ಹರಿತಲೇಖನಿ ದಿನಕ್ಕೊಂದು ಕಥೆ: ಯಾರಿಗೆ ಜೈ ಅನ್ನೋದು ?
ಹರಿತಲೇಖನಿ ದಿನಕ್ಕೊಂದು ಕಥೆ: ಯಾರಿಗೆ ಜೈ ಅನ್ನೋದು ?

ಅಂದು ಆ ಕಾಡಿನಲ್ಲಿ ಬೆಳ್ಳಂಬೆಳಗ್ಗೆ ಗದ್ದಲದ ವಾತಾವರಣ. ಸದ್ದು ಜೋರಾಗಿತ್ತು. ವಾಯುವಿಹಾರಕ್ಕೆಂದು ಬಂದಿದ್ದ ಕಾಡಿನ ರಾಜ ಸಿಂಹ ಮತ್ತು ಮಂತ್ರಿ ನರಿ ಗದ್ದಲದ ಕಾರಣ ತಿಳಿಯಲು ಅತ್ತ ಧಾವಿಸಿದರು. ಸಣ್ಣಪುಟ್ಟ ಪ್ರಾಣಿ, ಪಕ್ಷಿ, ಗಿಡ, ಮರ, ಹರಿಯುವ ನೀರು, ಕಣ್ಣಿಗೆ ಕಾಣದ ಗಾಳಿ, ಬೆಳಕು ಎಲ್ಲವೂ ಒಟ್ಟಾಗಿ ಜೋರು ಚರ್ಚೆಯಲ್ಲಿ ತೊಡಗಿದ್ದವು. ಸ್ವಲ್ಪ ಹೊತ್ತು ರಾಜ ಮತ್ತು ಮಂತ್ರಿ ಇಬ್ಬರೂ ಮೌನವಾಗಿ ಎಲ್ಲವನ್ನೂ ಆಲಿಸುವ ನಿರ್ಧಾರ ಮಾಡಿದರು.

ನಿಮಗೆಲ್ಲ ನನ್ನ ದರ್ಶನವಾದ ಮೇಲೆಯೇ ನೀವು ನಿದ್ರೆಯಿಂದ ಏಳುವುದು, ಆದ್ದರಿಂದ ನೀವೆಲ್ಲ ನನಗೆ ಜೈ ಎನ್ನಬೇಕು ಎಂದು ಬೆಳಕು ಹಠ ಮಾಡಿತು. ಇಲ್ಲ, ನಾನು ಕೂಗಿದ ಮೇಲೆ ನೀನು ಮೂಡುವುದು, ಎಲ್ಲರೂ ಏಳುವುದು, ನಾನೇ ಎಲ್ಲರನ್ನೂ ಎಚ್ಚರ ಗೊಳಿಸುವವ. ನನಗೆ ಜೈ ಎನ್ನಬೇಕು ಎಂದು ಹುಂಜ ಕೂಗಿತು.

ಕೋಗಿಲೆಯಾದಿಯಾಗಿ ಎಲ್ಲ ಪಕ್ಷಿಗಳು, ನಮ್ಮ ಧ್ವನಿಯ ಚಿಲಿಪಿಲಿ ಗಾನಕೆ ಜಗವೇ ಎಚ್ಚರಗೊಂಡು ಖುಷಿಪಡುವುದು, ನಾವೇ ಶ್ರೇಷ್ಠರು, ನಮಗೆ ಜೈ ಎನ್ನಬೇಕು ಎಂದು ವಾದಿಸಿದವು. ಇನ್ನೇನು ನಿದ್ರೆಗೆ ಜಾರಬೇಕು ಎನ್ನುತ್ತಿದ್ದ ಬಾವಲಿಗಳ ರಾಜ ತನ್ನ ಬಳಗದೊಂದಿಗೆ ಬಂದು, ಇಡೀ ರಾತ್ರಿ ಎಚ್ಚರವಾಗೇ ಇರುವ ನಾನು ಮತ್ತು ನನ್ನ ಕುಲವೆಲ್ಲ ನಿಮ್ಮೆಲ್ಲರಿಗಿಂತಲೂ ಶ್ರೇಷ್ಠ. ಯಾಕೆ ಅರ್ಥವಿಲ್ಲದ ವಾದ ಮಾಡುವಿರಿ? ಸುಮ್ಮನೇ ನಮಗೆ ಜೈ ಎಂದು ನಿಮ್ಮ ನಿಮ್ಮ ಕೆಲಸ ನೋಡಿಕೊಳ್ಳಿ, ನಮಗೆ ನಿದ್ರೆ ಬರುತ್ತಿದೆ ಎಂದು ಆಕಳಿಸಿತು.

ಆನೆಯು, ಶಕ್ತಿ ಮತ್ತು ಆಕಾರದಲ್ಲಿ ನಾನು ದೊಡ್ಡವನಲ್ಲದೆ ಆದಿಪೂಜಿತನಾದ ಗಣಪತಿಯ ಪ್ರತಿರೂಪ ನಾನು, ಈ ಕಾಡಿನಲ್ಲಿ ದೇವರಂತೆ ಪೂಜಿಸಬೇಕಾದ ಏಕೈಕ ಜೀವಿ. ನೀವೆಲ್ಲ ನನಗಲ್ಲದೇ ಇನ್ನಾರಿಗೆ ಜೈ ಎನ್ನಲು ಸಾಧ್ಯ? ಎಂದಿತು.

‘ನನ್ನ ನಾಟ್ಯ ಕಂಡು ಇಡೀ ಮಾನವ ಕವಿಕುಲವೆಲ್ಲ ಹಾಡಿ ಹೊಗಳುತ್ತದೆ. ಮೇಲಾಗಿ ಈ ಕಾಡಿನಲ್ಲಿ ನನ್ನಷ್ಟು ಸುಂದರಿ ಬೇರಾರೂ ಇಲ್ಲದಿರುವುದರಿಂದ ಸೌಂದರ್ಯ ಮತ್ತು ಕಲೆ ಎರಡರಲ್ಲೂ ನಾನೇ ಶ್ರೇಷ್ಠ. ಅಲ್ಲದೇ ಸಂತಾನವೃದ್ಧಿಯಲ್ಲೂ ನಾನು ವಿಶೇಷ ಕ್ರಮ ಅನುಸರಿಸುವುದರಿಂದ ನಾನೇ ಪರಮಪವಿತ್ರ ಜೀವಿ. ಎಲ್ಲರೂ ನನಗೆ ಜೈ ಎನ್ನಿ ಎಂದಿತು ನವಿಲು.

ನಾಟ್ಯ ಎಂದಾಕ್ಷಣ ಆಕಾಶದಲ್ಲಿ ತೇಲುತ್ತ ಓಡೋಡಿ ಬಂದ ಮೋಡ, ‘ನಾನು ಮೂಡದೇ ನೀನು ಕುಣಿಯುವುದಾದರೂ ಹೇಗೆ ಸಾಧ್ಯ? ನಿನ್ನ ಕುಣಿತಕೆ ಸ್ಫೂರ್ತಿ ನಾನು. ಸಾಲದ್ದಕ್ಕೆ ನಿಮ್ಮೆಲ್ಲರ ಜೀವ ಉಳಿಸುವ ನೀರು ಪೂರೈಸುವವ ನಾನು. ನೀವು ನನಗೇ ಜೈ ಎನ್ನಿ ಎಂದಿತು.

ಅಲ್ಲೇ ಹರಿಯುತ್ತಿದ್ದ ನೀರು ಜಾಗೃತಗೊಂಡು, ನಾನು ಆವಿಯಾಗಿ ಮೇಲೆ ಹೋಗದಿದ್ದರೆ ಮೋಡ ಕಟ್ಟುವು ದಾದರೂ ಹೇಗೆ? ಮಳೆಯಾಗಿ ಸುರಿದು ಇಳೆ ನಗುವುದಾದರೂ ಹೇಗೆ? ನೀವೆಲ್ಲ ಬದುಕುವುದಾದರೂ ಹೇಗೆ ಸಾಧ್ಯ? ಎಂದಿತು. ಇನ್ನೇನು ಸೂರ್ಯ ಮಾತನಾಡಬೇಕು ಎನ್ನುವಷ್ಟರಲ್ಲಿ ಹೀಗೆ ಚರ್ಚೆ ಮುಂದುವರಿದರೆ ನಮ್ಮನ್ನಾರು ಮಾತನಾಡಿಸುವವರೇ ಇಲ್ಲವೆನ್ನುವಂತಾಗುತ್ತದೆ ಎಂದರಿತ ಸಿಂಹ, ಮಂತ್ರಿ ನರಿರಾಯನಿಗೆ ಈ ಚರ್ಚೆಗೊಂದು ಮುಕ್ತಿ ನೀಡಲು ಹೇಳಿತು.

ನರಿ ಮಾತನಾಡುತ್ತ, ಹೌದು, ಈ ಪ್ರಕೃತಿಯಲ್ಲಿರುವ ನಾವುಗಳೆಲ್ಲ ಒಂದಲ್ಲ ಒಂದು ರೀತಿ ಶ್ರೇಷ್ಠರೇ! ಆದರೆ, ನಾವು ಶ್ರೇಷ್ಠ ಎಂಬ ಭ್ರಮೆಯಲ್ಲಿ ನಮ್ಮತನವನ್ನು ಕಳೆದುಕೊಳ್ಳದಿರುವುದು ವಾಸಿ. ನಾವೆಲ್ಲರೂ ಈ ಸೃಷ್ಟಿಯ ಒಂದು ಭಾಗ ಮಾತ್ರ. ನಾವೆಲ್ಲರೂ ಇಲ್ಲಿ ನೆಪ ಮಾತ್ರ. ಎಲ್ಲವೂ ಆ ಸೃಷ್ಟಿಕರ್ತನ ಮಹಿಮೆ. ಅವನಾಜ್ಞೆ ಇಲ್ಲದೇ ಒಂದು ಹುಲ್ಲುಕಡ್ಡಿಯೂ ಇಲ್ಲಿ ಅಲುಗಾಡದು ಎಂದು ಬುದ್ಧಿವಂತ ಮನುಷ್ಯರೇ ಒಪ್ಪಿಕೊಂಡಿದ್ದಾರೆ. 

ಇನ್ನು ನಾವು ಯಾವ ಲೆಕ್ಕ? ಇಲ್ಲಿ ಯಾರು ಶ್ರೇಷ್ಠರು ಎಂದು ತೀರ್ಮಾನಿ ಸುವುದಕ್ಕಿಂತ ಯಾರೂ ಕನಿಷ್ಠರಲ್ಲ ಎಂದು ನಿರ್ಧರಿಸುವುದು ಸೂಕ್ತ. ಎಂದಿತು. ನರಿಯ ಬುದ್ಧಿವಂತಿಕೆ ಮತ್ತು ತಿಳಿವಳಿಕೆಗೆ ಮೆಚ್ಚಿದ ಅಲ್ಲಿ ನೆರೆದವರೆಲ್ಲರೂ ನರಿರಾಯನಿಗೆ ಜೈ ಎಂದರು. ಸಿಂಹ ನರಿಯ ಮುಖ ನೋಡಿತು. 

ಕೃಪೆ: ಸಾಮಾಜಿಕತಾಣ. (ಬರಹಗಾರರ ಮಾಹಿತಿ ಲಭ್ಯವಾಗಿಲ್ಲ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

politics

HL

others

HL

politics

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime