ನಾವಾಡುವ ಮಾತು ಮುಂದಿನ ಜನಾಂಗಕ್ಕೆ ಸಂಸ್ಕಾರ ಹೇಳಿಕೊಡುವಂತಿರಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ನಾವಾಡುವ ಮಾತು ಮುಂದಿನ ಜನಾಂಗಕ್ಕೆ ಸಂಸ್ಕಾರ ಹೇಳಿಕೊಡುವಂತಿರಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು, (ಜ.23): ನಾವಾಡುವ ಮಾತು ಮುಂದಿನ ಜನಾಂಗಕ್ಕೆ ಸಂಸ್ಕಾರ ಹೇಳಿಕೊಡುವಂತಿರಬೇಕು ಎಂದು ದೊಡ್ಡ ಸ್ಥಾನಕ್ಕೆ ಏರಿದವರು ಸಣ್ಣತನದ ಮಾತುಗಳನ್ನಾಡಬಾರದು ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಭಾನುವಾರ ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಭಜನಾ ಮೇಳದ ಸಮಾರೋಪದಲ್ಲಿ ಮಾತನಾಡಿದರು.

ಜನರ ಭಾವನೆ ಮತ್ತು ನಂಬಿಕೆಯನ್ನು ಘಾಸಿಗೊಳಿಸುವಂತೆ ಹೇಳಿಕೆ ನೀಡಬಾರದು ಎಂದ ಅವರು, ನಾನು ಸುತ್ತೂರಿಗೆ ಬಂದಾಗ ಮಾಜಿ ಸಿಎಂ ಒಬ್ಬರು ನಿಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಲು ನಾನು ಅವರ ಮಟ್ಟಕ್ಕೆ ಇಳಿಯಬೇಕಾಗುತ್ತದೆ. ಸಣ್ಣವರು ದೊಡ್ಡವರಾದ ಅನೇಕ ಉದಾಹರಣೆ ನಮ್ಮ ಮುಂದಿದೆ. ಕರ್ನಾಟಕದ ಸಂಸ್ಕೃತಿ ಅಥವಾ ಕರ್ನಾಟಕದ ರಾಜಕೀಯ ಸಂಸ್ಕೃತಿ ಅವರ ಹೇಳಿಕೆಯಲ್ಲಿ ಇಲ್ಲ ಎಂದರು.

ಭಾರತೀಯರು ರಾಮ ಇದ್ದಾನೆ ಎಂದು ನಂಬಿದ್ದಾರೆ. ನಿಮಗೆ ನಂಬಿಕೆ ಇಲ್ಲದಿದ್ದರೆ ಬೇಡ, ಇದ್ದಾನೆ ಎಂದರೆ ಇದ್ದಾನೆ, ಇಲ್ಲ ಎಂದರೆ ಇಲ್ಲ. ಅದನ್ನು ಬಿಟ್ಟು ಬೇರೆಯವರ ಭಾವನೆ ಮತ್ತು ನಂಬಿಕೆಯನ್ನು ಘಾಸಿಗೊಳಿಸುವಂತೆ ಕೆಟ್ಟದಾಗಿ ಮಾತನಾಡಬಾರದು.

ನನ್ನ ಕಾರ್ಯ ಮತ್ತು ಸ್ಥಾನದ ಗೌರವ ಉಳಿಸಿಕೊಂಡು ಹೋಗಬೇಕು. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಯಾರನ್ನೊ ಮೆಚ್ಚಿಸಲು ಮಾತನಾಡದೆ ಪ್ರತಿ ಶಬ್ದ ಬಳಸುವಾಗಲೂ ಯೋಚಿಸಿ ಮಾತನಾಡಬೇಕು. ಯಾರನ್ನೂ ನೋಡಿಸದಂತೆ ನಡೆದುಕೊಳ್ಳಬೇಕು. ನಮ್ಮ ದೇಶಕ್ಕೆ ಮತ್ತು ಸಂಸ್ಕೃತಿಗೆ ನೂರಾರು, ಸಾವಿರಾರು ವರ್ಷದ ಇತಿಹಾಸ, ಪರಂಪರೆ ಇದೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.

ಸುಸಂಸ್ಕೃತವಾಗಿ ವಿರೋಧಿಸಿ: ಭಿನ್ನಾಭಿಪ್ರಾಯವನ್ನು ಸುಸಂಸ್ಕೃತವಾಗಿಯೂ ವಿರೋಧಿಸಬಹುದು. ಆದರೆ ನಮ್ಮ ಪರಂಪರೆಯನ್ನೇ ಪ್ರಶ್ನಿಸುವ, ಕೀಳಾಗಿ ಮಾತನಾಡುವುದು ಸರಿಯಲ್ಲ. ನಮ್ಮ ವಿಚಾರ ಹೇಳುವಾಗ ಮತ್ತೋಬ್ಬರಿಗೆ ನೋವಾಗುತ್ತದೆ ಎಂಬ ವಿವೇಕ ಇಲ್ಲದಿದ್ದರೆ ಕಷ್ಟವಾಗುತ್ತದೆ. ಒಬ್ಬರ ಬಗ್ಗೆ ಕೀಳಾಗಿ ಮಾತನಾಡುವುದು ಯಾವ ಧರ್ಮ? ಯಾವ ವಿಚಾರ? ಯಾವುದು ನಿಮ್ಮ ಆದರ್ಶ? ಎಂದು ಅವರು ಪ್ರಶ್ನಿಸಿದರು.

ಯೋಚನೆ ಮಾಡಿ ಮಾತನಾಡಬೇಕು: ವಿಶೇಷವಾಗಿ ನಮ್ಮ ಮಾತುಗಳಿಂದ ಜನ ಪ್ರಭಾವಕ್ಕೆ ಒಳಗಾಗುತ್ತಾರೆ. ಪ್ರತಿಯೊಂದು ಶಬ್ದವನ್ನು ಯೋಚನೆ ಮಾಡಿ ಮಾತನಾಡಬೇಕು. ಒಳ್ಳೆಯ ರೀತಿಯಲ್ಲಿ ಬೇರೆಯವರ ಮನಸ್ಸನ್ನು ನೋಯಿಸದಂತೆ ನಾವು ಇವತ್ತು ನಡೆದುಕೊಳ್ಳಬೇಕು. ಈಗ ತಾನೆ ವಚನವನ್ನು ಹಾಡಿದ್ದಾರೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬಸವಣ್ಣನವರು ಹೇಳಿದ್ದಾರೆ. ಇದನ್ನು ನಮ್ಮ ಜೀವನದಲ್ಲಿ ಅಳವಡಿಸುವುದಕ್ಕೆ 700 ವರ್ಷಕ್ಕಿಂತಲೂ ಮುಂಚೆ ಈ ಒಂದು ವಿಚಾರ ಕರ್ನಾಟಕದಲ್ಲಿ ನಡೆದಿತ್ತು. ಸಾಮಾನ್ಯ ಜನತೆಗೆ ಗೊತ್ತಿರದಂತಹ ವಿಚಾರ ಅದು ಬಡವರಿಗೆ ತಿಳಿದಿರುವಂತಹ ವಿಚಾರ ಮನುಷ್ಯನಿಗೆ ಸಹಜವಾದ ಗುಣ. ಜ್ಞಾನಾರ್ಜನೆ ಮಾಡಿಕೊಳ್ಳುವುದು. ಸರ್ಕಾರ ಇರಲಿಲ್ಲ ಏನು ಇರಲಿಲ್ಲ ಅಂತಹ ಸಂದರ್ಭದಲ್ಲಿ ಶಿಕ್ಷಣ ಕೊಟ್ಟಿದ್ದಾರೆ ಅನ್ನವನ್ನು ಕೊಟ್ಟಿದ್ದಾರೆ ಮತ್ತು ಆಶ್ರಯವನ್ನು ಕೊಟ್ಟಿದ್ದಾರೆ. ಇವತ್ತು ಶಿಕ್ಷಣ ಅನ್ನ ಎಲ್ಲವನ್ನೂ ಕೊಟ್ಟಿರುವ ಉದಾಹರಣೆ ಇದೆ. ಯಾವ ಸಮಾಜದಲ್ಲಿ ಶಿಕ್ಷಣ ಇರುವುದಿಲ್ಲವೋ ಆ ಸಮಾಜ ಪ್ರಗತಿಪರ ಸಮಾಜ ಆಗುವುದಿಲ್ಲ. ಒಂದು ಸುಸಂಸ್ಕೃತವಾದ ಶೈಕ್ಷಣಿಕ ರಾಜ್ಯ ಆಳುವವರು ಅಕ್ಷರದ ಜ್ಞಾನ ಇಲ್ಲದೆ ಇರುವಾಗ ಆ ಅಕ್ಷರದ ಜ್ಞಾನವನ್ನು ಕೊಟ್ಟಿರುವಂತಹದು. ಹಸಿದವರಿಗೆ ಅನ್ನವನ್ನು ಕೊಟ್ಟಿರುವಂತಹದು. ಆಶ್ರಯ ಇಲ್ಲದವರಿಗೆ ಆಶ್ರಯವನ್ನು ಕೊಟ್ಟಿರುವಂತಹದು.  ಸುತ್ತೂರು ಮಠದ ಸ್ವಾಮಿಗಳು ಬಹಳ ಈ ಭಾಗದ ಜಾತ್ರೆಯನ್ನು ಎಲ್ಲಾ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಮಾಡಿಕೊಂಡು ಬಂದಿದ್ದಾರೆ. ಅವರು ಸದಾ ಕಾಲ ನಮಗೆ ಒಳಿತನ್ನೆ ಬಯಸಿದ್ದಾರೆ ನಾಡಿನ ಸಮಸ್ತ ಜನತೆಗೆ ಒಳಿತನ್ನೇ ಬಯಸಿದ್ದಾರೆ ಆಶೀರ್ವಾದ ಕೂಡ ಮಾಡಿದ್ದಾರೆ. ಆದ್ದರಿಂದ ನಮ್ಮ ಸಮಾಜ ಒಂದು ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎಂದರು.

ಟೀಕೆಗಳು ಯಾರನ್ನೂ ಬಿಟ್ಟಿಲ್ಲ: ಇತಿಹಾಸವನ್ನು ಗಮನಿಸಿದಾಗ ಟೀಕೆಗಳು  ಯಾರನ್ನು ಬಿಟ್ಟಿಲ್ಲ. ಜೀಸಸನ್ನು ಶಿಲುಬೆಗೆ ಏರಿಸಿ ಮೊಳೆ ಹೊಡೆದರು, ಬಸವಣ್ಣನನ್ನು ಹೊಳೆಯಿಂದಾಚೆ ಓಡಿಸಿ ಕ್ರಾಂತಿ ಎಂದರು. ಆದರೆ ಇಂದಿಗೂ ನಾವು ಸ್ತುತಿಸುತ್ತಿರುವುದು ಬಸವಣ್ಣನ ತತ್ತ್ವವನ್ನು ಅಲ್ಲವೇ? ಆತನ ವಿಚಾರಗಳಿಗೆ ಸೋಲಾಗಿಲ್ಲ. ಕನಕದಾಸರನ್ನು ಅವರ ಸಹೋದರರೇ ಸೋಲಿಸಿದರು. ಅರಮನೆ ಬಿಟ್ಟರು, ಸೋಲಿನಿಂದ ಹಲವು ಗೆಲವು ಕಂಡೆ, ನನ್ನನ್ನು ನಾನೇ ಗೆದ್ದುಕೊಂಡೆ ಎಂದು ಕನಕರು ಆಗಲೇ ಹೇಳಿದ್ದಾಗಿ ಅವರು ತಿಳಿಸಿದರು.

ಸಂಸ್ಕೃತಿಯ ಪ್ರತೀಕ: ನಮ್ಮ ಮಠಗಳು ಜಾತಿಯ ವಿಷ ಬೀಜವನ್ನು ದಾಸೋಹದಿಂದಲೂ, ಮತದ ವಿಷ ಬೀಜವನ್ನು ಜ್ಞಾನದಿಂದಲೂ ಹೋಗಲಾಡಿಸಿವೆ. ಸರ್ಕಾರದ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಅನ್ನ, ಆಶ್ರಯ ನೀಡಿವೆ. ಸುತ್ತೂರು ಮಠ ಧರ್ಮ ಆಚರಣೆ ಮತ್ತು ಸಂಸ್ಕೃತಿಯ ಪ್ರತೀಕ. ಧಾರ್ಮಾಚರಣೆಯ ಜತೆ ಜನರ ಜೀವನ ಬೆರೆತಾಗ ಸುಸಂಸ್ಕೃತ ಸಮಾಜ ನಿರ್ಮಾಣ ಆಗುತ್ತದೆ ಎಂದು ಅವರು ಹೇಳಿದರು.

ಸಮಾನತೆಯ ಭಾವ: ತೇರು ಎಳೆಯುವುದರಿಂದ ಸಮಾನತೆಯ ಭಾವ ಮೂಡಲಿದೆ. ಅಂತಹ ಒಂದು ಸದುದ್ದೇಶದಿಂದಲೇ ಹಿರಿಯರು ಜತ್ರೆ ಸಂಪ್ರದಾಯ ಹುಟ್ಟು ಹಾಕಿದರು. ದೊಡ್ಡ ತೇರು ನಿರ್ಮಾಣ ಮಾಡಿದರು. ತೇರು ಎಳೆಯವ ವೇಳೆ ಎಲ್ಲ ಜಾತಿ ಜನಾಂಗಗಳ ಸಮ್ಮಿಲನ ಆಗಲಿದೆ. ಇದರಿಂದ ಸಮಾನ ಭಾವ ಮೂಡಲಿದೆ ಎಂದು ಹೇಳಿದರು.

ನಡೆ ನುಡಿಯಿಂದ ಮನುಷ್ಯ ದೊಡ್ಡವನಾಗಬೇಕು: ಸಂಸ್ಕೃತಿ ಮತ್ತು ಸಂಸ್ಕಾರ ಬಹಳ ಜನರಿಗೆ ಗೊತ್ತಿಲ್ಲ. ಇಂದು ನಾಗರಿಕತೆ ಬೆಳವಣಿಗೆ ಆಗಿದೆ. ಆಸ್ತಿ ಅಂತಸ್ತು ಇದ್ದರೂ ನಾನು ಏನಾಗಿದ್ದೇನೆ ಎಂಬುದು ಅವರ ಸಂಸ್ಕೃತಿ ಮೇಲೆ ಅವಲಂಭಸಿರುತ್ತದೆ. ನಡೆ ನುಡಿಯಿಂದ ಮನುಷ್ಯ ದೊಡ್ಡವನಾಗಬೇಕು. ಆಸ್ತಿ ಅಂತಸ್ತಿನಿಂದ ದೊಡ್ಡ ನಾಯಕನಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸಾಮಾಜಿಕ ಸಾಮರಸ್ಯದ ಸಂಕೇತ: ಜಾತ್ರೆ ಎಂಬುದು ಸಮ್ಮಿಲನ ಹಾಗೂ ಸುಸಂದರ್ಭದ ಕ್ಷಣ. ಯಾವುದೇ ಜಾತಿ, ಮತ ಬೇಧವಿಲ್ಲದೆ ನಡೆಯವ ಜಾತ್ರೆ ಭಕ್ತಿ ಭಾವ ಮಾತ್ರವಾಗಿರದೆ, ಸಾಮಾಜಿಕ ಸಾಮರಸ್ಯದ ಸಂಕೇತವಾಗಿದೆ. ವಿಶೇಷವಾಗಿ ಸುತ್ತೂರು ಜಾತ್ರೆ ಒಂದು ಅರ್ಥಪೂರ್ಣ ಜಾತ್ರೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಲ್ಲಾ ಜನ ಜಾತ್ರೆಗೆ ಬರುತ್ತಾರೆ. ಒಂದು ರೀತಿಯಲ್ಲಿ ನಮಗೆಲ್ಲಾ ಸಮಾನವಾಗಿ ಸೇರುವಂತಹ ಒಂದು ಉತ್ಸವ ಭಕ್ತಿ ಭಾವ ಹಾಗೂ ನಡತೆಗೆ ನಮ್ಮ ಸುತ್ತೂರು ಜಾತ್ರೆ ವಿಶೇಷ. ಜನಸಮುದಾಯಕ್ಕೆ ಬೇಕಾಗುವಂತಹ ವಿಚಾರ    ನಮ್ಮ ನಡವಳಿಕೆಗಳು ನಮ್ಮ ಆಚಾರ ವಿಚಾರ ನಮ್ಮ ಸಂಸ್ಕಾರ ನಮ್ಮ ಸಂಸ್ಕೃತಿ ಎಲ್ಲ ಗೊತ್ತು. ಆದರೆ ನಮಗೆ ಜಾತೀಯತೆ ಮತ್ತು ಸಂಸ್ಕೃತಿ ಇದರ ಬಗ್ಗೆ ಗೊತ್ತಿಲ್ಲ. ನಾವು ಈ ರೀತಿ ಬೆಳವಣಿಗೆ ಆದರೆ ಇದೊಂದು ಆತಂಕಕಾರಿ ಬೆಳವಣಿಗೆ ಎಂದರು.

ವೇದಿಕೆಯಲ್ಲಿ ಸುತ್ತೂರಿನ ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಕಲ್ಬುರ್ಗಿಯ ಸಮಾದಾನ ಆಶ್ರಮದ ಮೌನ ತಪಸ್ವಿ ಶ್ರೀ ಜಡೆಶಾಂತ ಮಲ್ಲಿಕಾರ್ಜುನಸ್ವಾಮೀಜಿ, ಅರೆತಿಪ್ಪೂರು ಜೈನಮಠದ ಶ್ರೀಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿ, ಭವಾನಿ ಪೀಠದ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಸ್ವಾಮೀಜಿ, ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್, ವಸತಿ ಸಚಿವ ವಿ. ಸೋಮಣ್ಣ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್,  ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಶಾಸಕರಾದ ತನ್ವೀರ್ ಸೇಠ್, ಸಿ.ಎಸ್.ನಿರಂಜನಕುಮಾರ್, ಎಲ್.ನಾಗೇಂದ್ರ, ಎಂ. ಅಶ್ವಿನ್‌ಕುಮಾರ್, ಮೇಯರ್ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ತುಳಿಸಿ ಮುನಿರಾಜು, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಎಂಡಿಎ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ಮೊದಲಾದವರು ಇದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....