ನಾಲ್ವಡಿ ಕೃಷ್ಣರಾಜ ಒಡೆಯರ್‌ ದತ್ತಿ ಪ್ರಶಸ್ತಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಆಯ್ಕೆ
ನಾಲ್ವಡಿ ಕೃಷ್ಣರಾಜ ಒಡೆಯರ್‌ ದತ್ತಿ ಪ್ರಶಸ್ತಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಆಯ್ಕೆ

ಬೆಂಗಳೂರು, (ಜೂ.07): ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ʻನಾಲ್ವಡಿ ಕೃಷ್ಣರಾಜ ಒಡೆಯರ್‌ ದತ್ತಿ ಪ್ರಶಸ್ತಿʼ ಪ್ರಕಟವಾಗಿದೆ.

ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ, ದೇಶದ ಪ್ರಧಾನಿ ಪಟ್ಟಕ್ಕೆ ಏರಿದ ಮೊದಲ ಕನ್ನಡಿಗ, ಕನ್ನಡ ನಾಡು ನುಡಿಯ ಕುರಿತು ಸದಾ ತುಡಿತವನ್ನು ಹೊಂದಿರುವ ಅಪ್ಪಟ ಕನ್ನಡದ ಹೆಮ್ಮೆಯ ಮಣ್ಣಿನ ಮಗ ಎಂದು ಕರೆಸಿಕೊಂಡ ಮಾಜಿ ಪ್ರಧಾನಿ  ಹೆಚ್‌.ಡಿ.ದೇವೇಗೌಡ ಅವರು 2022ನೇ ಸಾಲಿನ ನಾಲ್ವಡಿ ಕೃಷ್ಣರಾಜ ಒಡೆಯರ್‌ ದತ್ತಿ ಪ್ರಶಸ್ತಿ'ಗೆ  ಭಾಜನರಾಗಿರುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಲ್ವಡಿಯವರು ನಾಡಿನ ಅಭ್ಯುದಯದ ಕನಸು ಕಂಡವರು. ಅವರ ಆಶಯದಂತೆ ನಾಡಿನಲ್ಲಿ ಕೈಗಾರಿಕಾ ಕ್ಷೇತ್ರ, ಕೃಷಿ, ನೀರಾವರಿ, ವಿದ್ಯುಚ್ಛಕ್ತಿ, ಹಿಂದುಳಿದ ವರ್ಗಗಳ ಕಲ್ಯಾಣ, ಸಾಮಾಜಿಕ ನ್ಯಾಯ, ಮಹಿಳಾ ಸಬಲಿಕರಣ, ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಕ್ಷೇತ್ರ, ನೀರಿನ ಸೌಕರ್ಯ, ಸಾರಿಗೆ ಸೌಲಭ್ಯ, ವ್ಯಾಪಾರ ಸೇರಿದಂತೆ ನಾಡಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಗಣನೀಯ ಸಾಧನೆ ಮಾಡಿರುವ ಗಣ್ಯರೊಬ್ಬರಿಗೆ ಪ್ರತಿ ವರ್ಷ ಪ್ರಸ್ತುತ  ʻ ನಾಲ್ವಡಿ ಕೃಷ್ಣರಾಜ ಒಡೆಯರ್‌ ದತ್ತಿ ಪ್ರಶಸ್ತಿʼಯನ್ನು ನೀಡಬೇಕು ಎನ್ನುವ ಮೂಲ ಆಶಯ ಈ ದತ್ತಿ ಪ್ರಶಸ್ತಿಯದ್ದಾಗಿದೆ. ಪ್ರಶಸ್ತಿಯು 51,000 (ಐವತ್ತೊಂದು ಸಾವಿರ)ರೂ. ನಗದು, ಸ್ಮರಣಿಕೆ, ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ. 

ಇದುವರೆಗೂ ನಾಡಿನ 12 ಜನ ಗಣ್ಯರಿಗೆ ಪರಿಷತ್ತಿನ ಪ್ರತಿಷ್ಠಿತ ʻನಾಲ್ವಡಿ ಕೃಷ್ಣರಾಜ ಒಡೆಯರ್‌ ದತ್ತಿ ಪ್ರಶಸ್ತಿʼ ಪ್ರಧಾನ ಮಾಡಲಾಗಿದೆ. ಈ ಬಾರಿಯ ಆಯ್ಕೆ ಸಮಿತಿಯು ಮಾಜಿ ಪ್ರಧಾನಿಯಾಗಿದ್ದ ಎಚ್‌,ಡಿ,ದೇವೇಗೌಡ ಅವರಿಗೆ ಈ 2022ನೆಯ ಸಾಲಿನ ʻನಾಲ್ವಡಿ ಕೃಷ್ಣರಾಜ ಒಡೆಯರ್‌ ದತ್ತಿ ಪ್ರಶಸ್ತಿʼಗಾಗಿ ಆಯ್ಕೆಮಾಡಿದೆ.

ನಾಡಿನ ನೀರಾವರಿ ಕ್ಷೇತ್ರ, ಕೃಷಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಸಮಗ್ರ ಕನ್ನಡ ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು, ರಾಜ್ಯದಲ್ಲಿ ರೈತನ ಮಗನಾಗಿ, ಸಿವಿಲ್‌ ಇಂಜಿನಿಯರ್‌ ಆಗಿದ್ದು ರಾಜಕೀಯದಲ್ಲಿ ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಂಡು ತಮಗೆ ದಕ್ಕಿದ ವಿವಿಧ ಸ್ಥಾನಮಾನಕ್ಕೆ ಸೂಕ್ತವಾದ ನ್ಯಾಯವನ್ನು ನೀಡಿ, ಮುಖ್ಯಮಂತ್ರಿ ಪಟ್ಟದಿಂದ ದೇಶದ ಉನ್ನತ ಸ್ಥಾನವಾಗಿರುವ ಪ್ರಧಾನಿ ಪಟ್ಟಕ್ಕೆ ಏರಿದ ಮೊದಲ ಕನ್ನಡಿಗರು ಎಚ್‌.ಡಿ. ದೇವೇಗೌಡ ಅವರು.

ಸಮಗ್ರ ಕನ್ನಡ ನಾಡಿನ ಅಭಿವೃದ್ಧಿಯ ಕನಸು ಕಂಡ  ಅವರು ಬಡ ರೈತರು, ಸೌಲಭ್ಯ ವಂಚಿತರು ಹಾಗೂ ಸಮಾಜದ ದುರ್ಬಲ ವರ್ಗಗಳ ಒಳಿತಿಗಾಗಿ  ಹೋರಾಟ ಮಾಡುತ್ತಲೇ ಬಂದವರು. ಈ ಎಲ್ಲಾ ಹಿನ್ನೆಲೆಯಲ್ಲಿ ಎಚ್‌.ಡಿ. ದೇವೇಗೌಡ ಅವರನ್ನು ಆಯ್ಕೆ ಸಮಿತಿ  ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ನಾಡಿನ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಾಗ ಕನ್ನಡ ಸಾಹಿತ್ಯ ಪರಿಷತ್ತಿಗೂ ಅಪಾರ ಕೊಡುಗೆಗಳನ್ನು ನೀಡಿದ್ದರು. ಪರಿಷತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಇಲ್ಲಿನ ಸಿಬ್ಬಂದಿಗಳನ್ನು ಖಾಯಂಮಾತಿ ಮಾಡಿದ್ದರು. ಇದರೊಂದಿಗೆ ಪರಿಷತ್ತಿಗೆ ಸರಕಾರ ಖಾಯಂ ಅನುದಾನ ನೀಡಬೇಕು ಎನ್ನುವ ಸರಕಾರಿ ಆದೇಶವನ್ನು ಹೊರಡಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಕಾಳಜಿ ಹೊಂದಿದ್ದ ಅವರು ಕಾಲ ಕಾಲಕ್ಕೆ ಪರಿಷತ್ತಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡುವುದರ ಜೊತೆ ಪರಿಷತ್ತಿನ ಇತ್ತೀಚಿನ ಬೆಳವಣಿಗೆಗೆ ಮೆಚ್ಚುಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.

2022ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ದತ್ತಿ ಪ್ರಶಸ್ತಿಗಾಗಿ ಅವರನ್ನು ಆಯ್ಕೆ ಮಾಡಿರುವ ಸಂಗತಿಯನ್ನು ಅವರ ನಿವಾಸಕ್ಕೆ ತೆರಳಿ ತಿಳಿಸಿ, ಪ್ರಶಸ್ತಿ ಸ್ವಿಕರಿಸುವಂತೆ ಮನವಿ ಮಾಡಿದಾಗ ತುಂಬು ಮನಸ್ಸಿನಿಂದ ದೆವೇಗೌಡರು ಒಪ್ಪಿಕೊಂಡು ಪ್ರಶಸ್ತಿಗಾಗಿ ಸಂತಸ ವ್ಯಕ್ತ ಪಡಿಸಿದ್ದಾರೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ. 

ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ.ತಲಕಾಡು ಚಿಕ್ಕರಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷ ಡಾ.ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.  

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....