ಹರಿತಲೇಖನಿ ದಿನಕ್ಕೊಂದು ಕಥೆ: ಕೇಸರಿ ಎಂಬ ವಾನರ.
ಹರಿತಲೇಖನಿ ದಿನಕ್ಕೊಂದು ಕಥೆ: ಕೇಸರಿ ಎಂಬ ವಾನರ.

ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.

ಶಿವನ ಅವತಾರವೆಂದು ಪರಿಗಣಿಸಲಾಗುವ ಹನುಮಂತನು ಶ್ರೀರಾಮನ ಪರಮ ಭಕ್ತ. ಲಂಕೆಯಿಂದ ಸೀತೆಯನ್ನು ಸುರಕ್ಷತವಾಗಿ ಮರಳಿ ತರಲು ನಡೆದ ಯುದ್ಧದಲ್ಲಿ ಈತನ ಪಾತ್ರ ಪ್ರಮುಖವಾದುದ್ದಾಗಿದೆ.

ಶ್ರೀರಾಮನಿಗಾಗಿ ಹನುಮಂತನು ತೋರಿದ ಪ್ರೀತಿ ನಿಸ್ವಾರ್ಥ, ಶ್ರದ್ಧಾ ಮತ್ತು ಭಕ್ತಿಯಿಂದ ಕೂಡಿರುವುದಾಗಿದೆ. ತನ್ನ ಯಜಮಾನನಿಗಾಗಿ ಪ್ರಾಣವನ್ನು ಕೊಡಲು ಲೆಕ್ಕಿಸದ ಮಹಾನ್‌ ವೀರನೀತ, ತ್ಯಾಗಮಯಿ ಈತ. ತನ್ನ ಎದೆಯನ್ನೇ ಸೀಳಿ ತನ್ನ ನಿಷ್ಠಾವಂತೆ ಭಕ್ತಿಯನ್ನು ಮೆರೆದ ತ್ಯಾಗವಂತ. ಹಿಂದೂ ಧರ್ಮದಲ್ಲಿ ಮಾತ್ರವಲ್ಲದೇ, ಜೈನ ಮತ್ತು ಬೌದ್ಧ ಧರ್ಮದಲ್ಲೂ ಗುರುತಿಸಿಕೊಂಡಿರುವ ಹನುಮಂತ, ವಾಯುಪುತ್ರ, ಆಂಜನೇಯನ ಕುರಿತಂತೆ 10 ಅದ್ಭುತ ಸಂಗತಿಗಳಿವೆ.

ಹನುಮಂತನು ಶಿವನ ಅವತಾರವೆಂದು ಶಿವ ಪುರಾಣದಲ್ಲಿ ಹೇಳಲಾಗಿದೆ. ರಾವಣನನ್ನು ಸೋಲಿಸಲು ವಿಷ್ಣು ರಾಮನ ಅವತಾರವನ್ನು ತಾಳಿದಾಗ, ಶಿವನು ಹನುಮಂತನ ಅವತಾರವನ್ನು ತಾಳುತ್ತಾನೆ. ಹನುಮಂತನು ತನ್ನ ಜೀವನದುದ್ದಕ್ಕೂ ರಾಮನ ಸೇವೆಯನ್ನು ಮಾಡುತ್ತಾನೆ. ಹನುಮಂತನು ಯಾವಾಗಲು ರಾಮನಿಗೆ ಸಹಕರಿಸಲು ಕಾರಣವೇನು ಗೊತ್ತಾ..? ಯಾಕೆಂದರೆ ವಿಷ್ಣು ಮತ್ತು ಶಿವನು ಪರಸ್ಪರ ಅಸ್ಥಿತ್ವವನ್ನು ಹೊಂದಿದವರು, ವಿಷ್ಣು ಹಾಗೂ ಶಿವ ಯಾವಾಗಲೂ ಜೊತೆಯಾಗಿಯೇ ಇರುತ್ತಾರೆ. ಶಿವ ಮತ್ತು ವಿಷ್ಣು ಒಂದೇ ಕಾಸ್ಮಿಕ್‌ ಶಕ್ತಿಯ ದೈವಿಕ ರೂಪವಾಗಿದ್ದು, ಅನೇಕ ರೂಪಗಳಲ್ಲಿ ಜೊತೆಯಾಗಿಯೇ ಇರುತ್ತಾರೆ. ವಿಷ್ಣು ಮೋಹಿನಿ ಅವತಾರವನ್ನು ತಾಳಿ, ಶಿವನೊಂದಿಗೆ ಪ್ರಚೋದಿಸಲ್ಪಟ್ಟಾಗ ಹನುಮಂತನು ಜನಿಸಿದನೆಂದು ಹೇಳಲಾಗುತ್ತದೆ. ತದನಂತರ ರಾಮನಿಗೆ ಸೀತೆಯನ್ನು ಹುಡುಕಲು ಸಹಕರಿಸಿದನು.

ಪುರಾಣಗಳಲ್ಲಿ ಹೇಳಿರುವಂತೆ ಹನುಮನ ತಾಯಿ ದೇವಿ ಅಂಜನಾ. ಈಕೆಯನ್ನು ಪಂಜಿಕಾಸ್ಥಲ ಎನ್ನುವ ಶಾಪಗ್ರಸ್ಥ ಆಕಾಶ ಕಾಲ್ಪನಿಕ ಎಂದು ಹೇಳಲಾಗುತ್ತದೆ. ಈಕೆಯ ಕೆಲವು ಕೆಲಸಗಳಿಂದ ಶಾಪಕ್ಕೆ ಒಳಗಾಗಿ ಮಂಗಗಳ ರಾಜಕುಮಾರಿಯಾಗಿ ಜನಿಸುತ್ತಾಳೆ. ಅವಳು ಶಾಪಕ್ಕೆ ಒಳಗಾಗುವ ಸಂದರ್ಭದಲ್ಲಿ ನೀನು ಜಿವನ ಯಾವುದಾದರೊಂದು ಅವತಾರಕ್ಕೆ ಜನ್ಮದಾತೆಯಾದರೆ ಮಾತ್ರ ನೀನು ಶಾಪದಿಂದ ಮುಕ್ತಿ ಹೊಂದುವೆ ಎಂದು ಹೇಳಲಾಗಿತ್ತು. ನಂತರ ಅಂಜನಾ ಮಂಗಗಳ ಮುಖ್ಯಸ್ಥನಾದ ಕೇಸರಿಯನ್ನು ವಿವಾಹವಾದಳು ಹಾಗೂ ಹನುಮಂತ ಎನ್ನುವ ದೈವಿಕ ಶಕ್ತಿಯುಳ್ಳ ಮಗುವಿಗೆ ಜನ್ಮ ನೀಡುತ್ತಾಳೆ. ಅಂಜನಾ ಮತ್ತು ಕೇಸರಿ ದಂಪತಿಗಳ ಮಗನಾದ್ದರಿಂದ ಹನುಮಂತನನ್ನು ಆಂಜನೇಯ ಮತ್ತು ಕೇಸರಿ ನಂದನ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಗಾಳಿ ದೇವರಾದ ವಾಯು ದೇವನು ಹನುಮಂತನ ಜನನದಲ್ಲಿ ಪ್ರಮುಖ ಪಾತ್ರ ವಹಿಸಿರುವುದರಿಂದ ಹನುಮಂತನನ್ನು ವಾಯುಪುತ್ರ ಎಂದೂ ಕೂಡ ಕರೆಯಲಾಗುತ್ತದೆ.

ಸಂಸ್ಕೃತದಲ್ಲಿ ಹನುಮಾನ್‌ ಎಂದರೆ ವಿರೂಪಗೊಂಡ ದವಡೆ ಎಂದರ್ಥ. ಹನು ಎಂದರೆ 'ದವಡೆ' ಮಾನ್‌ ಎಂದರೆ 'ವಿರೂಪಗೊಂಡಿದೆ' ಎಂದು ಹೇಳಲಾಗಿದೆ. ಸೂರ್ಯ ಮತ್ತು ಇಂಧ್ರನೊಂದಿಗೆ ಕಾದಾಟ ನಡೆಸಿರುವುದರಿಂದ ಹನುಮಾನ್‌ ಗೆ ಈ ಹೆಸರು ಬರಲು ಕಾರಣವಾಯಿತು. ಒಮ್ಮೆ ಹನುಮಾನ್‌ನು ಸೂರ್ಯನನ್ನು ಹಣ್ಣೆಂದು ತಪ್ಪಾಗಿ ತಿಳಿದು ತಿನ್ನಲು ಮುಂದಾಗುತ್ತಾನೆ. ಸೂರ್ಯನನ್ನು ಹನುಮಾನ್‌ನಿಂದ ರಕ್ಷಿಸಲು ಇಂದ್ರ ದೇವನು ತನ್ನ ಆಯುಧದಿಂದ ಹನುಮಾನ್‌ನ ಮೇಲೆ ಹಲ್ಲೆ ನಡೆಸುತ್ತಾನೆ. ಇಂದ್ರನ ವಜ್ರಾಯುಧದ ಹೊಡೆತವು ಹನುಮಾನ್‌ನ ದವಡೆಗೆ ಬಿದ್ದು ಆತನ ದವಡೆಯು ವಿರೂಪಗೊಳ್ಳುತ್ತದೆ. ಅಂದಿನಿಂದ ಆಂಜನೇಯನನ್ನು ಹನುಮಾನ್‌ ಎಂದು ಕರೆಯಲಾಗುತ್ತದೆ.

ಇಂದ್ರನಿಂದ ಹಲ್ಲೆಗೊಳಗಾದ ನಂತರ ಹನುಮಂತನು ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನನಾಗುತ್ತಾನೆ. ತನ್ನ ಮಗನ ಅಸಾಹಾಯಕ ಸ್ಥಿತಿಯನ್ನು ನೋಡಿ ಕೋಪಗೊಂಡ ವಾಯುದೇವನು ತ್ರಿಮೂರ್ತಿ ದೇವರುಗಳತ್ತ ಗಾಳಿ ಬೀಸುವುದನ್ನು ನಿಲ್ಲಿಸುತ್ತಾನೆ. ಗಾಳಿಯಿಲ್ಲದೆ ತ್ರಿಮೂರ್ತಿ ದೇವರುಗಳು ಉಸಿರಾಟದ ಸಮಸ್ಯೆಗೆ ಒಳಗಾಗುತ್ತಾರೆ. ಇದನ್ನು ನೋಡಿದ ದೇವಾನುದೇವತೆಗಳು ವಾಯುದೇವನ ಬಳಿ ಹೋಗಿ ಗಾಳಿಯನ್ನು ನೀಡುವಂತೆ ಕೇಳಿಕೊಳ್ಳುತ್ತಾರೆ. ಆಗ ವಾಯು ದೇವನು ಇಂದ್ರ ಮತ್ತು ಸೂರ್ಯದೇವರು ಬಂದು ಮಾಡಿದ ತಪ್ಪಿಗೆ ಕ್ಷಮೆ ಕೇಳಬೇಕು ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ನನ್ನ ಮಗ ಹನುಮಾನ್‌ನ್ನು ಮೊದಲಿನಂತೆ ಮಾಡಲು ಆದೇಶವನ್ನು ನೀಡುತ್ತಾನೆ. ವಾಯುದೇವನ ಆದೇಶವನ್ನು ಒಪ್ಪಿ ಇಂದ್ರ ಮತ್ತು ಸೂರ್ಯ ದೇವನು ಹನುಮಾನ್‌ನ್ನು ಪ್ರಜ್ಞಾಹೀನ ಸ್ಥಿತಿಯಿಂದ ಮರಳಿ ಯತಾಸ್ಥಿತಿಗೆ ಬರುವಂತೆ ಮಾಡುತ್ತಾರೆ. ತದನಂತರ ಎಲ್ಲಾ ಪ್ರಮುಖ ದೇವರುಗಳು ಹನುಮಾನ್‌ನ್ನು ಹಲವಾರು ವರಗಳಿಂದ ಆಶೀರ್ವದಿಸುತ್ತಾರೆ. ಅದರಲ್ಲಿ ಒಂದು ಈ ಅಮರ ಎನ್ನುವ ವರದಾನವಾಗಿದೆ. ಅಂದರೆ ಹನುಮಂತನ ಸಾವು ಅವನ ಸ್ವ ಇಚ್ಛೆಯಿಂದ ಮಾತ್ರ ಸಂಭವಿಸಲು ಸಾಧ್ಯ.

ಇಂದ್ರ ಮತ್ತು ಸೂರ್ಯನಿಂದ ದವಡೆಗೆ ನೋವು ಮಾಡಿಕೊಂಡರೂ ಕೂಡ ಹನುಮಂತನು ತನ್ನ ಬಾಲ ಚೇಷ್ಟೆಯನ್ನು ಬಿಡುವುದಿಲ್ಲ. ಆಂಜನೇಯನ ಚೇಷ್ಟೆಯಿಂದ ಕೆಲವೊಬ್ಬರು ಸಂತೋಷವನ್ನು ಅನುಭವಿಸಿದರೆ, ಇನ್ನು ಕೆಲವೊಬ್ಬರು ಕೋಪಕ್ಕೆ ಒಳಗಾಗುತ್ತಾರೆ. ಆಂಜನೇಯನ ಚೇಷ್ಟೆಯಿಂದ ಕೋಪಕ್ಕೆ ಒಳಗಾದವರಲ್ಲಿ ಮಾತಂಗ ಮುನಿಗಳು ಕೂಡ ಒಬ್ಬರು. ಹನುಮಾನ್‌ನ ಕಪಿ ಚೇಷ್ಟೆಯಿಂದ ಮಾತಂಗ ಮುನಿಗಳು ಕೋಪಗೊಂಡು ಹನುಮಂತನಿಗೆ ನಿನ್ನ ದೈವಿಕ ಶಕ್ತಿಯನ್ನು ಯಾರಾದರು ನೆನಪಿಸುವವರೆಗೆ ನಿನ್ನ ದೈವಿಕ ಶಕ್ತಿ ನೆನಪಿನಲ್ಲಿರಬಾರದು ಎಮದು ಶಾಪವನ್ನು ನೀಡುತ್ತಾರೆ.

ಒಮ್ಮೆ ಶ್ರೀರಾಮನು ತನ್ನ ಅರಮನೆಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ವಿದ್ವಾಂಸರು, ಋಷಿ-ಮುನಿಗಳು ಉಪಸ್ಥಿತರಿದ್ದರು. ಆದರೆ ಆ ಕಾರ್ಯಕ್ರಮದಲ್ಲಿ ಶ್ರೀರಾಮನ ಶಿಕ್ಷಕರಾದ ವಿಶ್ವಾಮಿತ್ರ ಮುನಿಗಳು ಮಾತ್ರ ಆಗಮಿಸಿರುವುದಿಲ್ಲ. ನಾರದ ಮುನಿಗಳು ಹನುಮಂತನಲ್ಲಿ ವಿಶ್ವಾಮಿತ್ರ ಮುನಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿದ್ವಾಂಸರನ್ನು, ಋಷಿ ಮುನಿಗಳನ್ನು ಆಹ್ವಾನಿಸುವಂತೆ ತಲೆ ಕೆಡಿಸುತ್ತಾನೆ. ಅದರಂತೆಯೇ ಹನುಮಂತನು ವಿಶ್ವಾಮಿತ್ರ ಮುನಿಗಳನ್ನು ಹೊರತುಪಡಿಸಿ ಉಳಿದವರೆಲ್ಲರನ್ನು ಆಹ್ವಾನಿಸುತ್ತಾನೆ. ಇದರಿಂದ ಕೋಪಗೊಂಡ ವಿಶ್ವಾಮಿತ್ರರು ತನಗೆ ಅಗೌರವ ಮಾಡಿರುವುದಕ್ಕೆ ಶ್ರೀರಾಮನಲ್ಲಿ ಹನುಮಂತನಿಗೆ ಮರಣದಂಡನೆ ವಿಧಿಸುವಂತೆ ಆದೇಶವನ್ನು ನೀಡುತ್ತಾರೆ. ವಿಶ್ವಾಮಿತ್ರರು ಶ್ರೀರಾಮನ ಗುರುಗಳಾದ್ದರಿಂದ ಗುರುಗಳ ಮಾತನ್ನು ಪಾಲಿಸಲೇ ಬೇಕಾಗಿತ್ತು. ಆದ್ದರಿಂದ ಶ್ರೀರಾಮನು ಮರುದಿನ ಮೈದಾನದಲ್ಲಿ ಹನುಮನ ತಲೆಯನ್ನು ಕತ್ತರಿಸಲು ಬಾಣಗಳನ್ನು ಹೂಡುತ್ತಾನೆ. ಆದರೆ ಯಾವುದೇ ಬಾಣಗಳು ಕೂಡ ಹನುಮಾನ್‌ನಿಗೆ ಹಾನಿಯನ್ನು ಮಾಡುವುದಿಲ್ಲ. ಯಾಕೆಂದರೆ ಹನುಮನು ಆ ಸಂದರ್ಭದಲ್ಲಿ ಶ್ರೀ ರಾಮ ಎನ್ನುವ ರಾಮ ನಾಮವನ್ನು ಜಪಿಸುತ್ತಿರುತ್ತಾನೆ. ಇದರಿಂದ ಮನನೊಂದ ನಾರದನು ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯನ್ನು ಕೇಳುತ್ತಾರೆ.

ಒಂದು ದಿನ ಕುತೂಹಲದಿಂದ ಹನುಮಂತನು ಸೀತಾಮಾತೆಯ ಬಳಿ ಮಾತೆ ನೀವು ಹಣೆಗೆ ಕುಂಕುಮ ಅಥವಾ ಸಿಂಧೂರವನ್ನು ಯಾಕೆ ಇಟ್ಟುಕೊಳ್ಳುತ್ತೀರಿ ಎಂದು ಕೇಳುತ್ತಾನೆ. ಆಗ ಸೀತೆಯು ತನ್ನ ಗಂಡನ ಅಂದರೆ ನಿಮ್ಮ ಯಜಮಾನರ ಆಯಸ್ಸು ಹೆಚ್ಚಾಗಲೆಂದು ಎಂದು ಪ್ರತ್ಯುತ್ತರವನ್ನು ನೀಡುತ್ತಾಳೆ. ಇದರಿಂದ ಹನುಮಂತನು ಪ್ರಭಾವಿತನಾಗಿ ರಾಮನ ಮೇಲಿನ ಪ್ರೀತಿಯಿಂದ, ಸಿಂಧೂರವನ್ನಿಟ್ಟರೆ ನನ್ನ ಸ್ವಾಮಿಗೆ ಸಂತೋಷ, ಆಯಸ್ಸು ಹೆಚ್ಚಾಗುತ್ತೆಂದು ತಿಳಿದು ತನ್ನ ಸಂಪೂರ್ಣ ದೇಹಕ್ಕೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಾನೆ. ಆದ್ದರಿಮದ ಇಂದಿಗೂ ಕೂಡ ಹನುಮಂತನ ವಿಗ್ರಹವನ್ನು ಸಿಂಧೂರದಿಂದ ಅಲಂಕರಿಸಲಾಗುತ್ತದೆ.

ಹನುಮಾನ್‌ ಬ್ರಹ್ಮಚಾರಿಯಾಗಿದ್ದರೂ ಕೂಡ ಆತನಿಗೆ ಮಕರಧ್ವಜ ಎನ್ನುವ ಮಗನಿದ್ದಾನೆ. ಮಕರಧ್ವಜನು ಮೀನಿನಿಂದ ಹುಟ್ಟಿದವನಾಗಿದ್ದಾನೆ. ಮಕರಧ್ವಜನ ಹುಟ್ಟಿನ ಹಿಂದೆ ದಂತಕಥೆಯೇ ಇದೆ. ಲಂಕಾವನ್ನು ಸುಟ್ಟ ನಂತರ ಹನುಮಂತನು ತನ್ನನ್ನು ತಣ್ಣಗಾಗಿಸಿಕೊಳ್ಳಲು ಸಮುದ್ರದಲ್ಲಿ ಸ್ನಾನ ಮಾಡುತ್ತಾನೆ. ಭಾರೀ ಉಷ್ಣತೆಯಿಂದಾಗಿ ಹನುಮಂತನ ಬೆವರಿನ ಹನಿಗಳು ಧೈತ್ಯ ಮೀನಿನ ಬಾಯಿಗೆ ಸೇರುತ್ತದೆ. ಇದರಿಂದ ಹುಟ್ಟಿದವನೇ ಮಕರಧ್ವಜ.

ಮಹಾಭಾರತದಲ್ಲಿ ಹೇಳಿದಂತೆ ರಾಮಾಯಣ ಕಾಲದ ಹನುಮಾನ್‌ನು ಮಹಾಭಾರತ ಯುದ್ಧಕ್ಕೂ ಮೊದಲು ಭೀಮನನ್ನು ಭೇಟಿಯಾಗಿದ್ದನು ಎನ್ನಲಾಗಿದೆ. ಒಮ್ಮೆ ಭೀಮನು ತನ್ನ ಪತ್ನಿ ದ್ರೌಪದಿಯ ಆಸೆಯ ಮೇರೆಗೆ ಸೌಗಂಧಿಕ ಎನ್ನುವ ಆಕಾಶದ ಹೂವನ್ನು ತರಲು ಹೋಗುತ್ತಾನೆ. ದಾರಿಯಲ್ಲಿ ಭೀಮನು ಮರದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಕೋತಿಯನ್ನು ಕಾಣುತ್ತಾನೆ. ಆ ಕೋತಿಯು ಭೀಮನ ನಡಿಗೆಗೆ ತನ್ನ ಬಾಲದಿಂದ ಅಡ್ಡ ಹಾಕುತ್ತಿತ್ತು. ಇದರಿಂದ ಕೋಪಗೊಂಡ ಭೀಮನು ಕೋತಿಯ ಬಳಿ ಬಾಲವನ್ನು ಸರಿಸುವಂತೆ ಹೇಳುತ್ತಾನೆ. ಆಗ ಆ ಕೋತಿಯು ನೀನೇ ಬೇಕಾದರೆ ತನ್ನ ಬಾಲವನ್ನು ಬದಿಗಿಟ್ಟು ನಂತರ ಹೋಗು ಎನ್ನುತ್ತದೆ. ಆಗ ಭೀಮನು ಎಷ್ಟೇ ಪ್ರಯತ್ನಿಸಿದರೂ ಕೂಡ ಆ ಕೋತಿಯ ಬಾಲವನ್ನು ಸರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಈ ಕೋತಿ ಸಾಮಾನ್ಯ ಕೋತಿಯಲ್ಲ ಎಂದು ತಿಳಿದ ಭೀಮನು ಕೋತಿಯನ್ನು ಯಾರೆಂದು ವಿಚಾರಿಸುತ್ತಾನೆ ಆಗ ಕೋತಿಯು. ನಾನು ರಾಮನ ಭಂಟ ಹನುಮಂತ, ನಾವಿಬ್ಬರು ವಾಯು ಪುತ್ರರು. ನಾನು ನಿನ್ನ ಸಹೋದರನೆಂದು ಸಂಬಂಧದ ಬಗ್ಗೆ ತಿಳಿಸುತ್ತಾನೆ.

ರಾಮನು ತನ್ನ ಮೃತ್ಯುವಿನ ಸಮಯದಲ್ಲಿ ಯಮನನ್ನು ಕರೆಯುತ್ತಾನೆ. ಆದರೆ ತನ್ನ ಭಂಟ ಹನುಮಂತನು ಯಾವತ್ತೂ ಕೂಡ ಯಮನಿಗೆ ತನ್ನನ್ನು ಮುಟ್ಟಲು ಬಿಡುವುದಿಲ್ಲ ಎಂಬೂದು ರಾಮನಿಗೆ ತಿಳಿದಿತ್ತು. ಆದ್ದರಿಂದ ರಾಮನು ಉಪಾಯ ಮಾಡಿ ಹನುಮಂತನನ್ನು ಪಾತಳ ಲೋಕದಲ್ಲಿದ್ದ ತನ್ನ ಉಂಗುರವನ್ನು ತರುವಂತೆ ಹೇಳಿ ಕಳುಹಿಸಿಕೊಡುತ್ತಾನೆ. ಪಾತಾಳ ಲೋಕದಲ್ಲಿ ವಾಸುಕಿಯು ಹನುಮಂತನಿಗೆ ಉಂಗುರವನ್ನು ಹುಡುಕಲು ಸಹಕರಿಸುತ್ತದೆ. ಇದೆಲ್ಲವೂ ಕೂಡ ರಾಮನ ಉಪಾಯವಾಗಿತ್ತು.

ಕೃಪೆ: ಸಮಾಜಿಕ ಜಾಲತಾಣ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....