ನಿತೀಶ್ ಕುಮಾರ್‌ಗಿಂದು ಅಗ್ನಿ ಪರೀಕ್ಷೆ..!: ಹೈಡ್ರಾಮಾ ಸಾಧ್ಯತೆ
ನಿತೀಶ್ ಕುಮಾರ್‌ಗಿಂದು ಅಗ್ನಿ ಪರೀಕ್ಷೆ..!: ಹೈಡ್ರಾಮಾ ಸಾಧ್ಯತೆ

ಪಾಟ್ನಾ, (ಫೆ.12); ಆರ್‌ಜೆಡಿ ಜೊತೆಗಿನ ಮೈತ್ರಿ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಜೊತೆ ಸೇರಿ ಬಿಹಾರದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ವಿಧಾನ ಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. 

ದಾಖಲೆಯ ಒಂಭತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ನಿತೀಶ್ ಗಿದು ಅಗ್ನಿಪರೀಕ್ಷೆಯಾಗಲಿದೆ. ಬಿಜೆಪಿವಿರೋಧಿ ಇಂಡಿಯಾ ಮೈತ್ರಿಕೂಟಕ್ಕೆ ಕೈಕೊಟ್ಟು ಎನ್‌ಡಿಎ ಪಾಳೆಯ ಸೇರಿರುವ ಜೆಡಿಯು ನಾಯಕ ನಿತೀಶ್ ಕುಮಾರ್‌ಗೆ 128 ಶಾಸಕರ ಬೆಂಬಲವಿದೆ ಎನ್ನಲಾಗುತ್ತಿದೆ. ಅದರಲ್ಲಿ ಬಿಜೆಪಿ 78, ಜೆಡಿಯು 45, ಎಚ್‌ಎಎಂ 4 ಹಾಗೂ ಒಬ್ಬರು ಸ್ವತಂತ್ರ ಅಭ್ಯರ್ಥಿಯಿದ್ದಾರೆ. ವಿಪಕ್ಷಗಳ ಬಳಿ 114 ಶಾಸಕರಿದ್ದಾರೆ. ಬಹುಮತ ಸಾಬೀತುಪಡಿಸಲು 122 ಶಾಸಕರು ಬೇಕು.

ವಿಶ್ವಾಸಮತ ಯಾಚನೆಯ ಹಿನ್ನೆಲೆಯಲ್ಲಿ ಜೆಡಿಯು ತನ್ನ ಶಾಸಕರಿಗೆ ವಿಪ್ ನೀಡಿದ್ದು, ಸೋಮವಾರ ಎಲ್ಲರೂ ವಿಧಾನಸಭೆಯಲ್ಲಿ ಹಾಜರಿರಲು ಸೂಚಿಸಿದೆ. ಆದರೆ, ಈಗಲೂ ವಿಧಾನಸಭೆಯಲ್ಲಿ ಆರ್‌ಜೆಡಿಯ ಸ್ಪೀಕ‌ರ್ ಇದ್ದಾರೆ. ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿದೆ. ಆದರೆ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅದಕ್ಕೆ ಜೆಡಿಯು ಸಡ್ಡು ಹೊಡೆದಿದ್ದು, ಸ್ಪೀಕರ್‌ಗೆ ಸದನ ನಡೆಸಲು ಬಿಡುವುದಿಲ್ಲ ಎಂದು ಹೇಳಿದೆ. ಹೀಗಾಗಿ ಸದನದಲ್ಲಿ ಹೈಡ್ರಾಮಾ ನಡೆಯುವ ಸಾಧ್ಯತೆಯಿದೆ.

ವಿಶ್ವಾಸಮತ ಯಾಚನೆಗೂ ಮುನ್ನ ತಮ್ಮ ಪಕ್ಷದ ಶಾಸಕರನ್ನು ಎನ್‌ಡಿಎ ಮೈತ್ರಿಕೂಟವು ಸೆಳೆಯುವ ಭೀತಿಯಿಂದ ಆರ್‌ಜೆಡಿಯ ಎಲ್ಲಾಶಾಸಕರನ್ನೂ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ಮನೆಯಲ್ಲಿ ಇರಿಸಲಾಗಿದೆ. ಈವರೆಗೆ ಹೈದರಾಬಾದ್‌ನಲ್ಲಿದ್ದ ಕಾಂಗ್ರೆಸ್ ಶಾಸಕರೂ ಅಲ್ಲಿಂದ ವಾಪಸಾಗಿ ತೇಜಸ್ವಿ ಮನೆಗೇ ಬಂದಿದ್ದಾರೆ. ಬಿಜೆಪಿ ಶಾಸಕರು ಕೂಡ ಬೋಧಗಯಾದಲ್ಲಿ ಒಟ್ಟಿಗೇ ಇದ್ದಾರೆ. ಇನ್ನು ಜೆಡಿಯು ಶಾಸಕರು ಪಟನಾದ ರೆಸಾರ್ಟ್ ಒಂದರಲ್ಲಿ ತಂಗಿದ್ದು, ಸೋಮವಾರ ನೇರವಾಗಿ ವಿಧಾನಸಭೆಗೆ ಬರಲಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....