ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ: ರೈತರಿಂದ 50 ಕ್ವಿಂಟಾಲ್ ರಾಗಿ ಖರೀದಿ, ನೇಕಾರರಿಗೆ 20 ಎಚ್ಪಿ ವರೆಗಿನ ವಿದ್ಯುತ್ ಉಚಿತ ಘೋಷಣೆ..!!
ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ: ರೈತರಿಂದ 50 ಕ್ವಿಂಟಾಲ್ ರಾಗಿ ಖರೀದಿ, ನೇಕಾರರಿಗೆ 20 ಎಚ್ಪಿ ವರೆಗಿನ ವಿದ್ಯುತ್ ಉಚಿತ ಘೋಷಣೆ..!!

ದೊಡ್ಡಬಳ್ಳಾಪುರ, (ಜ.24): ಸ್ವಾತಂತ್ರ್ಯ ನಂತರ ದೇಶದಲ್ಲಿ ಆಡಳಿತ ನಡೆಸಿದ ಸುಳ್ಳು ಹೇಳುವ ಪ್ರಧಾನ ಮಂತ್ರಿ ಎನ್ನುವ ಕೀರ್ತಿ ನರೇಂದ್ರಮೋದಿ ಅವರಿಗೆ ಸಲ್ಲುತ್ತದೆ ಎಂದು  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಅವರು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ  ಮಾತನಾಡಿದರು.

ಕಳ್ಳರಿಗೆ ಕಳ್ಳ ಎಂದು ಹೇಳಿದರೆ ಕೋಪ ಬರುವಂತೆ ಬಿಜೆಪಿ ಮುಖಂಡರಿಗೆ ಕೋಪ ಬರುತ್ತಿದೆ. ನಾನು ತಿನ್ನುವುದಿಲ್ಲ ತಿನ್ನಲು ಬಿಡುವುದಿಲ್ಲ, ಅಚ್ಚೇ ದಿನ್, ರೈತರ ಆದಾಯ ದ್ವಿಗುಣ ಎಲ್ಲವೂ ಸಹ ಈಗ ಸುಳ್ಳು ಭರವಸೆ ಎನ್ನುವುದು ಈಗ ಇಡೀ ದೇಶದ ಜನರಿಗೆ ಅರಿವಾಗಿದೆ. ರಾಜ್ಯದ ಜನರು ಮೋದಿ ಅವರ ಸುಳ್ಳೀನ ಘೋಷಣೆಗಳಿಗೆ ಮರುಳಾಗುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಜನಾರ್ಶೀವಾದದ ಮೂಲಕ ಅಧಿಕಾರಕ್ಕೆ ಬಂದಿಲ್ಲ. ಶಾಸಕರನ್ನು ಖರೀದಿಸುವ ಮೂಲಕ ಅನಿನೈತಿಕವಾಗಿ ಅಧಿಕಾರಕ್ಕೆ ಬಂದಿರುವ ಸರ್ಕಾರವಾಗಿದೆ. ರಾಜ್ಯದಲ್ಲಿ ಎಂದೂ ಸಹ ಸ್ವಂತ ಶಕ್ತಿಯ ಮೇಲೆ ಆಡಳೀತಕ್ಕೆ ಬಂದಿಲ್ಲ, ಮುಂದೆಯೂ ಬರುವುದಿಲ್ಲ.

ಕುಮಾರಸ್ವಾಮಿ ಅವರು ಗೆದ್ದ ಎತ್ತಿನ ಬಾಲ ಹಿಡಿಯುವ ಮೂಲಕ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಗೇಲಿ ಮಾಡಿದರು.

ಮನೆ ಮನೆಗೆ ತಲುಪಿಸಿ ಪಾಪದ ಪುರಾಣ: ರಾಜ್ಯದಲ್ಲಿ ಬಿಜೆಪಿ ಶೇ 40 ರಷ್ಟು ಕಮಿಷನ್ ಪಡೆಯುವ ಮೂಲಕ ನಡೆಸಿರುವ ಭ್ರಷ್ಟಾಚಾರದ ಆರೋಪ ಪಟ್ಟಿಯನ್ನು ಒಳಗೊಂಡಿರುವ ಬಿಜೆಪಿ ಪಾಪದ ಪುರಾಣ ಪುಸ್ತಕವನ್ನು ರಾಜ್ಯದ ಎಲ್ಲಾ ಮತದಾರರ ಮನೆಗಳಿಗೆ  ಕಾಂಗ್ರೆಸ್ ಕಾರ್ಯಕರ್ತರು ತಲುಪಿಸಬೇಕು. ಬಿಜೆಪಿ ಮುಖಂಡರು ನಾವು ಹೇಳುವ ಸತ್ಯವನ್ನು ಸಹಿಸಿಕೊಳ್ಳದೇ ನನ್ನ ಮೇಳೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಇಷ್ಟು ದಿನಗಳ ಕಾಲ ಬಿಜೆಪಿ ರಾಜ್ಯ ನಾಯಕರು ಬಾಯಿಗೆ ಕಡುಬು ತುರುಕಿಕೊಂಡವರಂತೆ ಏಕೆ ಸುಮ್ಮನೇ ಇದ್ದರು ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಲಾಡಿ ಮನುಷ್ಯ. ನಮ್ಮ ಪಕ್ಷದಿಂದ ಮಾರಾಟವಾಗಿ ಓಡಿ ಹೋಗಿರುವ ಶಾಸಕರಿಂದಲೇ ನನ್ನ ಮೇಲೆ ಆರೋಪ ಮಾಡಿಸುತ್ತಿದ್ದಾರೆ. ಆಲಿ ಬಾಬಾ 40 ಜನ ಕಳ್ಳರಂತೆ ಬಿಜೆಪಿ ನಾಯಕರು ಎಂದು ದೂರಿದರು.

50 ಕ್ವಿಂಟಾಲ್ ರಾಗಿ ಖರೀದಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪ್ರತಿ ರೈತರಿಂದಲೂ 50 ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗುವುದು. ವಿದ್ಯುತ್ ಮಗ್ಗಗಳಿಗೆ ನೇಕಾರರು ಬಳಸುವ 20 ಎಚ್ಪಿ ವರೆಗಿನ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಪಡಿತರದಾರರಿಗೆ 10 ಕೆ.ಜಿ ಉಚಿತವಾಗಿ ಅಕ್ಕಿ ವಿತರಣೆ ಸೇರಿದಂತೆ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗುವ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು ಎಂದರು.

ಕಾಂಗ್ರೆಸ್ ಸಿದ್ದಾಂತ, ಬದ್ದತೆ ಇರುವ ಪಕ್ಷ. ಆದರೆ ಜೆಡಿಎಸ್ ಯಾವುದೇ ಸಿದ್ದಾಂತವನ್ನು ಹೊಂದಿರದ ಪಕ್ಷವಾಗಿದೆ. ರಾಜ್ಯದಲ್ಲಿ ಕೋಮುವಾದಿಗಳು ಅಧಿಕಾರಕ್ಕೆ ಬರುವುದನ್ನು ತಡೆಯುವ ಸಲುವಾಗಿ ಜೆಡಿಎಸ್ ಬೆಂಬಲಿಸಿದ್ದೆವು. ಆದರೆ ನಮ್ಮ ಭದ್ದತೆಯನ್ನು ಉಳಿಸಿಕೊಳ್ಳದೇ ಈಗ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ.

ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಅಭಿವೃದ್ಧಿ ಕಾರ್ಯಗಳನ್ನು ಪುಸ್ತಕ ಮಾಡಿ ಹಂಚುತ್ತಿದ್ದಾರೆ. ಅವರ ಜನಪರ ಕಾಳಜಿಯನ್ನು ನಾವೆಲ್ಲ ನೋಡಿದ್ದೇವೆ. ರೈತರ ಪರವಾಗಿ ಸದನದ ಬಾವಿಗಿಳಿದು ಹೋರಾಟ ನಡೆಸಿದ್ದಾರೆ. ಎಲ್ಲರರನ್ನೂ ಒಂದಾಗಿ ಕೊಂಡೊಯ್ಯುವಂತೆ ಸಲಹೆ ನೀಡಿದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿರುವುದು ಬಿಟ್ಟರೆ ಇಲ್ಲಿಯವರೆಗೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗು ಹಣ ಬಿಡುಗಡೆ ಮಾಡಿಲ್ಲ ಎಂದರು.

ಸಮಾವೇಶದಲ್ಲಿ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಹಿರಿಯ ಕಾಂಗ್ರೆಸ್ ಮುಖಂಡ ಎಂ.ವೀರಪ್ಪಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಾಕ್ಷ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಕೆಪಿಸಿಸಿ ಸದಸ್ಯ ಆರ್.ಜಿ.ವೆಂಕಟಾಚಲಯ್ಯ, ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--