ಕೇಂದ್ರ ಸರ್ಕಾರ, ಚುನಾವಣೆ ಆಯೋಗಕ್ಕೆ ಸುಪ್ರಿಂ ಕೋರ್ಟ್ ನೋಟಿಸ್..!
ಕೇಂದ್ರ ಸರ್ಕಾರ, ಚುನಾವಣೆ ಆಯೋಗಕ್ಕೆ ಸುಪ್ರಿಂ ಕೋರ್ಟ್ ನೋಟಿಸ್..!

ನವದೆಹಲಿ, (ಏ. 2): ಚುನಾವಣೆಗಳಲ್ಲಿ ಇವಿಂಗಳ ಜತೆ ಎಲ್ಲ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡುವಂತೆ ಕೋರಿ ನ್ಯಾಯವಾದಿ ಅರುಣ್ ಕುಮಾರ್ ಅಗರ್ವಾಲ್ ಸಲ್ಲಿಸಿದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಸೋಮವಾರ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ ಅರ್ಜಿಯ ವಿಚಾರಣೆ ನಡೆಸಿತು. 

ಇವಿಎಂ ಮತ್ತು ವಿವಿಪ್ಯಾಟ್‌ ಎಲ್ಲವನ್ನೂ ಒಟ್ಟಿಗೆ ಎಣಿಕೆ ಮಾಡುವುದು ಸಾಧ್ಯವೇ ಎಂಬ ಬಗ್ಗೆ ಉತ್ತರಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿತು.

ಪ್ರಸ್ತುತ, ಕೇವಲ ಐದು ವಿವಿಪ್ಯಾಟ್ ಸ್ಲಿಪ್‌ಗಳನ್ನು ಪರಿಶೀಲಿಸುವ ಪದ್ಧತಿ ಅಸ್ತಿತ್ವದಲ್ಲಿದೆ. ಇದರ ಬದಲಾಗಿ ವಿವಿಪ್ಯಾಟ್ ಸ್ಲಿಪ್‌ಗಳ ಸಂಪೂರ್ಣ ಎಣಿಕೆಗೆ ವಿಪಕ್ಷಗಳು ಸಹ ಒತ್ತಾಯಿಸಿವೆ. ನಾಲ್ಕು ವಾರಗಳಲ್ಲಿ ಈ ಬಗ್ಗೆ ವಿರೋಧ ಪಕ್ಷಗಳಿಂದ ಉತ್ತರ ಕೇಳಲಾಗಿದೆ.

ವಿವಿಪ್ಯಾಟ್ ಪರಿಶೀಲನೆಯನ್ನು ಅನುಕ್ರಮವಾಗಿ ನಡೆಸಲಾಗುವುದು ಎಂದು ಹೇಳಿರುವ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಸಂವಿಧಾನದ ಪರಿಚ್ಛೇದ 19(1) (ಎ) ಮತ್ತು 21ರ ಪ್ರಕಾರ ಮಾಹಿತಿಯ ಹಕ್ಕನ್ನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಭಾಗವಾಗಿ ಪರಿಗಣಿಸಲಾಗಿದೆ. ಹೀಗಾಗಿ, ಚುನಾವಣೆಗಳು ನ್ಯಾಯಸಮ್ಮತವಾಗಿರುವುದು ಮಾತ್ರವಲ್ಲ ಪಾರದರ್ಶಕವಾಗಿರಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮೇ 17 ರಂದು ಅರ್ಜಿಯ ಮುಂದಿನ ವಿಚಾರಣೆ ನಡೆಯಲಿದೆ. 

ಸುಮಾರು 24 ಲಕ್ಷ ವಿವಿಪ್ಯಾಟ್‌ಗಳ ಖರೀದಿಗೆ ಸರ್ಕಾರವು ಸುಮಾರು 5,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೆ ಪ್ರಸ್ತುತ, ಸುಮಾರು 20,000 ವಿವಿಪ್ಯಾಟ್ ಸ್ಲಿಪ್‌ಗಳನ್ನು ಮಾತ್ರ ಪರಿಶೀಲಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....