ಕಾಂಗ್ರೆಸ್ ಮಾಡಿರುವ ಕರ್ಮಕಾಂಡ ಮುಚ್ಚಿಹಾಕಲೆಂದೇ ಲೋಕಾಯುಕ್ತ ಮುಚ್ಚಿದರು: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಮಾಡಿರುವ ಕರ್ಮಕಾಂಡ ಮುಚ್ಚಿಹಾಕಲೆಂದೇ ಲೋಕಾಯುಕ್ತ ಮುಚ್ಚಿದರು: ಸಿಎಂ ಬೊಮ್ಮಾಯಿ

ಬೆಂಗಳೂರು, (ಜ.24): ಕಾಂಗ್ರೆಸ್  ಮಾಡಿರುವ ಕರ್ಮಕಾಂಡ ಮುಚ್ಚಿಹಾಕಲೆಂದೇ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಹಾಕಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಸೋಮವಾರ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿಂದ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 

ಕಾಂಗ್ರೆಸ್ ಸೊಗಲಾಡಿತನ: ಭ್ರಷ್ಟಾಚಾರ ನಿಲ್ಲಿಸಿ ಬೆಂಗಳೂರು ಉಳಿಸಿ ಎಂದು ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಶೇ 60  ರಷ್ಟು ಪ್ರೀಮಿಯಂ ಬೆಂಗಳೂರಿನಲ್ಲಿ ನೀಡಿರುವ ದಾಖಲೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ದಾಖಲೆಗಳಲ್ಲಿದೆ. ಸುಮಾರು 800 ಕೋಟಿ ರೂ.ಗಳಲ್ಲಿ ಶೇ 60 ರಷ್ಟು ಪ್ರೀಮಿಯಮ್ ನ್ನು ದೇಶದಲ್ಲಿ ಎಲ್ಲಿಯಾದರೂ ಕೊಟ್ಟಿದ್ದಾರೆಯೇ? ಇವರು ಅಂತಹ ಶೂರರು. ಇಷ್ಟು ಮುಕ್ತವಾಗಿ 40-60 ಪ್ರೀಮಿಯಮ್ ಕೊಟ್ಟು ಭ್ರಷ್ಟಾಚಾರ ನಡೆಸಿ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಅದು ಸೊಗಲಾಡಿತನ. ತಾವು ಮಾಡಿರುವುದನ್ನು ಮುಚ್ಚಿಕೊಳ್ಳುವ ಸಲುವಾಗಿ ಈ ರೀತಿ ಹೇಳುತ್ತಿದ್ದಾರೆ.  ನಮ್ಮ ಸರ್ಕಾರ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದೆ. ಆರೋಪ ಮಾಡುತ್ತಿರುವುದರ ಪ್ರಕರಣದ ಬಗ್ಗೆ  ವಿವರಗಳನ್ನು ಲೋಕಾಯುಕ್ತಕ್ಕೆ ನೀಡಲಿ ಎಂದರು. 

ನೈತಿಕ ಹಕ್ಕಿಲ್ಲ: ಲೋಕಾಯುಕ್ತ ಮುಚ್ಚಿದ ಪುಣ್ಯಾತ್ಮ ರು ಇವರು. 300 ಕಡೆ  ಪ್ರತಿಭಟನೆ ಮಾಡುತ್ತಿರುವವರು ಲೋಕಾಯುಕ್ತ ಎಂಬ ಸ್ವತಂತ್ರ, ಸಂವಿಧಾನಬದ್ಧ ಸಂಸ್ಥೆಯನ್ನು ಮುಚ್ಚಿರುವ ಇವರು ನಮಗೆ ಪಾಠ ಹೇಳುತ್ತಾರೆ. ಲೋಕಾಯುಕ್ತ ಯಾಕೆ ಮುಚ್ಚಿದರು? ಇವರ ವಿರುದ್ಧ 59 ಪ್ರಕರಣಗಳು ಮುಖ್ಯಮಂತ್ರಿಗಳ ಸಮೇತವಾಗಿ ದಾಖಲಾಗಿತ್ತು. ಎ.ಸಿ.ಬಿ ಸೃಜಿಸಿ, ಪ್ರಕರಣ ಮುಚ್ಚಿಹಾಕಲು ಬಿ ವರದಿ ಹಾಕಿದರು. ಅವೆಲ್ಲವನ್ನೂ ಲೋಕಾಯುಕ್ತಕ್ಕೆ ಶಿಫಾರಸು ಮಾಡುತ್ತಿದ್ದೇವೆ. ಇವರಿಗೆ ಯಾವ ನೈತಿಕ ಹಕ್ಕಿದೆ. ಲೋಕಾಯುಕ್ತ ಮುಚ್ಚಿದ ಪ್ರಶಸ್ತಿ ಭ್ರಷ್ಟಾಚಾರ ಬೆಂಬಲಿಸಲು, ಅದರ ಪರವಾಗಿ, ಕುಮ್ಮಕ್ಕು ನೀಡಲು, ಭ್ರಷ್ಟಾಚಾರ ದೊಂದಿಗೆ ಕೈಜೋಡಿಸಿ ಸರ್ಕಾರ ನಡೆಸಿದವರು. ಭ್ರಷ್ಟಾಚಾರ ಇವರ ಸರ್ಕಾರದ ಆಡಳಿತದ ಒಂದು ಭಾಗವಾಗಿದೆ. ಅದಕ್ಕಾಗಿ ಅದನ್ನು ಮುಚ್ಚಿಹಾಕಿದರು. ದಾಖಲೆ ಸಮೇತ ದೂರು ನೀಡಿದರೆ ವಿಚಾರಣೆಯನ್ನೂ ಮುಚ್ಚಿಹಾಕುವ  ಕೆಲಸ ಮಾಡಿದ್ದಾರೆ. ತಾವು ಮಾಡಿರುವ  ಕೆಲಸವನ್ನು ಮುಚ್ಚಿಕೊಳ್ಳಲು ಈ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು. 

ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ: ಜನ ಇದನ್ನು ಒಪ್ಪುವುದಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಎಂದರೆ ನಿಜವಾಗಿಯೂ ಹಾಸ್ಯಾಸ್ಪದ ಎಂದರು. ಇದು ನ್ಯಾಯವೇ? ಎಂದು ಪ್ರಶ್ನಿಸಿದರು. ತಮ್ಮ ಕೈಗೆ ಹತ್ತಿರುವ ಮಸಿಯನ್ನು ಮೊದಲು ನೋಡಿಕೊಳ್ಳಲಿ. ತಮ್ಮ ಎಲೆಯಲ್ಲಿ ಕತ್ತೆ ಬಿದ್ದಿರುವುದನ್ನು ನೋಡಿಕೊಳ್ಳಲಿ ಎಂದರು. 

ಜನಬೆಂಬಲವಿದೆ: ಪ್ರಧಾನಿಗಳನ್ನು ಹಿಟ್ಲರ್ ಎಂದು ಕರೆದಿರುವ ಬಗ್ಗೆ ಪ್ರತಿಕ್ರಿಯಿಸಿ ಟೀಕೆಗಳನ್ನು ನಾನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುತ್ತೇನೆ ಎಂದರು. ಪ್ರಧಾನಿಗಳು ವಿಶ್ವವ್ಯಾಪಿ ನಾಯಕರು. ಇಡೀ ಭಾರತ ದೇಶದಲ್ಲಿ ಜನಮನ್ನಣೆ ಗಳಿಸಿದವರು. ಅವರ ಬಗ್ಗೆ ಇರುವ ಸದಭಿಪ್ರಾಯ ಬಹುತೇಕ ಯಾವುದೇ ಪ್ರಧಾನಿಗಳಿಗಿಲ್ಲ. ಅಂಥವರ ಬಗ್ಗೆ ಮಾತನಾಡಿದರೆ ಜನ ನಂಬುವುದಿಲ್ಲ. ಆಕಾಶಕ್ಕೆ ಉಗುಳಿದಂತೆ ಎಂದರು. ಗುಜರಾತ್ ನಲ್ಲಿ ಅವರು ಮುಖ್ಯಮಂತ್ರಿಗಳಾಗಿ ದ್ದಾಗ ಕಾಂಗ್ರೆಸ್ ನಾಯಕಿ ಮೋತ್ ಕಾ ಸೌದಾಗರ್ ಎಂದಿದ್ದರು. ಆಗ ಅವರಿಗೆ ಹೆಚ್ಚು ಮತ ದೊರೆತು ಜಾಸ್ತಿ ಸ್ಥಾನಗಳು ದೊರೆಯಿತು.  ಅವರು ಏನು ಹೇಳುತ್ತಾರೋ ಹೇಳಲಿ ಜನಬೆಂಬಲ ನಮ್ಮ ಜೊತೆಗಿದೆ. ಇನ್ನಷ್ಟು ಬೆಂಬಲ ಹೆಚ್ಚಾಗುತ್ತದೆ ಎಂದರು. 

ಕಾಂಗ್ರೆಸ್ ಪ್ರತಿಭಟನೆಗೆ ಸಂಬಂಧಿಸಿದಂತೆ  ಪೊಲೀಸರು ಕಾನೂನಿನಂತೆ ಕ್ರಮ ವಹಿಸುವರು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....