ಹರಿತಲೇಖನಿ ದಿನದ ಚಿತ್ರ: ಏಕಾಂಬರೇಶ್ವರ ಮತ್ತು ರುದ್ರೇಶ್ವರ ದೇವಾಲಯ
ಹರಿತಲೇಖನಿ ದಿನದ ಚಿತ್ರ: ಏಕಾಂಬರೇಶ್ವರ ಮತ್ತು ರುದ್ರೇಶ್ವರ ದೇವಾಲಯ

ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣವು ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರು ಮತ್ತು ಕಡೂರು ಮಧ್ಯೆ ಇರುವ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಒಂದು ಪ್ರಾಚೀನ ಐತಿಹಾಸಿಕ ಸ್ಥಳವಾಗಿದೆ. 

ಪುರಾಣ ಪ್ರಸಿದ್ಧ ರುಕ್ಮಾಂಗದ ರಾಜನ ರಾಜಧಾನಿಯಾದ ಸಖರಾಯಟ್ಟಣದ ಸುತ್ತಮುತ್ತ ಇರುವ ಅನೇಕ ಗ್ರಾಮಗಳಲ್ಲಿ ಹೊಯ್ಸಳರು ನಿರ್ಮಿಸಿದ ದೇವಾಲಯಗಳನ್ನು ನೋಡಬಹುದು.

ಅಯ್ಯನಕೆರೆ, ಬ್ರಹ್ಮಸಮುದ್ರ, ಬಾನೂರು ಅಗ್ರಹಾರ ಮುಂತಾದ ಸ್ಥಳಗಳಲ್ಲಿ ಇರುವಂತೆ ಸಖರಾಯಪಟ್ಟಣದಲ್ಲೂ ಕೆಲವು ಪ್ರಾಚೀನ ದೇವಾಯಗಳು ಇವೆ. ಅವುಗಳಲ್ಲಿ ಶಕುನ ರಂಗನಾಥ, ವೀರಭದ್ರೇಶ್ವರ, ರಾಮೇಶ್ವರ, ಸೋಮೇಶ್ವರ, ರಂಗನಾಥ ಮುಖ್ಯವಾಗಿವೆ. ಇವುಗಳ ಸಾಲಿಗೆ ಸೇರುವ ಮತ್ತೆರಡು ದೇವಾಲಯಗಳೆಂದರೆ ಏಕಾಂಬರೇಶ್ವರ ಮತ್ತು ರುದ್ರೇಶ್ವರ ದೇವಾಲಯಗಳು.

ಸಖರಾಯಟ್ಟಣದಿಂದ ಅಯ್ಯನಕೆರೆಗೆ ಹೋಗುವ ತಿರುವಿನಲ್ಲಿ ಏಕಾಂಬರೇಶ್ವರ ದೇವಾಲಯವು ಇದ್ದು  ಪೂರ್ಣವಾಗಿ ನವೀಕರಣಗೊಂಡಿದೆ.

ಪೂರ್ವಾಭಿಮುಖವಾಗಿ ನಿರ್ಮಾಣವಾಗಿರುವ ದೇವಾಲಯದ ಒಳಭಾಗದ ಮೂಲ ದೇವರು ಮತ್ತು ಕೆಲವು ಪರಿವಾರ ದೇವತೆಗಳನ್ನು ಮೂಲ ಸ್ವರೂಪದಲ್ಲೇ ಉಳಿಸಿಕೊಳ್ಳಲಾಗಿದೆ. ಮೂಲ ದೇವಾಲಯದ ಕೆಲವು ಕಂಬಗಳನ್ನು ನವೀಕರಣಗೊಂಡ ದೇವಾಲಯದ ಹೊರಭಾಗದ ಗೋಡೆಗಳಲ್ಲಿ ಸೇರಿಸಲಾಗಿದೆ.

ಸುಮಾರು 12 ಅಥವಾ 13 ನೇ ಶತಮಾನದಲ್ಲಿ ನಿರ್ಮಿಸಿದಂತೆ ತೋರುವ ಈ ದೇವಾಲಯದ ಗರ್ಭಗುಡಿಯಲ್ಲಿ  ಮೂರು ಅಡಿ ಎತ್ತರದ ಶಿವಲಿಂಗ ಮತ್ತು ಅದರ ಎದುರಿಗೆ ಸುಂದರವಾದ ನಂದಿ ವಿಗ್ರಹವಿದೆ. ನವರಂಗದಲ್ಲಿ ಮೂರು ಅಡಿ ಎತ್ತರದ ಗಣಪತಿ ವಿಗ್ರಹವನ್ನು ಇಡಲಾಗಿದೆ.

ಚಿಕ್ಕದಾದ ಈ ಗುಡಿಯಲ್ಲಿ ಹಿಂದೊಮ್ಮೆ ದೊಡ್ಡ ದೇವಾಲಯದಲ್ಲಿದ್ದ ಈ ಮೂರ್ತಿಗಳನ್ನು ಹೀಗಾದರೂ ಸಂರಕ್ಷಿಸುವುದಕ್ಕೆ ಸಮಾಧಾನ ಪಡಬೇಕಿದೆ.

ಸಖರಾಯಪಟ್ಟಣದಲ್ಲಿರುವ ಮತ್ತೊಂದು ಹೊಯ್ಸಳ ದೇವಾಲಯವೆಂದರೆ ರುದ್ರೇಶ್ವರ ದೇವಾಲಯ. ಮೂರ್ನಾಲ್ಕು ಗುಡಿಗಳ ಸಮುಚ್ಚಯದಂತೆ ಕಾಣುವ ಇಲ್ಲಿಯೂ ಸಹ ಶಿವಲಿಂಗ ಮತ್ತು ನಂದಿ ವಿಗ್ರಹಗಳನ್ನು ಪೂಜಿಸಲಾಗುತ್ತಿದೆ. ಮೂಲ ದೇವಾಲಯದ ನವರಂಗ ಕಂಬಗಳನ್ನು ಬಳಸಿ ಒಂದು ಚಿಕ್ಕ ಮಂಟಪವನ್ನು ನಿರ್ಮಿಸಲಾಗಿದೆ. ಅದರಲ್ಲಿ ಒಂದು ಶಿವಲಿಂಗವಿದ್ದು ಎದುರಿಗೆ ನಂದಿ ವಿಗ್ರಹವಿದೆ.

ಸಂಗ್ರಹ ವರದಿ: ಗಣೇಶ್.ಎಸ್., ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....