ಬಿಜೆಪಿಗೆ ತಳಮಳ ತಂದ ಸವದಿ ಹೇಳಿಕೆ: ಪಕ್ಷ ಬಿಡಲು ಸಿದ್ದರಾದರಾ.. ಆ ಅತೃಪ್ತ ನಾಯಕರು..?
ಬಿಜೆಪಿಗೆ ತಳಮಳ ತಂದ ಸವದಿ ಹೇಳಿಕೆ: ಪಕ್ಷ ಬಿಡಲು ಸಿದ್ದರಾದರಾ.. ಆ ಅತೃಪ್ತ ನಾಯಕರು..?

ಬಾಗಲಕೋಟೆ, (ನ.20); ಬಿಜೆಪಿಯಲ್ಲಿನ ಸಾಕಷ್ಟು ಅತೃಪ್ತ ನಾಯಕರು ಸಂಪರ್ಕದಲ್ಲಿದ್ದು, ಜನವರಿ 26ರ ಬಳಿಕ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು. ಆಗ ನೀವೆ ಎಣಿಕೆ ಮಾಡುವಿರಂತೆ ಎಷ್ಟು ನಾಯಕರು ಬಿಜೆಪಿಗೆ ಬರುತ್ತಾರೆ ಎಂದು ಮಾಜಿ ಗೃಹ ಸಚಿವ, ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಕಲ ಸಿದ್ಧತೆ ನಡೆಸಿದ್ದು, ಈ ಬಾರಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಕಸರತ್ತು ನಡೆಸಿದೆ, ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್​ನ ಕೆಲ ಪ್ರಭಾವಿ ನಾಯಕರುಗಳಿಗೆ ಗಾಳ ಹಾಕಿದೆ. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆ, ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತಂತೆ ಅನೇಕ ಪ್ರಮುಖ ನಾಯಕರಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು ಆತಂಕಕ್ಕೆ ಕಾರಣವಾಗಿರುವ ಬೆನ್ನಲ್ಲೇ ಸವದಿ ಅವರ ಈ ಸ್ಪೋಟಕ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಲಕ್ಷ್ಮಣ ಸವದಿ ಅವರು, ಬಿಜೆಪಿಯ ಹಲವು ಮುಖಂಡರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಅವರು ಪಕ್ಷಕ್ಕೆ ಬಂದಮೇಲೆ ಸ್ಥಾನಮಾನ ಬಗ್ಗೆ ಚಿಂತನೆ ಮಾಡಬೇಕು. ಬಿಜೆಪಿಯಿಂದ ಬಂದವರಿಗೆ ಗೊಂದಲ ಹಾಗೂ ಅನ್ಯಾಯ ಆಗಬಾರದು. ಹೀಗಾಗಿ ಸ್ವಇಚ್ಛೆಯಿಂದ ಬರುವವರನ್ನು ಗೌರವದಿಂದ ಬರಮಾಡಿಕೊಳ್ಳುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಕ್ಷೇತ್ರ ಗೆಲ್ಲಲು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕೆ ಈಗಾಗಲೇ ನಾವು ಬ್ಲೂ ಪ್ರಿಂಟ್ ರೆಡಿ ಮಾಡಿದ್ದೇವೆ ಎಂದರು.

ಲಿಂಗಾಯತರನ್ನ ಸೆಳೆಯುವ ಟಾಸ್ಕ್ ಕೊಟ್ಟಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕೇವಲ ಲಿಂಗಾಯತರನ್ನು ಅಷ್ಟೇ ಅಂತ ಅಲ್ಲ. ಕಾಂಗ್ರೆಸ್ ಪಕ್ಷ ಎಲ್ಲ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಿದ್ದಾಂತ ಇದೆ. ಆದರೆ ಬಿಜೆಪಿಯಲ್ಲಿ ಹಿಂದುತ್ವ ಹಿಂದುತ್ವ ವಿರೋಧ ಎನ್ನುವುದು ಇದೆ. ನಮ್ಮಲ್ಲಿ ಆ ತರ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಒಟ್ಟಿಗೆ ತೆಗೆದುಕೊಂಡು ಹೋಗುವ ಸಂಪ್ರದಾಯ ಇದೆ ಎಂದರು.

ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಉತ್ತರ ಕರ್ನಾಟಕದಲ್ಲಿ. ವಿಜಯೇಂದ್ರ ಬೆಂಗಳೂರು, ಮೈಸೂರು, ಶಿವಮೊಗ್ಗಕ್ಕೆ ಸೀಮಿತವಾಗಿರುವವರು. ಪಕ್ಷದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸಾಕಷ್ಟು ನಾಯಕರ ಸಹಮತವಿಲ್ಲ. ವಿಜಯೇಂದ್ರ ಕೆಳಗೆ ಹೇಗೆ ಕೆಲಸ ಮಾಡುವುದು ಎಂದು ಹಿರಿಯರ ಪ್ರಶ್ನೆ ಇದೆ. ನಾನು ಹೆಸರು ಹೇಳಲ್ಲ, ಆ ಪಕ್ಷದ ಬಗ್ಗೆ ಚರ್ಚೆ ಮಾಡುವುದು ಅಸಂಬದ್ಧ. ವಿಜಯೇಂದ್ರ ಆಯ್ಕೆಯಿಂದ ಬಿಜೆಪಿಗೆ ಲಾಭ ಸಿಗಲ್ಲ. ಈಗ ಯಾರೇ ಅಧ್ಯಕ್ಷ ಆದರೂ ರಾಜ್ಯ ಬಿಜೆಪಿಯಲ್ಲಿ ಚೇತರಿಕೆ ಕಷ್ಟ ವಿಜಯೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಹಲವು ನಾಯಕರಿಗೆ ಅಸಮಾಧಾನ ಇದ್ದು, ಪಕ್ಷದಲ್ಲಿ ಜ್ವಾಲಾಮುಖಿ ಯಾವಾಗ ಸ್ಫೋಟವಾಗುತ್ತೋ ಗೊತ್ತಿಲ್ಲ ಎಂದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....