ದೊಡ್ಡಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಕಾರ್ಯಕರ್ತರ ಸಭೆ; ಸಿಎಂ ಬಳಿ ಕಣ್ಣೀರಿಟ್ಟು ಜಿಲ್ಲಾಸ್ಪತ್ರೆ ಉಳಿಸಿದ್ದು ಟಿ.ವೆಂಕಟರಮಣಯ್ಯ ಎಂದ ಮಿನಿಸ್ಟರ್ ಮುನಿಯಪ್ಪ
ದೊಡ್ಡಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಕಾರ್ಯಕರ್ತರ ಸಭೆ; ಸಿಎಂ ಬಳಿ ಕಣ್ಣೀರಿಟ್ಟು ಜಿಲ್ಲಾಸ್ಪತ್ರೆ ಉಳಿಸಿದ್ದು ಟಿ.ವೆಂಕಟರಮಣಯ್ಯ ಎಂದ ಮಿನಿಸ್ಟರ್ ಮುನಿಯಪ್ಪ

ದೊಡ್ಡಬಳ್ಳಾಪುರ, (ಏ.02); ಸರ್ಕಾರ ನೀಡಿದ್ದ ಭರವಸೆಯಂತೆ ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಜನರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟಿದ್ದಾರೆ. ಇಡೀ ದೇಶದಲ್ಲಿ ಇಷ್ಟು ದೊಡ್ಡ ಯೋಜನೆಗಳನ್ನು ಜಾರಿಗೊಳಿಸಿರುವುದು ಕಾಂಗ್ರೆಸ್ ಪಕ್ಷ ಎನ್ನುವುದು ನೆನಪಿಟ್ಟುಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ  ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. 

ಚಿಕ್ಕಬಳ್ಳಾಪುರ ಕ್ಷೇತ್ರದ ಲೋಕಸಭಾ ಚುನಾವಣೆಯ ಅಂಗವಾಗಿ, ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಒಕ್ಕಲಿಗರ ಭವನದಲ್ಲಿ ನಡೆದ  ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಯೋಜನೆಗಳು ರಾಜ್ಯದ 4.5ಕೋಟಿ ಜನತೆಗೆ ಒಂದಲ ಒಂದು ರೀತಿಯಲ್ಲಿ ತಲುಪಿದೆ. ಈ ಬಾರಿ ಪಕ್ಷದ ಪ್ರತಿ ಮುಖಂಡರು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆಯಿಂದ ಮತ ಕೇಳಿ ಎಂದರು. 

ರಾಜ್ಯದ ಮಹಿಳೆಯರಿಗಾಗಿ ವಿಶೇಷ ಯೋಜನೆ ಗೃಹಲಕ್ಷ್ಮಿ, ಶಕ್ತಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ನಿಮ್ಮ ಬೆಂಬಲದ ಅವಶ್ಯಕತೆ ಇದೆ ಎಂದರು.

ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಅವರ ಆಡಳಿತವಧಿಯಲ್ಲಿ ಸರ್ಕಾರಿ ಸೇವೆಗಳನ್ನು ತಾಲೂಕಿನ ಪ್ರತಿ ಗ್ರಾಮಗಳಿಗೆ ಹಾಗೂ ಪ್ರತಿ ಮತದಾರರಿಗೆ ತಲುಪಿಸಿದ ಒಬ್ಬ ನಾಯಕ. ಇಂದು ತಾಲೂಕಿನ ಜಿಲ್ಲಾಸ್ಪತ್ರೆ ಉಳಿಯಲು ಅವರೇ ಕಾರಣ. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಆಸ್ಪತ್ರೆ ಉಳಿವಿಗಾಗಿ ಕಣ್ಣೀರಿಟ್ಟ ನಾಯಕ ಇವರು ಎಂದರು.

ಯುವಕರಿಗೆ ಮನ್ನಣೆ; ಈ ಬಾರಿಯ ಲೋಕಸಭಾ ಚುನಾವಣೆಯ 28 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಯುವಕರಿಗೆ ಮನ್ನಣೆ ನೀಡಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿದೆ. ಯುವ ಮುಖಂಡ ರಕ್ಷಾ ರಾಮಯ್ಯ, ರಾಜಕೀಯ ಹಾಗೂ ಸಮಾಜ ಸೇವೆಯ ಹಿನ್ನಲೆಯಿಂದ ಬಂದವರಾಗಿದ್ದು, ಅವರನ್ನು ಬೆಂಬಲಿಸಬೇಕಿದೆ. ಕಾರ್ಯಕರ್ತರು ಪಕ್ಷದ ಸಂಘಟನೆಗೆ ಕೆಲಸ ಮಾಡಬೇಕಿದೆ ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಮಾತನಾಡಿ, ಕಳೆದ 10 ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರ ದ್ವೇಷ ರಾಜಕಾರಣದಲ್ಲಿ ಸಿಲುಕಿ ಬಿಟ್ಟಿದ್ದು, ಯುವಕರ ಮೇಲೆ ಕೇಸ್ ಗಳನ್ನ ಹಾಕಿ, ಕೋರ್ಟ್ ಕಛೇರಿ ಅಲೆಯುವಂತೆ ಮಾಡಿದ್ರು, ಕಳೆದ 10 ತಿಂಗಳಿಂದ ಚಿಕ್ಕಬಳ್ಳಾಪುರ ಜನರು ನೆಮ್ಮದಿ ಜೀವನ ಮಾಡುತ್ತಿದ್ದಾರೆ ಎಂದು ಡಾ.ಕೆ.ಸುಧಾಕರ್ ವಿರುದ್ಧ ವಾಗ್ಧಾಳಿ ನಡೆಸಿದರು.

ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಎಲ್ಲಾ ಗ್ಯಾರೆಂಟಿ ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇವಲ ಎರಡು ತಿಂಗಳಿನಲ್ಲಿ ಈಡೇರಿಸಿದೆ. ಬಡವರ ಅಭಿವೃದಿಗಾಗಿ ಶ್ರಮಿಸುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷವಾಗಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಮ್ಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತಯಾಚನೆ ಮಾಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ದೊಡ್ಡಬಳ್ಳಾಪುರಕ್ಕೆ ಮೆಟ್ರೋ ರೈಲು ಯೋಜನೆ ಜಾರಿಗೆ ಒತ್ತಾಯಿಸಲಾಗುವುದು. ಎತ್ತಿನಹೊಳೆ ಯೋಜನೆ  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಪೂರ್ಣವಾಗಲಿದೆ.

ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ಹಲವು ಹಗರಣಗಳಲ್ಲಿ ಭಾಗಿಯಾಗಿರುವ ಆರೋಪಗಳು ಕೇಳಿ ಬರುತ್ತಿದೆ. ಎರಡು ವರ್ಷದಲ್ಲಿ ಸಾವಿರಾರು ಕೋಟಿ ಹಗರಣ ನಡೆದಿರುವ ಬಗ್ಗೆ ಸ್ವಪಕ್ಷದವರೇ ಆರೋಪವನ್ನ ಮಾಡುತ್ತಿದ್ದು, ಬಿಜೆಪಿ ಕಾರ್ಯಕರ್ತರಿಂದಲೇ ತಿರಸ್ಕಾರಗೊಂಡಿದ್ದಾರೆ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕರಮಣಯ್ಯ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಸರ್ಕಾರದ ಅವಯಲ್ಲಿಯೇ ಕೆಲಸಗಳಾಗಿದ್ದು, ಈಗ ಮತ್ತೆ 25 ವರ್ಷ ಹಿಂದಕ್ಕೆ ಹೋಗಿದೆ. ಎತ್ತಿನಹೊಳೆ ಯೋಜನೆ, ಕೆ.ಸಿ.ವ್ಯಾಲಿ ಅಲ್ಲದೇ ವೃಷಭಾವತಿ ಯೋಜನೆಗಳು ಜಾರಿಯಾಗಿವೆ. 

ಜಿಲ್ಲಾಸ್ಪತ್ರೆಗಾಗಿ ನಾನು ಸತತ ಹೋರಾಟ ನಡೆಸಿದ್ದೆ. ಆದರೆ ಈ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದೆ ಎಂದು ಈಗಿನ ಶಾಸಕರು ಹೇಳುತ್ತಿದ್ದಾರೆ. ಈಗ ಜಿಲ್ಲಾಸ್ಪತ್ರೆ ಮಂಜೂರು ಮಾಡಲು ಕೆ.ಎಚ್.ಮುನಿಯಪ್ಪ ಅವರು ಕಾರಣರಾಗಿದ್ದಾರೆ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ರವಿ,  ಹಿರಿಯ ಮುಖಂಡರಾದ ಡಾ.ರಾಮೋಜಿಗೌಡ, ಸಿ.ಡಿ.ಸತ್ಯನಾರಾಯಣ ಗೌಡ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....