ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಸಾಂತ್ವಾನ; ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಶಂಸೆ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಸಾಂತ್ವಾನ; ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಶಂಸೆ

ಬೆಂಗಳೂರು, (ಫೆ.12); ಆರ್ಥಿಕ ಅಸಮಾನತೆಯಿಂದ ನರಳುತ್ತಿರುವ ಬಡವರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳು ಸಾಂತ್ವಾನ ನೀಡಿವೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಇಂದು ಆರಂಭವಾದ ಬಜೆಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ನಡೆನುಡಿಗಳನ್ನು ಒಂದಾಗಿಸಿಕೊಂಡು ಕೆಲಸ ಮಾಡುತ್ತಿದ್ದು, ಕರ್ನಾಟಕ ಮಾದರಿಯನ್ನು ಅನುಸರಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಡವರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಂತ್ವನವನ್ನು ಒದಗಿಸಿವೆ. ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಲಕ್ಷ್ಮೀ, ಗೃಹಜ್ಯೋತಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ತೃಪ್ತಿ ನೀಡಿವೆ ಎಂದರು.

ಬರೀ ಗ್ಯಾರೆಂಟಿ ಯೋಜನೆಗಳಿಂದ ಮಾತ್ರ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಈ ಅರಿವು ಕಾಂಗ್ರೆಸ್ ಪಕ್ಷಕ್ಕೂ ಇದೆ ಎಂದು ಹೇಳಿದ ಗೆಹೋಟ್, ಸರ್ಕಾರವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಎರಡು ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ. 

ಸರ್ಕಾರದ ಒಂದು ನಿರ್ಣಯದಿಂದ ರಾಜ್ಯದ 5 ಕೋಟಿಗೂ ಹೆಚ್ಚು ಜನರು ಮಧ್ಯಮ ವರ್ಗದ ಸ್ಥಿತಿಗೆ ಬಂದಿರುವುದು ಜಾಗತಿಕ ದಾಖಲೆಯಾಗಿದೆ. ನನ್ನ ಸರ್ಕಾರ ಭವಿಷ್ಯದತ್ತ ದೃಷ್ಟಿ ನೆಟ್ಟಿರುವ ಸರ್ಕಾರ. ಈ ಎಂಟು ತಿಂಗಳಲ್ಲಿ 77,000 ಕೋಟಿಗೂ ಹೆಚ್ಚು ಬಂಡವಾಳವು ರಾಜ್ಯಕ್ಕೆ ಹರಿದು ಬಂದಿದೆ. ಸರ್ಕಾರದ ಒಂದು ನಿರ್ಣಯದಿಂದಾಗಿ ಈ ರೀತಿ ಅಸಮಾನತೆ ಕಡಿಮೆಯಾಗಿರುವುದು ಹೊಸ ದಾಖಲೆಯಾಗಿದೆ ಎಂದರು.

ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಎರಡನೇ ಸ್ಥಾನ ಇದೆ. ಆದರೆ ತೆರಿಗೆ ಪಾಲು ಪಡೆಯುವ ರಾಜ್ಯಗಳ ಪೈಕಿ 10ನೇ ಸ್ಥಾನದಲ್ಲಿದೆ ಎಂದು ನುಡಿದ ರಾಜ್ಯಪಾಲರು, ರಾಜ್ಯಕ್ಕೆ ಸಿಗಬೇಕಿರುವ ನ್ಯಾಯಯುತ ಪಾಲು ಪಡೆಯಲು ಎಲ್ಲ ಪ್ರಯತ್ನಗಳನ್ನೂ ಮಾಡಬೇಕಿದೆ ಎಂದರು.

ರಾಜ್ಯದ 240 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅವುಗಳಲ್ಲಿ 196 ತಡಲೂಕುಗಳನ್ನ ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ ಕಾರ್ಯಕ್ರಮಗಳನ್ನು ಕೈಗೊಳ್ಳಲು 31 ಜಿಲ್ಲೆಗಳಿಗೆ 324 ಕೋಟಿ ಬಿಡುಗಡೆ ಮಾಡಲಾಗಿದೆ. ಜನರ ಅನುಕೂಲಕ್ಕಾಗಿ ನಾಮಫಲಕಗಳ ಶೇಕಡ 60ರಷ್ಟು ಭಾಗವು ಕನ್ನಡದಲ್ಲಿ ಇರಬೇಕೆಂದು ತೀರ್ಮಾನಿಸಿ ಕಾನೂನು ರೂಪಿಸಿ ಅನುಷ್ಠಾನ ಮಾಡಲು ಕ್ರಮವಹಿಸಿದ್ದೇವೆ.

ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 ಕಾಯ್ದೆಯನ್ನು ರೂಪಿಸಲಾಗಿದೆ. ಸದ್ಯದಲ್ಲೇ ಅದು ಅನುಷ್ಠಾನಕ್ಕೆ ಬರಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಟನಲ್ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಟನಲ್ ನಿರ್ಮಾಣದ ಕುರಿತು ಸಾಧಕ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಭಾಷಣದಲ್ಲಿ ತಿಳಿಸಿದರು.

ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಭವ್ಯ ಸ್ವಾಗತ ದೊರೆಯಿತು. ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ ದ್ವಾರದಲ್ಲಿ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ ಅವರಿಗೆ ಮೈಸೂರು ಕರ್ನಾಟಿಕ್ ಬ್ಯಾಂಡ್, ಮೈಸೂರು ಇಂಗ್ಲಿಷ್ ಬ್ಯಾಂಡ್, ಮೌಂಟೆಡ್ ಲ್ಯಾನ್ಸ್ ಮೇನ್, ಮೌಂಟೆಡ್ ಹಾರ್ಸ್ ಎಸ್ಕಾರ್ಟ್, ಸಿಎಆರ್ ಪೊಲೀಸ್ ಬ್ಯಾಂಡ್ ಮೂಲಕ ಸ್ವಾಗತ ಕೋರಲಾಯಿತು. ರಾಜ್ಯಪಾಲ ಗೆಹ್ಲೋಟ್​ರನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು. ಈ ವೇಳೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಇತರರು ಹಾಜರಿದ್ದರು.

ವಿಧಾನಮಂಡಲ ಬಜೆಟ್​​ ಅಧಿವೇಶನ ಆರಂಭವಾಗಿದ್ದು, ಥಾವರ್ ಚಂದ್ ಗೆಹ್ಲೋಟ್‌ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದು, ಮಂಗಳವಾರದಿಂದ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ.16ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--