಅದರೊಳಗೆ  ದೈತ್ಯಾಕಾರದ ಮೊಸಳೆ ಇತ್ತು ಅದು ಹೇಳಿತು. ರಾಮ ಲಕ್ಷ್ಮಣರನ್ನು ಪಾತಾಳ ಲೋಕಕ್ಕೆ  ರಾಕ್ಷಸರು ಕದ್ದೊಯ್ದಿದ್ದಾರೆ. ಅವರಿಬ್ಬರು ಇರುವ ಜಾಗವನ್ನು ನಾನು ತೋರಿಸುತ್ತೇನೆ ಎಂದು ಮೊಸಳೆ ತನ್ನ ಬೆನ್ನ ಮೇಲೆ ಹನುಮಂತನನ್ನು  ಕೂರಿಸಿಕೊಂಡು ರಾಕ್ಷಸರ ಲೋಕದೊಳಗೆ ಬಿಟ್ಟಿತು. ಅದು 'ಅಹಿ- ಮಹಿ' ರಾಕ್ಷಸ ಸಹೋದರರ ರಾಜ್ಯವಾಗಿತ್ತು. ಅವರು ಶಕ್ತಿ ದೇವತೆ  ಭಕ್ತರಾಗಿದ್ದರು. ಶಕ್ತಿ ದೇವತೆಗೆ ಬಲಿ ಕೊಡಲು ಮನುಷ್ಯರು  ಬೇಕಾಗಿತ್ತು. ಅಂದು ದೇವಿಗೆ ರಾಮ ಲಕ್ಷ್ಮಣರನ್ನು ಬಲಿಕೊಡುವ ತಯಾರಿ ನಡೆದಿತ್ತು. ಹನುಮಂತನಿಗೆ ಎಲ್ಲವೂ ಅರ್ಥವಾಯಿತು. 

ಒಂದು ಕ್ಷಣವೂ ತಡ ಮಾಡಲಿಲ್ಲ. ಹನುಮಂತನು ನೇರವಾಗಿ ಶಕ್ತಿ ದೇವಿ ಮಂದಿರಕ್ಕೆ ಬಂದನು, ಮುಂದೆ ವಿಶಾಲವಾದ ಅಂಗಳ, ಒಳಗೆ ಸಭಾಮಂಟಪ. ಅದರೊಳಗೆ  ದೇವಿಯ ಗರ್ಭಗುಡಿ. ಹನುಮಂತ  ಗರ್ಭಗುಡಿಯೊಳಗೆ ಹೋಗಿ ಬಾಗಿಲನ್ನು ಹಾಕಿಕೊಂಡು ಕಾಯುತ್ತಾ  ಕುಳಿತನು. ಸ್ವಲ್ಪ ಹೊತ್ತಿಗೆ, ರಾಕ್ಷಸರೆಲ್ಲ  ಕೊಂಬು,ಡೋಲು, ಕಹಳೆ, ತಮಟೆ, ಬಡಿಯುತ್ತಾ ,ಕುಣಿಯುತ್ತ, ಅರಚುತ್ತಾ, ಬಂಧಿಸಿದ್ದ ರಾಮ -ಲಕ್ಷ್ಮಣರನ್ನು ಮೆರವಣಿಗೆ ಯಲ್ಲಿ ಕರೆತಂದರು. ಅನೇಕ ಬಗೆಯ ಭಕ್ಷ  ಭೋಜ್ಯಗಳನ್ನು ಹಣ್ಣು ಹಂಪಲುಗಳನ್ನು  ತರುತ್ತಿದ್ದರು. ರಾಮ ಲಕ್ಷ್ಮಣರ  ಕುತ್ತಿಗೆಗೆ ಕೆಂಪು ಕಣಗಲೆ ಹೂವಿನ ಹಾರವನ್ನು ಹಾಕಿದ್ದರು. ಎರಡು ಹುಬ್ಬುಗಳ ನಡುವೆ ಡಾಳಾಗಿ ಕುಂಕುಮ ಹಚ್ಚಿದ್ದರು. ರಾಕ್ಷಸರು ರಾಕ್ಷಸರಂತೆ ಕುಣಿಯುತ್ತಿದ್ದರು. 

ಮೆರವಣಿಗೆ ದೇವಿ ಮಂದಿರಕ್ಕೆ ಬಂದಿತು. ಸಭಾಮಂಟಪದೊಳಗೆ ರಾಮ ಲಕ್ಷ್ಮಣರನ್ನು ಕರೆದೊಯ್ದುರು. ರಾಕ್ಷಸರು ಅರಿವಿಲ್ಲದಂತೆ ಡೋಲು ತಮಟೆ ಶಬ್ದಗಳೊಂದಿಗೆ ಮೈ ಮರೆತು ಕುಣಿಯುತ್ತಿದ್ದರು. ಆ ಸಮಯಕ್ಕೆ ಗರ್ಭಗುಡಿ ಯಿಂದ ದೊಡ್ಡ ಧ್ವನಿ ಬಂದಿತು. ರಾಕ್ಷಸರ ಸದ್ದು ಅಡಗಿತು. ಅಶರೀರವಾಣಿ ಹೇಳಿತು.

ಮಕ್ಕಳೇ ನಾನು ನಿಮ್ಮ ಭಕ್ತಿಗೆ ಸಂತುಷ್ಟಳಾದೆ. ಈ ದಿನ  ಉಗ್ರರೂಪ ಧಾರಣೆ ಮಾಡಿದ್ದೇನೆ ಒಳಗೆ ಯಾರೂ ಬರುವಂತಿಲ್ಲ. ಈಗ ನೀವೆಲ್ಲರೂ ಕಣ್ಣು ಮುಚ್ಚಿ ಕೊಂಡು ಬಲಿಗೆ ತಂದಿರುವ ಎಲ್ಲವನ್ನು ಕಿಟಕಿಯಿಂದ ತೂರಿಸಿ ಬಿಡಿ. ಇಷ್ಟು ಹೇಳಿ ಒಳಗೆ ಹನುಮಂತ  ಕಾಯುತ್ತಿದ್ದನು.  ರಾಕ್ಷಸರು ದೇವಿಯ ಆದೇಶ ಎಂದು ತಿಳಿದು ಕೈಮುಗಿದರು. ಅವರು ಬಹಳ ಉತ್ಸಾಹದಿಂದಿದ್ದರು. 

ಇದು ಹನುಮಂತನ ಧ್ವನಿ ಎಂದು  ರಾಮ ಲಕ್ಷ್ಮಣರಿಗೆ  ತಿಳಿಯಿತು. ಇಬ್ಬರು ಸಂತೋಷಗೊಂಡರು. ಮತ್ತೆ ಒಳಗಿನಿಂದ ಹನುಮಂತನು ಬಾಲಕರೆ ನನಗೀಗ ಹಸಿವಾಗುತ್ತಿದೆ ನೈವೇದ್ಯವನ್ನು ಕೊಡಿ ಎಂದಿತು. ಕೂಡಲೇ ತಾವು ತಂದಿದ್ದ ಎಲ್ಲಾ ಭಕ್ಷ ಭೋಜ್ಯಗಳನ್ನು  ಕಿಟಕಿ ಕಿಂಡಿಯೊಳಗಿಂದ ಹಾಕಿ ಭಕ್ತಿಯಿಂದ ಕೈಮುಗಿದು ಪ್ರಸಾದಕ್ಕಾಗಿ ಕಾದರು. ಆದರೆ ಎಷ್ಟು ಹೊತ್ತಾದರೂ ಯಾವ ಪ್ರಸಾದವೂ ಬರಲಿಲ್ಲ ಎಲ್ಲವನ್ನು ಹನುಮಂತನೇ ಸ್ವಾಹಾ ಮಾಡಿದ್ದ. ಪುನಃ ಹನುಮಂತ ಹೇಳಿದ ಬಾಲಕರೆ  ಕಣ್ಣುಮುಚ್ಚಿಕೊಂಡು ನನ್ನ ಸನ್ನಿಧಿಗೆ ಬನ್ನಿ ಎಂದಿತು. ರಾಕ್ಷಸರೆಲ್ಲ ಒಳಗೆ ಹೋದರು ಹೋದವರು ಹೊರಗೆ ಯಾರು ಬರಲಿಲ್ಲ. 

ಇದನ್ನೆಲ್ಲಾ ನೋಡುತ್ತಿದ್ದ ಅಹಿ- ಮಹಿ' ಗೆ ಅನುಮಾನ ಬಂದಿತು. ಅವರು ಗರ್ಭಗುಡಿಯ ಬಾಗಿಲನ್ನು ಒದ್ದು ಮುರಿದು ಹಾಕಿದರು. ಒಳಗೆ ನೋಡುತ್ತಾರೆ ಹನುಮಂತ ಮುಗುಳ್ನಗುತ್ತಾ  ನಿಂತಿದ್ದ. ಇದನ್ನು ಕಂಡು ಅಹಿ- ಮಹಿ ಗೆ ಸಿಟ್ಟು ಬಂತು ಹನುಮಂತನೊಡನೆ ಯುದ್ಧಕ್ಕೆ ಬಂದರು. ಅವನೊಡನೆ ರಾಕ್ಷಸರೂ ಬಂದರು.

ಈ ಕಡೆ ರಾಮ -ಲಕ್ಷ್ಮಣ, ಹನುಮಂತ ಯುದ್ಧ ಮಾಡುತ್ತಿದ್ದರೆ ಅಲ್ಲಿ  ರಾಕ್ಷಸರು ಯುದ್ಧ ಮಾಡುತ್ತಿದ್ದರು.  ಹನುಮಂತ ಅಹಿ -ಮಹಿ ರಾಕ್ಷಸರನ್ನು ಎಷ್ಟು ಸಾರಿ ಕೊಂದರು ಸ್ವಲ್ಪ ಹೊತ್ತಿನಲ್ಲಿ ಅವರು  ಜೀವಂತವಾಗಿ ಎದ್ದು ಮೊದಲಿನಷ್ಟೇ ಸಾಹಸದಿಂದ ಯುದ್ಧ ಮಾಡುತ್ತಿದ್ದರು. ಅನುಮಾನ ಬಂದ ಹನುಮಂತನು ಮಹಿಯ  ಹೆಂಡತಿ ಚಂದ್ರಸೇನಾ ಬಳಿ ಹೋದನು. 

ಚಂದ್ರ ಸೇನಾ ಗೆ ಮೊದಲಿನಿಂದಲೂ ಅಹಿ- ಮಹಿ ಯರ ಮೇಲೆ ಕೋಪ ಇತ್ತು. ಏಕೆಂದರೆ ಅವಳಿಗೆ ಇಷ್ಟವಿಲ್ಲದಿದ್ದರೂ ಅವಳನ್ನು ಬಲವಂತವಾಗಿ  ಅರಮನೆ ಯಿಂದ ಕದ್ದು ತಂದು 'ಮಹಿ' ಮದುವೆಯಾಗಿದ್ದನು. ಯುದ್ಧದಲ್ಲಿ ಎಷ್ಟು ಸಾರಿ ಅಹಿ -ಮಹಿ ಯರನ್ನು ಕೊಂದಷ್ಟು ಮತ್ತೆ ಜೀವಂತವಾಗಿ ಯುದ್ಧಕ್ಕೆ ಬರುವ ರಹಸ್ಯವನ್ನು ತಿಳಿಯಲು ಹನುಮಂತನು ಮಹಿಯ  ಹೆಂಡತಿ ಚಂದ್ರ ಸೇನಾ ಳನ್ನು ಕೇಳಿದನು.

ಚಂದ್ರ ಸೇನಾ ಗೆ ಅಹಿ-ಮಹಿಯರ ಮೇಲೆ  ಕೋಪವಿದ್ದ ಕಾರಣ ರಹಸ್ಯವನ್ನು ಹೇಳಲು  ಒಂದು ಶರತ್ತಿನ ಮೇಲೆ ಒಪ್ಪಿದಳು. ಆ ಶರತ್ತು, ರಾಮನನ್ನು ಇಲ್ಲಿಗೆ  ಕರೆದುಕೊಂಡು ಬಾ ನಾನು ಮದುವೆಯಾಗುತ್ತೇನೆ. ರಾಮ ಏಕ ಪತ್ನಿ ವ್ರತಸ್ಥ . ಹನುಮಂತನಿಗೆ ಗೊತ್ತಿದ್ದರೂ ಆ ಸಮಯಕ್ಕೆ ಏನು ಮಾಡಲು ತೋಚದೆ ಆಯಿತು ಎಂದು ಒಪ್ಪಿಗೆ ಕೊಟ್ಟನು, ಆದರೆ ರಾಮ ಇಲ್ಲಿಗೆ ಬಂದಾಗ ಯಾವುದೇ ಅಪಶಕುನ ಕಂಡುಬಂದಲ್ಲಿ  ವಿವಾಹ ಸಾಧ್ಯವಿಲ್ಲ ಎಂದನು. ಅವಳು ಒಪ್ಪಿದಳು. ರಾಕ್ಷಸರ ಜೀವದ ರಹಸ್ಯವನ್ನು ರಹಸ್ಯವಾಗಿ  ತಿಳಿದು ಕೊಂಡನು. 

ಹನುಮಂತ ನೇರವಾಗಿ ಉದ್ಯಾನವನಕ್ಕೆ ಬಂದನು. ಅಲ್ಲೊಂದು ಅಮೃತ ಕುಂಡದ ಕಾರಂಜಿ ಚಿಮ್ಮು ತ್ತಿತ್ತು  ಐದು ದುಂಬಿಗಳು ಅದರೊಳಗಿಂದ ಅಮೃತವನ್ನು ಸಂಗ್ರಹಿಸುತ್ತಿದ್ದವು, ಅಹಿ- ಮಹಿ ರಾಕ್ಷಸರು ಸಾಯುತ್ತಲೇ ಪ್ರತಿ ಸಾರಿ ದುಂಬಿಗಳು ಅಮೃತ ತಂದು ಅವರ  ಮೈ ಮೇಲೆ ಸಿಂಪಡಿಸುತಿದ್ದವು. ಕೂಡಲೇ ಅವರಿಬ್ಬರು  ನಿದ್ದೆಯಿಂದ ಎದ್ದವರಂತೆ ಎಚ್ಚರಾಗುತ್ತಿದ್ದರು. ಹನುಮಂತನು ಆ ದುಂಬಿಗಳನ್ನು  ಕೈಯಲ್ಲೆ  ಪಟ-ಪಟ ಹೊಡೆದು ಕೊಂದನು.

ಅದರಲ್ಲಿದ್ದ ಒಂದು ದುಂಬಿ  ಮಾತ್ರ  ನನ್ನನ್ನು ಬಿಟ್ಟುಬಿಡು ನಾನು ರಾಕ್ಷಸನ ಬಂದಿಯಾಗಿದ್ದೆ  ಇನ್ನು ಮುಂದೆ ಅವರನ್ನು ನಾನು ಬದುಕಿಸುವುದಿಲ್ಲ ದೂರ ಹೊರಟು ಹೋಗುವೆ ಅವರ ಹೆದರಿಕೆಗೆ  ಹೀಗೆ ಮಾಡುತ್ತಿದ್ದೆ ,ಈಗ ನೀನು ಏನೇ ಹೇಳಿದರು ಅದನ್ನು ಮಾಡುತ್ತೇನೆ ಬಿಟ್ಟುಬಿಡು. ಬೇಡಿಕೊಂಡಿತು. 

ಹನುಮಂತನು ಆ ದುಂಬಿಗೆ ಹೇಳಿದನು, ಕೊಲ್ಲುವುದಿಲ್ಲ.  ಆದರೆ ಒಂದು ಕೆಲಸ ಮಾಡು, ಅಹಿ-ಮಹಿಯರ ಮನೆಗೆ ಹೋಗಿ ಅಲ್ಲಿ ಮರದ ಮಂಚವಿದೆ ಅದರ ನಾಲ್ಕು ಕಾಲುಗಳನ್ನು ಒಳಗಿನಿಂದ ಕೊರೆದು  ಟೊಳ್ಳು  ಮಾಡು ಎಂದನು. ಆ ದುಂಬಿ ಹನುಮಂತನ  ಆಣತಿಯಂತೆ  ಚಂದ್ರಸೇನಾಳ ಮನೆಗೆ  ಬಂದು ಮಂಚದ ಕಾಲುಗಳನ್ನು ಕೊರೆಯಿತು. ಮರುದಿನ  ಯುದ್ಧವಾಯಿತು. 

ರಾಮ ಲಕ್ಷ್ಮಣ ಹನುಮಂತರು,  ರಾಕ್ಷಸರನ್ನು ಕೊಂದರು. ಅಮೃತದ ಬಿಂದು ಸಿಂಪಡಿಸಲು ಯಾವ ದುಂಬಿಗಳು ಬರಲಿಲ್ಲ. ಹಾಗಾಗಿ ಅವರಿಬ್ಬರು  ಮರಣ ಹೊಂದಿದರು. ಹನುಮಂತನ  ಸಮಯಪ್ರಜ್ಞೆಯನ್ನು ರಾಮನು ಶ್ಲಾಘಿಸಿದನು.

ಕೊಟ್ಟ ಮಾತಿನಂತೆ ಚಂದ್ರ ಸೇನಾಳ ಮನೆಗೆ ರಾಮನನ್ನು ಕರೆತಂದನು. ರಾಮನು ಮಂಚದ ಮೇಲೆ ಕೂರುತ್ತಿದ್ದಂತೆ ಮಂಚವು ಮುರಿಯಿತು. ಅಪಶಕುನ ವಾಯಿತೆಂದು ರಾಮ ಮತ್ತು ಹನುಮಂತನು ಹೊರಗೆ ಬಂದರು. ಚಂದ್ರಸೇನಾಗೆ ಕೊಟ್ಟ ಮಾತನ್ನು ಉಳಿಸಿ, ರಾಮ ಲಕ್ಷ್ಮಣರನ್ನು ಜೊತೆಯಲ್ಲಿ ಕರೆತಂದು ಸೇನೆಗೆ ಸೇರಿಕೊಂಡನು. 

ಬರಹ ಕೃಪೆ: ಆಶಾ ನಾಗಭೂಷಣ. ಸಂಗ್ರಹ ವರದಿ: ಗಣೇಶ್.ಎಸ್., ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

crime

HL

politics

HL

economy

HL

economy

HL

economy

HL

crime

HL

others

HL

others

HL

others

HL

others

HL

others

HL

politics

HL

others

HL

sports

HL

others

HL

others

HL

education

HL

politics

HL

economy

HL

politics

HL

sports

HL

others

HL

economy

HL

others

HL

others

HL

crime

HL

education

HL

others

HL

politics