ದೊಡ್ಡಬಳ್ಳಾಪುರ, (ಜೂ.07): ‘ತಾಲ್ಲೂಕಿನ ಎಲ್ಲಾ ಇಲಾಖೆಗಳ ಕಾಮಗಾರಿಗಳ ಗುತ್ತಿಗೆಯನ್ನು ತಾವೊಬ್ಬರೇ ಪಡೆದಿದ್ದೀರಿ. ಆದರೆ ಕಾಮಗಾರಿಗಳನ್ನು ಮಾತ್ರ ಕಾಲಮಿತಿಯಲ್ಲಿ ಮುಕ್ತಾಯಗೊಳಿಸದೆ ಎಲ್ಲವು ಪ್ರಗತಿಯಲ್ಲಿವೆ ಎಂದು ವರದಿ ನೀಡಿದರೆ ಹೇಗೆ’ ಎಂದು ಶಾಸಕ ಧೀರಜ್ ಮುನಿರಾಜ್ ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ಪ್ರಶ್ನಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದರು.
ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಮಂಜೂರಾಗಿದ್ದ ಸುಮಾರು ರೂ.3 ಕೋಟಿ ಹಣ ಬಿಡುಗಡೆಯಾಗಿ ಮೂರು ವರ್ಷಗಳು ಕಳೆದಿದೆ. ಆದರೆ ಕಾಮಗಾರಿ ಮಾತ್ರ ಇನ್ನೂ ನಡೆಯುತ್ತಲೇ ಇವೆ. ಅಂಗನವಾಡಿ ಕಟ್ಟಡ, ಶಾಲಾ ಕಟ್ಟಡ, ಆರೋಗ್ಯ ಕೇಂದ್ರಗಳ ದುರಸ್ಥಿ, ವಿದ್ಯಾರ್ಥಿ ನಿಲಯಗಳ ಕಾಮಗಾರಿಗಳನ್ನು ಪ್ರಥಮ ಆದ್ಯತೆ ಮೇರೆಗೆ ಮುಕ್ತಾಯಗೊಳಿಸಬೇಕಿದೆ. ಹಣ ಬಿಡುಗಡೆಯಾಗಿದ್ದರು ಕೆಲಸಗಳನ್ನು ವಿಳಂಬ ಮಾಡುವುದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದರು.
ನೆಲಮಂಗಲ-ದೊಡ್ಡಬಳ್ಳಾಪುರ ಮುಖ್ಯರಸ್ತೆ ಹೆಚ್ಚಿನ ಸರಕು ಸಾಗಾಣಿಕೆ ಸೇರಿದಂತೆ ವಾಹನ ದಟ್ಟಣೆ ಹೆಚ್ಚಾಗಿರುವ ರಸ್ತೆಯಾಗಿದೆ. ಅರಳುಮಲ್ಲಿಗೆ ಕೆರೆ ಏರಿಯ ಮೇಲೆ ನಡೆಯುತ್ತಿರುವ ರಸ್ತೆ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳಿಸಬೇಕು. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸುರಕ್ಷಿತಾ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ ಜನರು ತೋಂದರೆ ಪಡುವುದಂತಾಗಿದೆ. ಹಾಗೆಯೇ ನಗರಸಭೆ ವ್ಯಾಪ್ತಿಯಲ್ಲಿನ ರಂಗಪ್ಪ ವೃತ್ತದಿಂದ ತೇರಿನಬೀದಿಯವರೆಗೆ ರಸ್ತೆ ಬದಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಒಂದು ವರ್ಷದಿಂದಲು ಕುಂಟುತ್ತಲೇ ಸಾಗುತ್ತಿದೆ. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಹೋಗಿಬರುವ ಸ್ಥಳದಲ್ಲಿನ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸಬೇಕು. ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಕೇನಹಳ್ಳಿ ರಸ್ತೆಯಲ್ಲಿ ಮೋರಿ ಕುಸಿದು ಒಂದು ವರ್ಷ ಕಳೆದಿದ್ದರು ಸಹ ಮೋರಿಯನ್ನು ದುರಸ್ಥಿ ಮಾಡಿಸುವುದಿರಲಿ, ಸುರಕ್ಷಿತಾ ಕ್ರಮ ಕೈಗೊಂಡಿಲ್ಲ. ಈ ಎಲ್ಲಾ ಕೆಲಸಗಳನ್ನು ಪ್ರಥಮ ಆದ್ಯತೆಯ ಮೇರೆಗೆ ಮುಕ್ತಾಯಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗೆ ಸೂಚನೆ ನೀಡಿದರು.
ಈ ಹಿಂದಿನ ಸರ್ಕಾರದಲ್ಲಿ ಕರೆಯಲಾಗಿದ್ದ ಟೆಂಡರ್ ಹಾಗೂ ಸೇರಿದಂತೆ ವಿವಿಧ ಕಾಮಗಾರಿಗಳನ್ನು ತಡೆ ಹಿಡಿಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದರಿಂದ ಕಾಮಗಾರಿಗಳು ವಿಳಂಬವಾಗಿವೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಜಯಪ್ರಕಾಶ್ ಹೇಳಿದರು.
ಬಾರ್ ಗಳಿಗೆ ನೋಟಿಸ್ ಜಾರಿಗೊಳಿಸಿ: ರಾಜ್ಯ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ಮಧ್ಯ ಮಾರಾಟಗಾರರ ವಿರುದ್ಧ ದೂರು ದಾಖಲಿಸಲಾಗಿತ್ತು. ಆದರೆ ಚುನಾವಣೆ ಮುಕ್ತಾಯವಾದ ನಂತರ ತಾಲೂಕಿನಲ್ಲಿ ಅಕ್ರಮ ಮಧ್ಯ ಮಾರಾಟದ ದಂಧೆ ಮತ್ತೆ ಈ ಹಿಂದಿನಂತೆಯೇ ನಡೆಯುತ್ತಿದೆ ಎಂದು ಹೇಳಿದ ಶಾಸಕರು, ದೊಡ್ಡಬೆಳವಂಗಲ, ಸಾಸಲು ಹೋಬಳಿಯಲ್ಲಿ ಅಕ್ರಮ ಮಧ್ಯ ಮಾರಾಟ ಮಿತಿ ಮೀರಿದೆ. ಬಾರ್ ಗಳಿಗೆ ನೋಟಿಸ್ ಜಾರಿ ಮಾಡಿ ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಿದೆ. ನಗರ ಪ್ರದೇಶದ ಕೆಲ ಕಾಲೇಜುಗಳ ಸುತ್ತಮುತ್ತ ಗಾಂಜಾ ಮಾರಾಟವು ಪ್ರಾರಂಭವಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಇವುಗಳಿಗೆ ಕಡಿವಾಣ ಹಾಕುವ ಮೂಲಕ ಯುವ ಸಮುದಾಯ ವ್ಯಸನಕ್ಕೆ ಬಲಿಯಾಗುವುದನ್ನು ತಡೆಯಬೇಕಿದೆ ಎಂದರು.
ಶೌಚಾಲಯಕ್ಕಾಗಿ ವಾಗ್ವಾದ: ನಗರದ ಪ್ರದೇಶದ ಶಾಲೆಗಳ ನಿರ್ವಹಣೆಗೆ ಸರ್ಕಾರ ಯಾವುದೇ ಅನುದಾನ ನೀಡುವುದಿಲ್ಲ. ನಗರಸಭೆ ವತಿಯಿಂದ ನಿರ್ವಹಣೆಗೆ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ ಆರ್ಥಿಕ ನೇರವು ನೀಡಲು ಅವಕಾಶ ಇದೆ. ನಗರಸಭೆ ವ್ಯಾಪ್ತಿಯಲ್ಲಿನ 71 ಶೌಚಾಲಯಗಳ ಅಗತ್ಯವಿದೆ. ಆದರೆ ನಗರಸಭೆಗೆ ಮನವಿ ನೀಡಿದ್ದರು ಸಹ ಇದುವರೆಗೂ ಯಾವುದೇ ಸ್ಪಂದನೆಯು ಇಲ್ಲದಾಗಿದೆ. ಇದೇ ರೀತಿ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಸಹ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ ಶಾಸಕರ ಗಮನಕ್ಕೆ ತಂದರು.
‘ಶಿಕ್ಷಣ ಇಲಾಖೆಯಿಂದ ಯಾವುದೇ ಮನವಿಯು ಬಂದಿಲ್ಲ’ ಎಂದು ನಗರಸಭೆ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಳಿದರು. ಇದಕ್ಕೆ ಉತ್ತರ ನೀಡಿದ ಬಿಇಒ ಹಲವಾರು ಮನವಿ ಸಲ್ಲಿಸಿರುವ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಲಾಗುವುದು ಎಂದು ವಾಗ್ವಾದ ನಡೆಸಿದರು.
ಟೋಲ್ ಫ್ರೀ ನಂಬರ್ ಕಡ್ಡಾಯ: ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟರೆ ಅಥವಾ ನೀರು ಸರಿಯಾಗಿ ಶುದ್ಧೀಕರಣವಾಗದೇ ಇದ್ದರೆ ತಿಳಿಸಲು ಅನುಕೂಲವಾಗುವಂತೆ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿನ ಶುದ್ದ ಕುಡಿಯುವ ನೀರಿನ ಘಟಕಗಳ ಬಳಿ ಸಾರ್ವಜನಿಕರಿಗೆ ಕಾಣುವಂತೆ ಟ್ರೋಲ್ ಫ್ರೀ ನಂಬರ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಯಾವ ದಿನಾಂಕದಂದು ಸ್ವಚ್ಛಗೊಳಿಸಲಾಗಿದೆ ಎನ್ನುವುನ್ನು ಕಡ್ಡಾಯವಾಗಿ ಬರೆಸುವಂತೆ ಶಾಸಕ ದೀರಜ್ ಮುನಿರಾಜು ಕಿರು ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಯಂತ್ರಧಾರೆ ರದ್ದು: ಪ್ರತಿ ಹೋಬಳಿಗೆ ಒಂದರಂತೆ ತೆರೆಯಲಾಗಿದ್ದ ಕೃಷಿ ಯಂತ್ರಧಾರೆ ಟೆಂಡರ್ ಮುಕ್ತಾಯವಾಗಿದೆ. ಹೀಗಾಗಿ ಎಲ್ಲಾ ಯಂತ್ರಧಾರೆ ಕೇಂದ್ರಗಳು ಬಂದ್ ಆಗಿವೆ. ಧರ್ಮಸ್ಥಳ ಸಂಸ್ಥೆ ವತಿಯಿಂದ ಮಾತ್ರ ದೊಡ್ಡಬೆಳವಂಗಲದಲ್ಲಿ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದು ಕೃಷಿ ಇಲಾಖೆ ನಿರ್ದೇಶಕಿ ಡಿ.ರಾಜೇಶ್ವರಿ ಹೇಳಿದರು.
ಪಶುಸಂಗೋಪನ ಇಲಾಖೆ ನಿರ್ದೇಶಕ ಡಾ,ವಿಶ್ವನಾಥ್ ಮಾಹಿತಿ ನೀಡಿ, ತಾಲ್ಲೂಕಿನ ಅರಳುಮಲ್ಲಿಗೆ, ಹುಸ್ಕೂರು, ಉಜ್ಜನಿ, ಜಿಂಕೆಬಚ್ಚಹಳ್ಳಿ, ಕೋಲಿಗೆರೆ ಗ್ರಾಮಗಳಲ್ಲಿನ ಪಶುಸಂಗೋಪ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ ಎಂದರು.
ಜವಳಿ ಇಲಾಖೆ ಜಿಲ್ಲಾ ನಿರ್ದೇಶಕಿ ಸೌಮ್ಯ ಮಾಹಿತಿ ನೀಡಿ, 18 ಸಾವಿರ ನೇಕಾರಿಕೆ ಕಾರ್ಮಿಕರ ಪೈಕಿ 13,012 ಜನರಿಗೆ ನೇಕಾರ ಸಮ್ಮಾನ್ ಯೋಜನೆಯ ಹಣ ಬಂದಿದೆ. ಇದರಲ್ಲಿ ಕೆಲವರಿಗೆ ತಾಂತ್ರಿಕ ಕಾರಣಗಳಿಂದಾಗಿ ರೂ5 ಸಾವಿರಕ್ಕೆ ರೂ2 ಸಾವಿರ ಮಾತ್ರ ಬಂದಿದೆ. ಇದನ್ನು ಸರಿಪಡಿಸಲಾಗಿದೆ. ನಗರದ ಡಿ.ಕ್ರಾಸ್ ಸಮೀಪ ನೇಕಾರರ ಅನುಕೂಲಕ್ಕೆ ವಾಣಿಜ್ಯ ಮಳಿಗೆ ನಿರ್ಮಿಸಲು 10 ಗುಂಟೆ ಜಮೀನು ಮಂಜೂರಾಗಿದೆ. ಇದನ್ನು ರೇಷ್ಮೆ ಇಲಾಖೆಯಿಂದ ಜವಳಿ ಇಲಾಖೆಗೆ ಹಸ್ತಾಂತರ ಮಾಡಿದರೆ ರೂ9 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು ಎಂದರು.
ಹಣ ನೀಡಲು ಅವಕಾಶ ಇಲ್ಲ: ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಹಣ ನೀಡಲು ಅವಕಾಶ ಇಲ್ಲ. ಇಲ್ಲಿನ ಗ್ರಾಮಗಳ ಕೆರೆ ನೀರು ಕಲುಷಿತವಾಗಲು ಕಾರಣವಾಗಿರುವುದು ನಗರಸಭೆ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ. ಹೀಗಾಗಿ ಟ್ಯಾಂಕರ್ ನೀರು ಸರಬರಾಜಿಗೆ ಅವರೇ ಹಣ ಪಾವತಿ ಮಾಡಬೇಕು ಎಂದು ಇಇಒ ಶ್ರೀನಾಥ್ ಗೌಡ ಹೇಳಿದರು.
ಪ್ರಗತಿ ಪರಿಶೀಲನ ಸಭೆಯಲ್ಲಿ ತಹಶೀಲ್ದಾರ್ ಮೋಹನಕುಮಾರಿ, ತಾಲ್ಲೂಕು ಪಂಚಾಯಿತಿ ಆಡಳಿತ ಅಧಿಕಾರಿ ನರಸಿಂಹ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್.ಶ್ರೀನಾಥ್ ಗೌಡ, ನಗರಸಭೆ ಪೌರಾಯುಕ್ತ ಶಿವಶಂಕರ್ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
others
others
others
others
crime