ಹರಿತಲೇಖನಿ ದಿನಕ್ಕೊಂದು ಕಥೆ: ವಿದುರನ ಶಸ್ತ್ರಸಂನ್ಯಾಸ
ಹರಿತಲೇಖನಿ ದಿನಕ್ಕೊಂದು ಕಥೆ: ವಿದುರನ ಶಸ್ತ್ರಸಂನ್ಯಾಸ

ಪಾಂಡವರು ಹನ್ನೆರಡು ವರ್ಷ ವನವಾಸವನ್ನು ಒಂದು ವರ್ಷ  ಅಜ್ಞಾತವಾಸವನ್ನು ಮುಗಿಸಿ ಬಂದರು. ಷರತ್ತಿನಂತೆ ಅವರ ಪಾಲಿನ ಅರ್ಧರಾಜ್ಯವನ್ನು ಕೌರವರು ಕೊಡಬೇಕು. ಆದರೆ ದುರ್ಯೋಧನ ಕೊಡುವುದಿಲ್ಲ ಸಂಧಾನ ಮಾಡಿಕೊಳ್ಳಬೇಕು. ಪಾಂಡವರು ಕೃಷ್ಣನ ಜೊತೆ ಕುಳಿತು ಮಾತುಕತೆ ನಡೆಸಿ ಅದರಂತೆ ಕೃಷ್ಣನೇ ಇದರ ರಾಯಭಾರಿಯಾಗಿ ಹೋಗಿ ಸಂಧಾನ ನಡೆಸಬೇಕು ಎಂದು ತೀರ್ಮಾನಿಸಿದರು.

ಒಂದು ಶುಭ ದಿನ ಕೃಷ್ಣನು ಸೂರ್ಯೋದಯಕ್ಕೂ ಮುನ್ನವೇ ಸ್ನಾನ, ಸಂಧ್ಯಾವಂದನೆ, ಪ್ರಾತರ್ವಿಧಿಗಳನ್ನು ಮುಗಿಸಿ ಸಾರಥಿಯೋಡನೆ ರಥದಲ್ಲಿ ಕುಳಿತು ಪಾಂಡವರಿಂದ ಬೀಳ್ಕೊಂಡು ಹಸ್ತಿನಾಪುರಕ್ಕೆ ಬರುತ್ತಿದ್ದಾನೆ. ಒಂದಷ್ಟು ದೂರ ಬಂದ ಮೇಲೆ ಸಣ್ಣ ಸಣ್ಣ ಸಂಸ್ಥಾನದ ರಾಜರುಗಳೆಲ್ಲ ಬಂದು ಕೃಷ್ಣನನ್ನು ಸ್ವಾಗತಿಸಿ ಅತಿಥಿ ಸತ್ಕಾರಕ್ಕಾಗಿ ಆಹ್ವಾನಿಸುತ್ತಾರೆ.ಕೃಷ್ಣನು ಮುಗುಳ್ನಗೆಯಿಂದಲೇ ಸತ್ಕಾರ ಗಳನ್ನು ಇನ್ನೂಮ್ಮೆ ಸ್ವೀಕರಿಸುತ್ತೇನೆ ಎಂದು ಹೇಳಿ ಅವರಿಂದ ಬೀಳ್ಕೊಂಡು ಹಸ್ತಿನಾಪುರದ ದ್ವಾರದ ಸಮೀಪ ಬಂದಿದ್ದಾನೆ.

ಕೃಷ್ಣನನ್ನು ಸ್ವಾಗತಿಸಲು ಅರಮನೆಯ ಪ್ರಮುಖರಾದ ಭೀಷ್ಮ, ದ್ರೋಣ, ವಿದುರ, ಕೃಪಾಚಾರ್ಯರು ನಿಂತಿದ್ದರೆ, ಕೃಷ್ಣನನ್ನು ನೋಡಲು ಹಸ್ತಿನಾಪುರದ ಜನಸ್ತೋಮವೇ ಕಾತರಿಸಿ ಕಾಯುತ್ತಿದೆ. ಕುದುರೆಯ ಖರಪುಟದ ಸದ್ದು ಕೇಳಿಸಿತು. ರಥದಲ್ಲಿ ವಿರಾಜಮಾನನಾಗಿ ಕುಳಿತಿದ್ದ ಕೃಷ್ಣನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಕೃಷ್ಣ ಬರುತ್ತಿರುವ ಹಾದಿಯ ಬದಿಯಲ್ಲಿ ವಿದುರನ ಮನೆಯಿದ್ದು ಕೃಷ್ಣ ಬರುವುದನ್ನು ಕಂಡು ಆನಂದಭಾಷ್ಪ ಸುರಿಸುತ್ತಾ ಉದ್ವೇಗವನ್ನು  ತಡೆದುಕೊಳ್ಳಲಾರದೆ ಕೃಷ್ಣ, ವಾಸುದೇವ, ಶ್ರೀಹರಿ, ಅಚ್ಯುತ, ಅನಂತ, ಗೋವಿಂದ ಎಂದು ಆವೇಶಗೊಂಡವನಾಗಿ  ತನ್ನ ಮನೆಯೇ ಮುರಿದು ಬೀಳುವುದೋ ಎಂಬಂತೆ ಮೈಮರೆತು ಕುಣಿಯುತ್ತಿದ್ದಾನೆ ಇದನ್ನು ಗಮನಿಸಿದ ಕೃಷ್ಣ ಮುಗುಳ್ನಗುತ್ತಾ ಬರುತ್ತಿದ್ದಂತೆ ಭೀಷ್ಮದ್ರೋಣ ಕೃಪಾಚಾರ್ಯರು ಬಂದು ಅವನನ್ನು ಸ್ವಾಗತಿಸಿದರು. ಕ್ಷೇಮ ಸಮಾಚಾರವನ್ನು ವಿಚಾರಿಸಿ ಉಭಯ ಕುಶಲೋಪರಿಯ ನಂತರ ಭೀಷ್ಮ,ದ್ರೋಣರು ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಎಲ್ಲರೂ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ ನಾಳೆ ದಿನ ಬನ್ನಿ ಎಂದು ಕಳುಹಿಸಿದರು.

ಆನಂತರ ಕೃಷ್ಣನನ್ನು ಕೌರವನ ಅರಮನೆಗೆ ಅತಿಥಿ ಸತ್ಕಾರಕ್ಕೆ ಕರೆದಾಗ ಕೃಷ್ಣನು ವಿದುರನ ಮನೆಯಲ್ಲಿ ಇರುತ್ತೇನೆ ನಾಳೆ ಅರಮನೆಗೆ ಬರುತ್ತೇನೆ ಎಂದು ಹೇಳಿ, ಮೈಮರೆತು ಕುಣಿಯುತ್ತಿದ್ದ ವಿದುರನ ಕಡೆ ನೋಡಿದ ಕೃಷ್ಣನು, ಅಟ್ಟದ ಮುಚ್ಚಿಗೆಗಳೆಲ್ಲ ಮುರಿದು ಬೀಳುವಂತೆ, ಭೂಮಿ ನಡುಗುವಂತೆ ಕುಣಿಯುತ್ತಲೇ ಇರುವೆಯಾ.? ಅಥವಾ ದೂರದಿಂದ ಬಂದ ನನ್ನ ಹಸಿವು ಬಾಯಾರಿಕೆಗೆ ಏನಾದರೂ ಕೊಡುವೆಯಾ.? ನಾನು ಬರುವ ಹಾದಿಯಲ್ಲಿ ರಾಜರುಗಳು ಅತಿಥಿ ಸತ್ಕಾರಕ್ಕೆ ಕರೆದರೂ ಎಲ್ಲಿಯೂ ಸ್ವೀಕರಿಸದೆ ನಿನ್ನ ಮನೆಗೆ ಬಂದರೆ ನೀನು ನನ್ನ ನೋಡಿ ಕುಣಿದಾಡಿದರೆ, ನನ್ನ ಹಸಿವು ಬಾಯಾರಿಕೆಗಳು ಕಡಿಮೆಯಾಗುವುದೇ? ಎಂದು ಕೇಳಿದಾಗ ನಾಚಿಕೆಯಿಂದ ತಲೆ ತಗ್ಗಿಸಿದ ವಿದುರನನ್ನು ತಾನೇ ಅವನ ಮನೆಯೊಳಗೆ ಕರೆದೊಯ್ದನು.

ವಿದುರನು  ಕೃಷ್ಣನ ಕೈಹಿಡಿದು ತೂಗು ಮಂಚದ ಮೇಲೆ ಕೂರಿಸಿದನು. ಪ್ರೀತಿ ವಾತ್ಸಲ್ಯಗಳಿಂದ ಅವನ ಪಾದ ಕಮಲವನ್ನು ತೊಳೆದು, ಕುಡಿಯಲು ಒಂದು ಕುಡತೆಯಲ್ಲಿ ಸಿಹಿಯಾದ ಹಾಲನ್ನು ಕೊಟ್ಟನು. ಕೃಷ್ಣ ಆನಂದ ಭರಿತನಾಗಿ ಕುಡುತೆ ಹಾಲನ್ನು ಗುಟುಕರಿಸಿ ಕುಡಿಯುತ್ತಿದ್ದಾಗ ಒಂದು ಹುಂಡು ಹಾಲು ಕಟ ಬಾಯಿಂದ ಇಳಿದು ಬಂದು ಹರಿಯ ಪಾದ ಕಮಲಗಳಿಂದ  ಮುಂದೆ ಹರಿಯುತ್ತಾ ಹೋಯಿತು. ಹೀಗೆ ಹರಿದ ಹಾಲು  ಹಸ್ತಿನಾಪುರದ ತುಂಬಾ ಹರಿದು ಕ್ಷೀರ ಸಾಗರದಂತೆ ಅರಮನೆಯ ಮುಂದೆ ಬರುತ್ತಿರುವುದನ್ನು ನೋಡಿದ ಭೀಷ್ಮ, ದ್ರೋಣ, ಕೃಪಾದಿಗಳು  ಕ್ಷೀರಸಾಗರ ಶಯನ ಶೇಷಶಾಯಿ ಶ್ರೀಕೃಷ್ಣನೇ ಧರೆಗೆ ಇಳಿದು ಬಂದಿದ್ದರಿಂದ ಕ್ಷೀರಸಾಗರವೇ ಹರಿದು ಬರುತ್ತಿದೆ. ಎನ್ನುತ್ತಾ ಜನರು ಶ್ರೀ ಕೃಷ್ಣನ ಮಹಿಮೆಯನ್ನು ಹರ್ಷೋದ್ಗಾರಗೈಯ್ಯುತ್ತಾ ಭಗವಂತನಿಗೆ ನಮಸ್ಕರಿಸಿದರು.

ಕೃಷ್ಣನು ತನ್ನ ಅರಮನೆಗೆ ಬರದೇ ವಿದುರನ ಮನೆಗೆ ಹೋಗಿರುವುದನ್ನು ತಿಳಿದ ದುರ್ಯೋಧನನಿಗೆ ಅವಮಾನವಾಗಿ ಕ್ರೋಧದಿಂದ ಮನಸ್ಸಿನಲ್ಲಿಯೇ ಕುದಿಯುತ್ತಿದ್ದನು. ಆದರೂ ತೋರಿಸಿಕೊಳ್ಳದೆ ನಾಳೆ ಸಭೆ ಕರೆಯುವುದರ ಕುರಿತು ಹಿರಿಯರ ಜೊತೆ ಮಾತನಾಡಿ ಸಭೆ ಕರೆಯಲು ತೀರ್ಮಾನಿಸಿದನು. 

ಮರುದಿನ ಬೆಳಗ್ಗೆ ಒಂಬತ್ತು ಗಂಟೆಗೆ ಸಭೆ ಕರೆದಿರುವುದಾಗಿ ಕೃಷ್ಣನು ಪಾಂಡವರ ಸಂಧಾನದ ಕುರಿತು ಮಾತುಕತೆಯಾಡಲು  ಬರಬೇಕೆಂದು ಭಟರ ಕೈಯಲ್ಲಿ ವೀಳ್ಯವನ್ನು ಕೃಷ್ಣನಿಗೆ ಕೊಡುವಂತೆ ಕರೆ ಕಳುಹಿಸಿದನು.

ಕೌರವರ ಭಟರು ವಿದುರನ ಮನೆಗೆ ಬಂದು  ವೀಳ್ಯದೂಂದಿಗೆ ಆಹ್ವಾನವನ್ನು ಕೊಟ್ಟರು. ನಂತರ ಕೃಷ್ಣನು ವಿದುರನಲ್ಲಿ ಈ ರೀತಿ ಹೇಳಿದನು, ವಿದುರ ಎಷ್ಟು ಮಾತ್ರಕ್ಕೂ ದುರ್ಯೋಧನನು ರಾವಣನಂತೆ ದುಷ್ಟನಿರುವನು ಪಾಂಡವರ ಜೊತೆ ಸಂಧಿ ಮಾಡಿಕೊಳ್ಳುವ ವಿಚಾರವನ್ನು ಒಪ್ಪಲಾರನು ಎಂದು ಹೇಳಿ ಮರುದಿನ ಸಭೆಯ ಕುರಿತು ಯೋಚಿಸುತ್ತಾ ಕೃಷ್ಣನು ಮಲಗಿದನು.

ಮರುದಿನ ಸಮಯಕ್ಕೆ ಸರಿಯಾಗಿ ಕೃಷ್ಣನು ವಿದುರನ ಜೊತೆ ಸಭೆಗೆ ಹೊರಟನು.  ಸಭೆಯಲ್ಲಿದ್ದ ಎಲ್ಲರೂ ಕೃಷ್ಣನನ್ನು ಕಂಡು ನಮಸ್ಕರಿಸಿ ಗೌರವ ಸೂಚಿಸಿದರು. ಆದರೆ ದುರಹಂಕಾರಿ ದುರ್ಯೋಧನ ಮಾತ್ರ ಸಿಂಹಾಸನ ಬಿಟ್ಟೆಳಲಿಲ್ಲ ಕುಳಿತೇ ಇದ್ದನು. ಇದನ್ನು ಗಮನಿಸಿದ ಕೃಷ್ಣನು ತನ್ನ ಬಲಗಾಲ ಹೆಬ್ಬೆರಳ ತುದಿಯನ್ನು ಭೂಮಿಗೆ ಒತ್ತಿದನು ದುರ್ಯೋಧನ ಕುಳಿತಿದ್ದ ಸಿಂಹಾಸನದ ಕಾಲು ಕಳಚಿ ಮುಗ್ಗರಿಸಿ ಬೀಳುತ್ತ ಕೃಷ್ಣನ ಕಾಲಬುಡದಲ್ಲಿ ಬಿದ್ದನು. ನಗುತ್ತಾ ಕೃಷ್ಣನು ದುರ್ಯೋಧನನನ್ನು ಮೇಲೆತ್ತಿ ನೀನೇಕೆ ಬಂದು ನನ್ನ ಕಾಲ ಮೇಲೆ ಬಿದ್ದೆ ನಾನೇ ಬರುತ್ತಿದ್ದೇನಲ್ಲ ಎಂದಾಗ ಹಲ್ಲು ಕಡಿಯುತ್ತಾ ದುರುಗುಟ್ಟಿ ಕೃಷ್ಣನನ್ನು ನೋಡುತ್ತ ನಿನಗಾಗಿ ನೆನ್ನೆ ಅರಮನೆಯಲ್ಲಿ ಸಕಲ ಭಕ್ಷ  ಭೋಜ್ಯಗಳನ್ನು ಮಾಡಿಕೊಂಡು ಕಾಯುತ್ತಿದ್ದೆವು ಆದರೆ ನೀನು ನಮ್ಮಲ್ಲಿಗೆ ಬರಲಿಲ್ಲ ಹೋಗಲಿ ನಮ್ಮಲ್ಲಿಗೆ ಬೇಡವೆಂದರೆ ಭೀಷ್ಮರು, ದ್ರೋಣಾಚಾರ್ಯರ ಮನೆಗೆ ಬರಬಹುದಿತ್ತಲ್ಲ ಹಾಗೆ ಮಾಡದೆ ವಿದುರನ ಮನೆಗೆ ಹೋದೆಯಲ್ಲ ಎಂದು ಕೇಳಿದಾಗ ,ನಗುತ್ತಾ ಕೃಷ್ಣನು ನಾನು ಪಾಂಡವರ ಪರವಾಗಿ ಸಂಧಾನ ಮಾಡುವುದಕ್ಕೆ ಬಂದಿದ್ದೇನೆ ಪಾಂಡವರ ವೈರಿಗಳ ಮನೆಯಲ್ಲಿ ಊಟ ಮಾಡುವುದು ಉಚಿತವಲ್ಲ ಭೀಷ್ಮದ್ರೋಣರು ನಿಮ್ಮ ಅರಮನೆಯ ಋಣದಲ್ಲಿ ಇರುವರು ಹೀಗಿರುವಾಗ ನಾನು ನಿಮ್ಮಲ್ಲಿ ಬರುವುದು ಸರಿಯಲ್ಲ ಎಂದನು.

ಸಿಟ್ಟಿನಲ್ಲಿದ್ದ ದುರ್ಯೋಧನನು ವ್ಯಂಗ್ಯವಾಗಿ ಹೌದು ಅರಮನೆಯ ಭಕ್ಷ ಭೋಜ್ಯಗಳು  ನಿನಗೆ ರುಚಿಸುವುದಿಲ್ಲ. ನೀನು ಗೊಲ್ಲರವನು ನಿನಗೂ ದಾಸೀಪುತ್ರ ವಿದುರನೀಗೂ ಸರಿಯಾದ ಜೋಡಿ ಎಂದು ಗಹಗಹಿಸಿದನು. ಇದನ್ನು ಕೇಳಿದ ವಿದುರನು ಕೋಪದಿಂದ ಹಲ್ಲು ಕಡಿಯುತ್ತಾ ದುರ್ಯೋಧನ ನೀನು ಈ ರೀತಿ ಅವಮಾನ ಮಾಡುತ್ತಿದ್ದೀಯಾ?ಕೇಳು ಮುಂದೆ ನಡೆವ ಯುದ್ಧದಲ್ಲಿ ನಿನ್ನನ್ನು ರಕ್ಷಿಸಬೇಕೆಂದು ಕಠಿಣ ತಪಸ್ಸು ಮಾಡಿ ಶಿವನಿಂದ ಬಿಲ್ಲನ್ನು ಪಡೆದಿದ್ದೇ. ಇನ್ನು ಇದರ ಅಗತ್ಯವಿಲ್ಲ ಎಂದು ಹೇಳಿ ಎಲ್ಲರೆದುರು ಬಿಲ್ಲನ್ನು ಮುರಿದು ಹಾಕಿ ಇನ್ನು ಮುಂದೆ ಯಾವುದೇ ಶಸ್ತ್ರವನ್ನು ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡುವದರೊಂದಿಗೆ ಶಸ್ತ್ರ ಸನ್ಯಾಸವನ್ನು ಕೈಗೊಂಡನು. ಆ ಕ್ಷಣವೇ ದುರ್ಯೋಧನನ ರೋಷಾವೇಶ ಇಳಿಯಿತು. ಭೀಷ್ಮ, ದ್ರೋಣ, ಧೃತರಾಷ್ಟ್ರ, ಗಾಂಧಾರಿ ನಡೆದ ಘಟನೆಗೆ ಬೆದರಿ ಮಮ್ಮಲ ಮರುಗಿದರು. ಆದರೆ ಕೃಷ್ಣ ಮಾತ್ರ ನಗುತ್ತಿದ್ದನು.

ಸಭೆ ಆರಂಭವಾಯಿತು ಸಂಧಿಕಾರ್ಯ ದಂತೆ ಕೃಷ್ಣನು ಪಾಂಡವರಿಗೆ ಅರ್ಧರಾಜ್ಯವನ್ನು ಕೊಡುವಂತೆ ಕೇಳಿದನು ದುರ್ಯೋಧನನು ಅದಕ್ಕೆ ಒಪ್ಪಲಿಲ್ಲ. ಐದು ಗ್ರಾಮಗಳನ್ನಾದರೂ ಕೊಡುವುದೆಂದರೆ ಅದಕ್ಕೂ ಒಪ್ಪಲಿಲ್ಲ. ಕೊನೆಯದಾಗಿ ಒಂದು ಗ್ರಾಮವನ್ನಾದರೂ ಕೊಡು ಎಂದು ಕೇಳಿದರೆ, ಒಂದು ಗ್ರಾಮವಿರಲಿ ಒಂದುಹುಲ್ಲುಕಡ್ಡಿ ಮೊನೆಯಷ್ಟು ಜಾಗವನ್ನು ಪಾಂಡವರಿಗೆ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದು ಯುದ್ಧಕ್ಕೆ ನಾಂದಿಯಾಯಿತು.

ಕೃಷ್ಣನು ಅಂದುಕೊಂಡಿದ್ದ ಕೆಲಸಗಳೆಲ್ಲವೂ ಈಡೇರಿತು. ಸಂಧಾನಕ್ಕೆ ದುರ್ಯೋಧನ ಒಪ್ಪುವುದಿಲ್ಲವೆಂದು ಮೊದಲೇ ಗೊತ್ತಿತ್ತು ಈ ನೆಪದಲ್ಲಿ ದುರ್ಯೋಧನನ ಅಹಂಕಾರವನ್ನು ಮುರಿದನು. ವಿದುರನ ಕೈಯಿಂದ ಶಸ್ತ್ರಸಂನ್ಯಾಸ ಮಾಡಿಸಿದನು.

ಕೃಪೆ: ಅಂತರ್ಜಾಲತಾಣ. ಸಂಗ್ರಹ: ನರಸಿಂಹಮೂರ್ತಿ ಬರಗೂರು.                                  

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ....