ಮಾಧ್ಯಮಗಳನ್ನು ಕರೆತಂದು ಅನುಕಂಪ ಸೃಷ್ಟಿಸುವ ಕೆಲಸ; ಸುಧಾಕರ್ ವಿರುದ್ಧ ಎಸ್.ಆರ್‌‌.ವಿಶ್ವನಾಥ್ ಕಿಡಿ
ಮಾಧ್ಯಮಗಳನ್ನು ಕರೆತಂದು ಅನುಕಂಪ ಸೃಷ್ಟಿಸುವ ಕೆಲಸ; ಸುಧಾಕರ್ ವಿರುದ್ಧ ಎಸ್.ಆರ್‌‌.ವಿಶ್ವನಾಥ್ ಕಿಡಿ

ಬೆಂಗಳೂರು, (ಏ.02): ಭೇಟಿ ಮಾಡಲು ಬರುವವರು ಒಬ್ಬರೇ ಬಂದು ಭೇಟಿ ಮಾಡಬೇಕು. ಮಾಧ್ಯಮಗಳನ್ನು ಕರೆತಂದು ಅನುಕಂಪ ಸೃಷ್ಟಿಸುವ ಕೆಲಸ ಮಾಡಬಾರದು ಎಂದು ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹೇಳಿದ್ದಾರೆ.

ಭಾನುವಾರ ಸುಧಾಕರ್‌ ಮನೆಗೆ ಬಂದು ವಾಪಸ್‌ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲ್ಕೈದು ದಿನಗಳ ಹಿಂದೆ ಭೇಟಿ ಮಾಡಬೇಕು ಎಂದು ಅವರು ಮೆಸೇಜ್‌ ಮಾಡಿದ್ದರು. ಮೆಸೇಜ್‌ ಹೊರತುಪಡಿಸಿ ಯಾವುದೇ ಕರೆ ಮಾಡಿಲ್ಲ. 

ಸುಧಾಕರ್‌ ಅವರನ್ನು ನಾನು ಒಬ್ಬನೇ ಭೇಟಿ ಮಾಡುವುದಿಲ್ಲ. ಮುಖಂಡರ ಜೊತೆ ಭೇಟಿ ಮಾಡುತ್ತೇನೆ ಮಾಧ್ಯಮದವರಿಗೆ ಹೇಳಿದ್ದೆ. ಸುಧಾಕರ್ ಬರುವ ಮಾಹಿತಿ ನನಗೆ ಇರಲಿಲ್ಲ. ಹೀಗಾಗಿ ನನ್ನ ಕೆಲಸಗಳಿಗೆ ನಾನು ಹೋದೆ ಎಂದು ಸ್ಪಷ್ಟನೆ ನೀಡಿದರು. 

ಟಿಕೆಟ್ ಸಿಗದಿದ್ದಾಗ ಕೆಲ ದಿನಗಳ ಕಾಲ ಅಸಮಾಧಾನ ಇರುವುದು ಸಹಜ. ಸೀಟ್ ಸಿಗದಿದ್ರೆ ಮನೆಯಲ್ಲಿ ಇರುತ್ತಿದ್ದೆ ಎಂದು ಸುಧಾಕರ್ ಹೊಸಕೋಟೆಯಲ್ಲಿ ಹೇಳಿದ್ದಾರೆ. ನಾನು ಆ ರೀತಿ ಎಲ್ಲೂ ಹೇಳಿಲ್ಲ. ನಮಗೆ ಪಕ್ಷ ಬಿಟ್ಟರೆ ಸ್ವಾರ್ಥ ಸಂಬಂಧ ಏನು ಇಲ್ಲ ಎಂದು ತಿಳಿಸಿದರು.

ಯಲಹಂಕದಲ್ಲಿ ನಮ್ಮ ಒಗ್ಗಟ್ಟು ಒಡೆಯಲು ಸಾಧ್ಯವಾಗುವುದಿಲ್ಲ. ಕ್ಷೇತ್ರದ ಜನ ನಮ್ಮ ಜೊತೆ ಪಕ್ಷದ ಜೊತೆ ಇದ್ದಾರೆ. ನಾವು ಸುಧಾಕರ್ ಹೆಸರು ಹೇಳಿ ವೋಟ್ ಕೇಳುವುದಿಲ್ಲ. ಯಾಕೆಂದರೆ ಅದು ಮೈನಸ್ ಆಗಬಹುದು. ಅದಕ್ಕೆ ಮೋದಿ ಹೆಸರು ಹೇಳಿ ಕೇಳಿ ಮತ ಕೇಳುತ್ತೇವೆ. 

ಅನುಕಂಪ ಪಡೆಯುವ ಕೆಲಸ ಮಾಡಬಾರದು. ನಾವು ಯಾರ ಬಕೆಟ್ ಹಿಡಿಯುವ ಕೆಲಸ ಮಾಡುವುದಿಲ್ಲ. ಯಡಿಯೂರಪ್ಪ ಅವರು ಗೌರವ ಕೊಡಬೇಕು ಅಂತ ಹೇಳಿದ್ದಾರೆ ಅದನ್ನ ನಾವು ಮಾಡುತ್ತೇವೆ ಎಂದು ಹೇಳಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....