ವಿಧಾನಸಭೆ ಚುನಾವಣೆ: ದೊಡ್ಡಬಳ್ಳಾಪುರದಲ್ಲಿ 06 ಆಧುನಿಕ ಶೈಲಿಯ ತಪಾಸಣೆ ಕೇಂದ್ರಗಳ ಸ್ಥಾಪನೆ
ವಿಧಾನಸಭೆ ಚುನಾವಣೆ: ದೊಡ್ಡಬಳ್ಳಾಪುರದಲ್ಲಿ 06 ಆಧುನಿಕ ಶೈಲಿಯ ತಪಾಸಣೆ ಕೇಂದ್ರಗಳ ಸ್ಥಾಪನೆ

ದೊಡ್ಡಬಳ್ಳಾಪುರ, (ಮಾ.27): ಮುಂಬರುವ ಸಾರ್ವತ್ರಿಕ ಚುನಾವಣೆಗಳು ಕರ್ನಾಟಕ 2023ರ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳನ್ನು ಘೋಷಿಸಿದ ನಂತರ ತೆಗೆದುಕೊಳ್ಳಬೇಕಾದ ತಕ್ಷಣದ ಕ್ರಮಗಳ ಕುರಿತು ಕಾರ್ಯ ಪ್ರವೃತ್ತರಾಗುವಂತೆ ಜಂಟಿ ಮುಖ್ಯ ಚುನಾವಣಾಧಿಕಾರಿ ಟಿ.ಯೋಗೇಶ್ ಸೂಚನೆ ನೀಡಿದ್ದಾರೆ.

ಈ ಕುರಿತಂತೆ ರಾಜ್ಯದ ಎಲ್ಲಾ ಜಿಲ್ಲೆಯ ಚುನಾವಣೆ ಅಧಿಕಾರಿಗಳಿಗೆ ತುರ್ತು ಸಂದೇಶ ಕಳಿಸಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಪತ್ರದಲ್ಲಿನ ಸಂದೇಶದ ಅನ್ವಯ, ಕರ್ನಾಟಕದ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್- ಮೇ 2023 ರಲ್ಲಿ ನಡೆಯಲಿವೆ. ಭಾರತ ಚುನಾವಣಾ ಆಯೋಗವು ಇನ್ನು ಮುಂದೆ ಯಾವುದೇ ಸಮಯದಲ್ಲಿ ಚುನಾವಣೆಗಳನ್ನು ಘೋಷಿಸಬಹುದು ಮತ್ತು ಚುನಾವಣೆಗಳ ಘೋಷಣೆಯ ಮೊದಲು ಹಲವು ಪ್ರಮುಖ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕಾಗಿದೆ.

ಈ ನಿಟ್ಟಿನಲ್ಲಿ, ಮಾದರಿ ನೀತಿ ಸಂಹಿತೆಯ ಜಾರಿ ಸ್ವರೂಪಗಳನ್ನು ಸಿದ್ಧ ಉಲ್ಲೇಖಕ್ಕಾಗಿ ಲಗತ್ತಿಸಲಾಗಿದೆ. ಆದ್ದರಿಂದ, ಚುನಾವಣೆ ಘೋಷಣೆಯಾದ ನಂತರ ಡಿಇಒಎಸ್ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿನಂತಿಸಲಾಗಿದೆ.

06 ಚೆಕ್ ಪೊಸ್ಟ್: ಈ ಸೂಚನೆ ಬೆನ್ನಲ್ಲೇ ಚುನಾವಣೆ ಪ್ರಕ್ರಿಯೆ ತೀವ್ರಗೊಳಿಸಿರುವ ಅಧಿಕಾರಿಗಳು, ತಾಲೂಕಿನ 06 ಸ್ಥಳಗಳಲ್ಲಿ ಆಧುನಿಕ ಶೈಲಿಯ ಸುಸಜ್ಜಿತ ಚೆಕ್ ಪೊಸ್ಟ್ ನಿರ್ಮಿಸಿದ್ದಾರೆ.

ತಾಲೂಕಿನ ಹೊಸಹುಡ್ಯ ಕ್ರಾಸ್, ಚಿಕ್ಕಬೆಳವಂಗಲ ಶಾಲೆ ಮುಂಭಾಗ, ಆರೂಢಿ, ಕನಸವಾಡಿಯ ದೊಡ್ಡಬೆಳವಂಗಲ ಕ್ರಾಸ್ ಬಳಿ, ನಗರದ ಕೆಸಿಪಿ ಕಲ್ಯಾಣ ಮಂಟಪದ ವೃತ್ತದ ಸಮೀಪ ಹಾಗೂ ರಾಜಘಟ್ಟ ಗ್ರಾಮದಲ್ಲಿ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಕಳೆದ ಚುನಾವಣೆಯಲ್ಲಿ ತಪಾಸಣೆ ಕೇಂದ್ರಗಳನ್ನು ಶ್ಯಾಮಿಯಾನದಿಂದ ನಿರ್ಮಿಸಲಾಗುತ್ತಿದ್ದು, ಇದರಿಂದ 24X7 ತಪಾಸಣೆ ನಡೆಸುವ ಅಧಿಕಾರಿಗಳು ಮಳೆ, ಗಾಳಿಗೆ ತೊಂದರೆಗೆ ಒಳಗಾಗುತ್ತಿದ್ದ ಹಿನ್ನೆಲೆಯಲ್ಲಿ ಆಧುನಿಕ ಶೈಲಿಯಲ್ಲಿ ಚೆಕ್ ಪೊಸ್ಟ್ ಸ್ಥಾಪಿಸಲಾಗಿದೆ. ಈ ಕೇಂದ್ರಗಳಿಗೆ ವಿದ್ಯುತ್ ಪೂರೈಕೆ, ತಪಾಸಣೆಗೆ ಅನುಕೂಲವಾಗುವಂತೆ ಎರಡೂ ಬದಿಗೆ ಪ್ರಕಾಶಮಾನ ಬೆಳಕಿನ ದೀಪಗಳನ್ನು ಅಳವಡಿಸಲಾಗಿದೆ‌.

ಈ ಕ್ಷಣದ ಮಾಹಿತಿಯಂತೆ ಸ್ಥಾಪಿಸಲಾಗಿರುವ ಕೇಂದ್ರಗಳಿಗೆ ಇನ್ನೂ ಅಧಿಕಾರಿಗಳ ನೇಮಕ ಮಾಡಿಲ್ಲವಾಗಿದ್ದು, ಇಂದು ಅಥವಾ ನಾಳೆ ನೇಮಕವಾಗುವ ಸಾಧ್ಯತೆಯಿದೆ. ಅಲ್ಲದೆ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ನಡೆಯುತ್ತದೆ ಎಂದು ತಿಳಿದು ಬಂದಿದೆ‌.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--