ಆನೇಕಲ್: ಪತ್ನಿಯ ಶೀಲವನ್ನು ಶಂಕಿಸಿದ ಪತಿಯೋರ್ವ ಆಕೆಯ ತಲೆಗೆ ಸುತ್ತಿಗೆಯಿಂದ ಬಲವಾಗಿ ಹೊಡೆದು ಭೀಕರವಾಗಿ ಹತ್ಯೆಗೈದಿರುವ (Murder) ಘಟನೆ ತಾಲೂಕಿನ ಮೇಡಹಳ್ಳಿ ನಡೆದಿದೆ.
ಅತ್ತಿಬೆಲೆಯ ಮೇಡಹಳ್ಳಿ ಸಮೀಪದ ಜನಪ್ರಿಯ ಖಾಸಗಿ ಅಪಾರ್ಟೆಂಟ್‌ನಲ್ಲಿ ಬರ್ಬರವಾಗಿ ಈ ಹತ್ಯೆ ನಡೆದಿದ್ದು, ಕೊಲೆಯಾದ ಮಹಿಳೆ ಬಿಹಾರ ಮೂಲದ 35 ವರ್ಷದ ಮಲ್ಲಿಕಾ ಖಾತೂನ್ ಎಂದು ತಿಳಿದುಬಂದಿದೆ.
ಸದ್ಯ ಆಕೆಯ ಪತಿ ಮೊಹಮ್ಮದ್ ಸಯ್ಯದ್ ಅನ್ಸಾರಿ ಎಂಬ ಆರೋಪಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಹಲವು ಬಾರಿ ಮಲ್ಲಿಕಾಳೊಂದಿಗೆ ಸಯ್ಯದ್ ಗಲಾಟೆ ಮಾಡುತ್ತಿದ್ದ ಎಂಬ ಆರೋಪವಿದೆ. ಇದೇ ವಿಚಾರಕ್ಕೆ ಪದೇ ಪದೇ ಗಲಾಟೆ ನಡೆದಿದ್ದು, ಇಂದು ಬೆಳಗ್ಗೆ ಇಬ್ಬರ ನಡುವಿನ ಕಿತ್ತಾಟ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗುತ್ತಿದೆ.
ಆರೋಪಿಯು ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದು ಇಬ್ಬರು ಹೆಣ್ಣು ಒಂದು ಗಂಡು ಮಗು ಹೊಂದಿದ್ದಾನೆಂದು ತಿಳಿದುಬಂದಿದೆ.
ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಅತ್ತಿಬೆಲೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.