ವಿಜಯೇಂದ್ರಗೂ ಅಂಜಲ್ಲ ಅವರ ಅಪ್ಪನಿಗೂ ಅಂಜಲ್ಲ; ಮತ್ತೆ ಸಿಡಿದ ಯತ್ನಾಳ್
ವಿಜಯೇಂದ್ರಗೂ ಅಂಜಲ್ಲ ಅವರ ಅಪ್ಪನಿಗೂ ಅಂಜಲ್ಲ; ಮತ್ತೆ ಸಿಡಿದ ಯತ್ನಾಳ್

ರಾಣೆಬೆನ್ನೂರು, (ಫೆ.11): ಇತ್ತೀಚೆಗಷ್ಟೇ ಪ್ರಹ್ಲಾದ್​ ಜೋಶಿ ಕಚೇರಿಯಲ್ಲಿ ಅಕ್ಕಪಕ್ಕದ ಚೇರ್ ನಲ್ಲಿ ಕುಳಿತಿದ್ದ ಯತ್ನಾಳ್ -ವಿಜಯೇಂದ್ರ ನಡುವೆ ಎಲ್ಲವೂ ಸರಿಹೋಗಿದೆ ಎನ್ನಲಾಗುತ್ತಿರುವ ಬೆನ್ನಲ್ಲೆ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜೊತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಾಗ್ದಾಳಿ ಮಾಡಿದ್ದಾರೆ. 

ತಾಲೂಕಿನ ಕೋಡಿಯಾಲ ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪ್ಪ-ಮಕ್ಕಳ ಜೊತೆಗೆ ನಾನು ರಾಜಿಯಾಗಬೇಕಾ? ನನಗೆ ರಾಜಿ ಅವಶ್ಯಕತೆ ಇಲ್ಲ. ಬಿ.ವೈ.ವಿಜಯೇಂದ್ರನಿಂದ ನನಗೇನೂ ಆಗಬೇಕಾಗಿಲ್ಲ. ವಿಜಯೇಂದ್ರ ಜತೆ ನನ್ನದು ಯಾವುದೇ ವ್ಯವಹಾರವಿಲ್ಲ ಎಂದು ವಾಗ್ದಾಳಿ ಮುಂದುವರಿಸಿದ್ದಾರೆ.

ದೆಹಲಿಯ ಸಂಸತ್​ ಭವನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕಚೇರಿಗೆ ನಾನು ಹೋಗಿದ್ದೆ. ಅದೇ ವೇಳೆ ಆ ಮನುಷ್ಯನು ಅಲ್ಲಿ ಬಂದು ಕೂತಿದ್ದ, ಭೇಟಿಯಾಗಿದ್ದಾನೆ. ಬಿ.ವೈ.ವಿಜಯೇಂದ್ರರಿಂದ ಬಸನಗೌಡ ಯತ್ನಾಳ್​ಗೆ ಏನೂ ಆಗಬೇಕಿಲ್ಲ. ಭವಿಷ್ಯದಲ್ಲೂ ಏನು ಆಗಬೇಕಿಲ್ಲ.

ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗಬೇಕಷ್ಟೇ. ವಿಜಯೇಂದ್ರ ಅವರ ಉದ್ದೇಶ ಏನು. ವಿ.ಸೋಮಣ್ಣ ಅವರ ಮೇಲೆ ಏನು ಮಾಡಿದ್ದಾರೆ? ವಿಜಯಪುರದಲ್ಲಿ ಏನ್ ಮಾಡಿದ್ದಾರೆ ಎಲ್ಲಾ ಗೊತ್ತು. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೋಲಿಸುವುದಕ್ಕೆ ಏನು ಮಾಡಿದ್ದಾರೆ. ಇವರ ಎಲ್ಲಾ ಇತಿಹಾಸ ಗೊತ್ತಿದೆ. ಲೋಕಸಭೆ ಚುನಾವಣೆ ಬಳಿಕ ಹೇಳುತ್ತೇನೆ ಎಂದು ಮತ್ತೆ ವಿಜಯೇಂದ್ರ ವಿರುದ್ಧ ಅಟ್ಯಾಕ್ ಮಾಡಿದ್ದಾರೆ.​​

ಹೆದರಿಕೊಂಡು ಓಡಿ ಹೋಗಿ ರಾಜಿ ಆದ ಅನ್ನಬೇಡಿ. ವಿಜಯೇಂದ್ರಗೂ ಅಂಜಲ್ಲ ಅವರ ಅಪ್ಪನಿಗೂ ಅಂಜಲ್ಲ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ನಾವೇನು ಬೇರೆಯವರಿಗೆ ಓಟ್ ಹಾಕು ಅಂತ ಹೇಳಲ್ಲ. ಅವರನ್ನು ಕೇಳಿ ಯಾರ್ಯಾರಿಗೆ ಓಟ್ ಹಾಕಬೇಡಿ ಅಂತ ಹೇಳಿದ್ದರು. ಸೋಮಣ್ಣನ ಎರಡು ಕಡೆ ನಿಲ್ಲಿಸಿ ಕೆಡವಿದರು. ನನ್ನನ್ನು, ಬೊಮ್ಮಾಯಿಯನ್ನು ಸೋಲಿಸುವುದಕ್ಕೆ ಎಷ್ಟೆಷ್ಟು ದುಡ್ಡು ಕಳಿಸಿದರು ಗೊತ್ತಿದೆ ಎಂದು ಆರೋಪಿಸಿದರು.

ವಿಜಯೇಂದ್ರ ನೇತೃತ್ವದಲ್ಲಿ ಇಲ್ಲಿ ಚುನಾವಣೆಗೆ ಹೋಗುತ್ತಿಲ್ಲ. ಇಲ್ಲಿ ವಿಜಯೇಂದ್ರ ಪ್ರಶ್ನೆನೇ ಬರಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಹೋಗುತ್ತೇವೆ. ವಿಜಯೇಂದ್ರ ಬರಲಿ, ಬಿಡಲಿ ನಾವು ಗೆದ್ದೇ ಗೆಲ್ಲುತ್ತೇವೆ. ಇದು ನರೇಂದ್ರ ಮೋದಿಯವರ ನೇತೃತ್ವದ ಚುನಾವಣೆ. ರಾಮನ ಆಶೀರ್ವಾದದ ಮೇಲೆ‌ ನಡೀತಿರುವ ಚುನಾವಣೆ ಎಂದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....