ದೊಡ್ಡಬಳ್ಳಾಪುರ (Doddaballapura): ನೂತನ ವರ್ಷಾಚರಣೆಯ ಕ್ಷಣಗಣನೆ ಆರಂಭವಾಗಿದ್ದು, ಬೇಕರಿಗಳಲ್ಲಿ ತರಾವರಿ ಕೇಕ್ ತಯಾರಿ ಸೇರಿದಂತೆ ತಾಲೂಕಿನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಕಾನೂನು ಮೀರಿ ಹೊಸ ವರ್ಷಾಚರಣೆ ಮಾಡಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಹೊಸ ವರ್ಷಾಚರಣೆ ಮತ್ತೊಬ್ಬರಿಗೆ ತೊಂದರೆ ಉಂಟಾಗದಂತೆ ಆಚರಿಸುವಂತೆ ಸಲಹೆ ನೀಡಿದ್ದಾರೆ.
ರಾತ್ರಿ 12 ಗಂಟೆ ಬಳಿಕ ಯಾವುದೇ ಕಿರುಚಾಟ, ಮೆರವಣಿಗೆ, ಬೈಕ್ ರ್ಯಾಲಿ, ಪಟಾಕಿ ಸಿಡಿಸುವ ಆಚರಣೆಗೆ ಅವಕಾಶ ಇಲ್ಲವೆಂದು ಎಚ್ಚರಿಕೆ ನೀಡಿರುವ ಅವರು, ಸರ್ಕಾರದ ಅನುಮತಿ ಹೊಂದಿರುವ ಪ್ರದೇಶ ಹೊರತುಪಡಿಸಿ, ಬಹಿರಂಗ ಪ್ರದೇಶಗಳಲ್ಲಿ ಮದ್ಯ ಸೇವನೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಂತಿಯುತ್ತ ಹೊಸವರ್ಷದ ಆಚರಣೆ ಸಲುವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ, ಸೂಕ್ತ ಬಂದೂಬಸ್ತ್ ಕೈಗೊಂಡಿದ್ದು, ಗಸ್ತು ವ್ಯವಸ್ಥೆ, ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ.
ಹೊಸ ವರ್ಷಾಚರಣೆ ನಾವು ಅಚರಿಸುವಂತೆ ಇನ್ನೊಬ್ಬರಿಗೂ ಕೂಡ ಆಚರಿಸಲು ಅವಕಾಶ ನೀಡಬೇಕಿದೆ ಎಂಬುದನ್ನು ಅರಿತು ಶಾಂತಿಯುತವಾಗಿ ಆಚರಿಸುವಂತೆ ಅಮರೇಶ್ ಗೌಡ ಅವರು ಮನವಿ ಮಾಡಿದ್ದಾರೆ.