ಖಾಸಗಿ ನ್ಯೂಸ್ ಚಾನಲ್ಗೆ ಲಗ್ಗೆ ಇಟ್ಟ ನಟ ದರ್ಶನ್ ಅಭಿಮಾನಿಗಳು: ಹಲವರ ಬಂಧನ, ಬಿಡುಗಡೆ; ದರ್ಶನ್ ಮಾತಾಡಿದರೆಂದು ಬ್ಯಾನ್ ಮಾಡುದ್ರೀ, ನಿಮ್ಮನ್ನ ಏನ್ ಮಾಡಬೇಕು ಎಂದು ಆಕ್ರೋಶ
ಖಾಸಗಿ ನ್ಯೂಸ್ ಚಾನಲ್ಗೆ ಲಗ್ಗೆ ಇಟ್ಟ ನಟ ದರ್ಶನ್ ಅಭಿಮಾನಿಗಳು: ಹಲವರ ಬಂಧನ, ಬಿಡುಗಡೆ; ದರ್ಶನ್ ಮಾತಾಡಿದರೆಂದು ಬ್ಯಾನ್ ಮಾಡುದ್ರೀ, ನಿಮ್ಮನ್ನ ಏನ್ ಮಾಡಬೇಕು ಎಂದು ಆಕ್ರೋಶ

ಬೆಂಗಳೂರು, (ಫೆ.04): ನಟ ದರ್ಶನ್ ಕುರಿತಂತೆ ಖಾಸಗಿ ಸುದ್ದಿ ವಾಹಿನಿ ಸಿಬ್ಬಂದಿಗಳು ಅವಹೇಳನಕಾರಿಯಾಗಿ ಮಾತನಾಡಿರುವ ಕುರಿತಂತೆ, ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದ ದರ್ಶನ್ ಅಭಿಮಾನಿಗಳು ಇಂದು ನಗರದ ಶಿವಾನಂದ ಸರ್ಕಲ್ ಬಳಿ ಇರುವ ಸುದ್ದಿ ವಾಹಿನಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಈ ವೇಳೆ ನೂರಾರು ಅಭಿಮಾನಿಗಳನ್ನು ಪೊಲೀಸರು ತಡೆದಿದ್ದು, ಪೊಲೀಸರು ಮತ್ತು ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದು ಹಲವರನ್ನು ಪೊಲೀಸರು ವಶಕ್ಕೆ ಪಡೆದು, ಸಂಜೆ ಬಿಡುಗಡೆಗೊಳಿಸಿದ್ದಾರೆ.

ಮಾಹಿತಿ ಅನ್ವಯ ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್, ಅಖಿಲ ಕರ್ನಾಟಕ ದರ್ಶನ್ ಸೇನಾ ಕೇಂದ್ರ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಅಭಿಮಾನಿಗಳಾದ ಪುನೀತ್ ದರ್ಶನ್, ಜೈಕಾಂತ್, ಗೋವಿಂದಣ್ಣ, ನಾಗರಾಜ್, ಅಭಿ, ಸಂಪತ್ ತೂಗುದೀಪ, ದೊಡ್ಡಬಳ್ಳಾಪುರದ ಭರತ್ ಚಕ್ರವರ್ತಿ, ಅಂಬರೀಷ್ ಗೌಡ,ಸಂದೀಪ್, ಶಭಿರ್, ದರ್ಶನ್ ಶಿವ, ಡಿಬಾಸ್ ಗಂಗ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು ಎನ್ನಲಾಗಿದೆ.

ಖಾಸಗಿ ಸುದ್ದಿವಾಹಿನಿಯ ಹಿರಿಯ ಸುದ್ದಿ ನಿರೂಪಕ ಜಯಪ್ರಕಾಶ್ ಶೆಟ್ಟಿ ಅವರು ಇತ್ತೀಚೆಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ, ತಾವು ಕ್ರಿಸ್‌ಮಸ್ ಆಚರಣೆ ಸಂದರ್ಭದಲ್ಲಿ ಸಹೋದ್ಯೋಗಿಯೊಬ್ಬರಿಗೆ ಉಡುಗೊರೆ ನೀಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು.

ಈ ವಿಡಿಯೋದಲ್ಲಿ ಕಚೇರಿಗೆ ಬಂದ ಪಾರ್ಸೆಲ್ ತೆರೆಯುವ ವೇಳೆ ದರ್ಶನ್ ತಲೆ ಹಾಕಿ ಪಾರ್ಸೆಲ್ ಮಾಡಿದರಾ..? ಚಪ್ಪಲಿ ಪಾರ್ಸೆಲ್ ಮಾಡಿರಬೇಕು ಎಂಬ ಮಾತುಗಳು ಕೇಳಿಬಂದಿತ್ತು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ದರ್ಶನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ನೆಚ್ಚಿನ ನಟನ ಬಗ್ಗೆ ಕೆಟ್ಟದಾಗಿ ಮಾತನಾಡಿದವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಪಟ್ಟುಹಿಡಿದರು.

ವಿವಾದ ತೀವ್ರಗೊಂಡ ಬೆನ್ನಲ್ಲೇ ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಜಯಪ್ರಕಾಶ್ ಶೆಟ್ಟಿ, ವಿಡಿಯೋದಿಂದ ನಟ ದರ್ಶನ್ ಅಭಿಮಾನಿಗಳಿಗೆ ಬೇಸರವಾಗಿದೆ. ಅದಕ್ಕಿಂತ ಹೆಚ್ಚಾಗಿ ನನಗೆ ಬೇಸರವಾಗಿದೆ, ದುಃಖವಾಗಿದೆ, ನೋವಾಗಿದೆ. ಏಕೆಂದರೆ ನನ್ನ ಸ್ವಭಾವ ಯಾರನ್ನೂ ನೋಯಿಸುವ, ಯಾರನ್ನು ದುಃಖ ಪಡಿಸುವ ಸ್ವಭಾವ ನನ್ನದಲ್ಲ. ಎಲ್ಲರನ್ನೂ ಪ್ರೀತಿಸುವ, ಒಗ್ಗೂಡಿಸಿಕೊಂಡು ಹೋಗುವ ಸ್ವಭಾವ ನನ್ನದು.

ಎಲ್ಲರಲ್ಲಿ ಕೇಳಿಕೊಳ್ಳುವುದಿಷ್ಟೇ, ಯಾವುದೋ ಕೆಟ್ಟ ಘಳಿಗೆಯಲ್ಲಿ, ವಿಷ ಘಳಿಗೆಯಲ್ಲಿ ನಡೆದ ಘಟನೆ ಅದಾಗಿದ್ದು, ಇದರ ಕುರಿತು ನನಗೆ ವಿಷಾಧವಿದೆ, ಖೇದವಿದೆ, ಬೇಸರವಿದೆ, ಕ್ಷಮೆಯಿರಲಿ ಎಂದಿದ್ದರು.

ಜಯಪ್ರಕಾಶ್ ಶೆಟ್ಟಿ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆ ಕೇಳಿದ್ದನ್ನು ಒಪ್ಪದ ದರ್ಶನ್ ಅಭಿಮಾನಿಗಳು, ಇಂದು ಸುದ್ದಿ ವಾಹಿನಿ ಕಚೇರಿ ಎದುರು ಪ್ರತಿಭಟಿಸಿ, "ಮೊದಲಿಗೆ ಕೆಟ್ಟದಾಗಿ ಮಾತನಾಡಿ ಆಮೇಲೆ ಏನೂ ನಡದೇ ಇಲ್ಲ ಎಂಬಂತೆ ಕ್ಷಮೆ ಕೇಳಿ ಜಾರಿಕೊಳ್ಳುವ ನೀತಿಯನ್ನು ನಾವು ಒಪ್ಪುವುದಿಲ್ಲ”. ದರ್ಶನ್ ಮಾತಾಡಿದಕ್ಕೆ ಬಹಿಷ್ಕಾರ ಹಾಕಿದಿರಿ, ಈಗ ನಿಮ್ಮನ್ನು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->