Daily story: ಒಂದು ದಟ್ಟ ಕಾಡು, ಆ ಕಾಡಿಗೆ ರಾಜ ಮೃಗರಾಜನಿದ್ದ. ಅವನ ಮಂತ್ರಿ ಹುಲಿ. ಕುದುರೆ, ಆನೆ, ಮೊಲ, ಜಿಂಕೆ ಉಳಿದ ಪ್ರಾಣಿಗಳು ಸೈನಿಕರಂತೆ ಇದ್ದರು.
‘ನಾ ಹೆಚ್ಚು, ನಾ ಹೆಚ್ಚು’ ಎನ್ನುವ ಭಾವನೆ ಎಲ್ಲರಲ್ಲಿಯೂ ಇತ್ತು. ಕಾಡಿನ ರಾಜ ಸಿಂಹನಿಗೆ ವಯಸ್ಸಾಯಿತು. ಅದು ಮುಂದಿನ ಉತ್ತರಾಧಿಕಾರಿಯ ಹುಡುಕಾಟದಲ್ಲಿತ್ತು. ಕುದುರೆಗಳ ಸಾಮರ್ಥ್ಯ, ಜಿಂಕೆ ಮೊಲಗಳ ಮುಗ್ಧತೆ ಕಾನನದ ಅಧಿಪತ್ಯದ ಗದ್ದುಗೆಯ ಆಸೆಯಿಂದ ಹಿಂದೆ ಸರಿಯಲು ಕಾರಣವಾದವು.
ಮಂತ್ರಿ ಹುಲಿರಾಯ ಬಹಳ ಆತುರದಿಂದ ತನ್ನಿಂದಲೇ ಸಿಂಹವು ರಾಜನಾಗಿರುವುದು ಎಂದು ಅಹಂಕಾರದಿಂದ ಮೆರೆಯುತ್ತಿತ್ತು.
ಆನೆ ತಾನೂ ಏಕೆ ಸುಮ್ಮನಿರಬೇಕು? ‘ನಾನು ಕೂಡಾ ನೇತೃತ್ವ ವಹಿಸಲಿಕ್ಕೆ ಸಿದ್ಧನಿದ್ದೇನೆ’ ಎಂದು ನಿರ್ಧರಿತು.
ಹೀಗೆ ಒಂದು ದಿನ ತನ್ನ ಅಭಿಲಾಷೆಯನ್ನು ಉಳಿದೆಲ್ಲಾ ಮುಗ್ಧ ಪ್ರಾಣಿಗಳ ಮುಂದೆ ವ್ಯಕ್ತಪಡಿಸಿದಾಗ ಅದಕ್ಕೆ ಒಪ್ಪಿಕೊಂಡು ಬೆಂಬಲಿಸಿದವು. ಮೃಗರಾಜನಿಗೆ ಹುಲಿಯ ಸ್ವಭಾವ ಗೊತ್ತಿತ್ತು. ಇದು ಕಾಡಿನ ಸಂಪ್ರದಾಯ ಉಳಿಸುವುದಿಲ್ಲ. ಅದು ಆನೆಗೆ ಪರೋಕ್ಷವಾಗಿ ಬೆಂಬಲಿಸುತ್ತಿತ್ತು.
ಒಂದು ದಿನ ಇನ್ನೊಂದು ಕಾಡಿನ ಸಿಂಹವು ಈ ಕಾಡನ್ನು ವಶಪಡಿಸಿಕೊಳ್ಳಲು ಹವಣಿಸಿತು. ಇವರ ಜೊತೆ ಮಲ್ಲಯುದ್ಧ. ಇತರೆ ದೈಹಿಕ ಯುದ್ಧದಲ್ಲಿ ಗೆಲ್ಲಲಿಕ್ಕೆ ಆಗುವುದಿಲ್ಲ. ಬುದ್ಧಿಯಿಂದ ಗೆಲ್ಲಬೇಕು ಎಂದು ಉಪಾಯ ಮಾಡಿತು.
ಅದು ಈ ಕಾಡಿಗೆ ಬಂದು ನಾಯಕ ಮೃಗರಾಜನಿಗೆ ಹೇಳುತ್ತಾ ‘ನಾವು ಒಂದು ಚದುರಂಗ ಸ್ಪರ್ಧೆಯನ್ನು ಏರ್ಪಡಿಸೋಣ. ಸೋತರೆ ನಾವು ನಿಮಗೆ ಶರಣಾಗುತ್ತೇವೆ. ಗೆದ್ದರೆ ನೀವು ನಮ್ಮ ಸೇವಕರಾಗಿ ಮುಂದುವರೆಯಬೇಕು’ ಎಂದು ಹೇಳಿತು. ಈ ಸವಾಲಿಗೆ ಒಪ್ಪಿ ಸಿಂಹವು ಕಾಡಿನ ಎಲ್ಲ ಪ್ರಾಣಿಗಳ ಸಭೆ ಕರೆದು ನೆರೆಯ ಕಾಡಿನ ರಾಜ ಹಾಕಿದ ಸವಾಲ್ ಬಗ್ಗೆ ವಿವರಿಸಿತು.
‘ಸುಮ್ಮನಿದ್ದರೆ ನಾವು ಹೇಡಿಗಳಾಗುತ್ತವೆ. ಹಾಗಾಗಿ ನಾವು ಒಗ್ಗಟ್ಟಾಗಿ ಅವರ ವಿರುದ್ಧ ಗೆಲ್ಲಬೇಕು’ ಎಂದು ಉಪದೇಶಿಸಿತು. ಎಲ್ಲ ಪಶುಗಳು ಸಮ್ಮತಿಸಿದರು.
ಸಭೆ ಮುಗಿದ ಬಳಿಕ ಸಿಂಹ, ಹುಲಿಯನ್ನು ಆಮಂತ್ರಿಸಿ ಸಲಹೆ ನೀಡುತ್ತಾ, ‘ನೀನು ಅಹಂಕಾರ ಬಿಟ್ಟು ಎಲ್ಲರೊಂದಿಗೆ ಒಗ್ಗಟ್ಟಾಗಿರಬೇಕು. ಒಗ್ಗಟ್ಟಾಗಿದ್ದರೆ ಸಂತೋಷ ಒಂಟಿಯಾಗಿದ್ದರೆ ಉಪವಾಸ. ನಾವು ಬಲಿಷ್ಠರಿದ್ದರೂ ಸಣ್ಣವರ ಸಹಾಯ ಬೇಕು. ಅಪಾಯ ಬಂದಾಗ ಹುಲ್ಲಕಡ್ಡಿ ಕೂಡಾ ಆಸರೆವಾಗುತ್ತದೆ’ ಎಂದು ಹಿತನುಡಿಗಳನ್ನು ಹೇಳಿತು. ಆದರೆ ಸಿಂಹದ ಉಪದೇಶದ ಮಾತುಗಳು ಅದರ ಅಹಂಭಾವ ಸ್ವಭಾವವನ್ನು ಬದಲಾಯಿಸಲಿಲ್ಲ. ‘ನಾನೇ ಶಕ್ತಿವಂತ. ನನ್ನಿಂದ ಎಲ್ಲವು ಸಾಧ್ಯ. ಯಾವುದೇ ಪ್ರಾಣಿಗಳಿಂದ ನನಗೆ ಸಹಾಯ ಬೇಕಿಲ್ಲ. ಸಣ್ಣವರ ಸಹಕಾರ ಇಷ್ಟಪಡಲ್ಲ. ಅವರ ಜೊತೆ ಸೇರುವುದಿಲ್ಲ’ ಎಂದಿತು.
ಎರಡು ಕಾಡಿನ ಪ್ರಾಣಿಗಳ ‘ಚದುರಂಗ ಸ್ಪರ್ಧೆ’ ಪ್ರಾರಂಭವಾಯಿತು. ಆನೆಗಳ ಗುಂಪು ತಮ್ಮ ತಂಡವೇ ಗೆಲ್ಲಬೇಕು. ಹುಲಿಗೆ ಬುದ್ದಿ ಕಲಿಸಬೇಕು. ಅದರ ಸಹಾಯವಿಲ್ಲದೆ ಗೆದ್ದು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿಬೇಕು ಎಂದು ಆತ್ಮವಿಶ್ವಾಸದಿಂದ ಆಡಲು ಪ್ರಾರಂಭಿಸಿದವು.
ಆ ಕಡೆ ಕಾಡಿನ ಗುಂಪಿನಲ್ಲಿಯೂ ಕೆಲವು ನ್ಯೂನ್ಯತೆಗಳಿದ್ದವು. ಆ ಕಡೆ ರಾಜ ಸಿಂಹನಿಗೆ ನಾವು ಈ ಕಾಡನ್ನು ವಶಪಡಿಸಿಕೊಳ್ಳುತ್ತೇವೆ ಎಂಬ ಆತ್ಮವಿಶ್ವಾಸವಿತ್ತು. ಆದರೆ ಮಂತ್ರಿ ಇತರೆ ಎಲ್ಲ ಸದಸ್ಯರಿಗೆ ನಿರ್ದಿಷ್ಟವಾದ ಗುರಿ ಹಾಗೂ ಛಲವಿರಲಿಲ್ಲ. ನಾಯಕನ ಸರ್ವಾಧಿಕಾರಿ ಧೋರಣೆ ಇಷ್ಟ ಆಗುತ್ತಿರಲಿಲ್ಲ. ಹೀಗೆ ದೃಢ ನಿರ್ಧಾರವಿಲ್ಲದೆ ನಾಯಕನ ಒತ್ತಾಯಕ್ಕೆ ಮಣಿದು ಆಡಲು ಬಂದಿದ್ದವು.
ಆಟ ಪ್ರಾರಂಭವಾಯಿತು. ಆ ಕಡೆಯಿಂದ ಈ ಕಡೆಗೆ ಒಂದೊಂದೇ ಪ್ರಾಣಿಗಳು ಚಲನೆಯಾಗಿ ಎರಡು ಕಡೆ ಕೆಲವು ಮುಗ್ಧ ಪ್ರಾಣಿಗಳು ಆಹುತಿಯಾದವು. ಆಟ ರೋಚಕ ಹಂತದಲ್ಲಿತ್ತು. ಈ ಕಡೆಯ ಹುಲಿರಾಯ ಆತುರ ಸ್ವಭಾವದವ. ‘ನಾನೇ ಗೆಲ್ಲಬೇಕು. ನನ್ನಿಂದಲೇ ಜಯಿಸಬೇಕು’ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿತ್ತು. ಆನೆಗಳು ಗಾಬರಿಯಾದವು. ಮತ್ತೆ ಆ ಹುಲಿ ಈ ಕುದುರೆ, ಮೊಲ, ಜಿಂಕೆಗಳನ್ನು ತಿಂದಿತು. ಕೇವಲ ಎರಡು ಆನೆಗಳು ಕೆಲವೇ ಕೆಲವು ಮುಗ್ಧ ಪ್ರಾಣಿಗಳು ಉಳಿದವು.
ಈ ಕಡೆ ಗುಂಪಿನ ಸದಸ್ಯರಿಗೆ ಬೆವರು ಇಳಿಯಿತು. ನಾಯಕ ಸಿಂಹವು ಆನೆಗಳಿಗೆ ‘ಬಹಳ ಜಾಗರೂಕವಾಗಿರಬೇಕು. ನೀವೇ ನಮ್ಮ ಗೌರವವನ್ನು ಕಾಪಾಡಬೇಕು. ಅವಸರ ಮಾಡಬೇಡಿರಿ. ಜಾಣ್ಣೆಯಿಂದ ಆಟ ಮುಂದುವರೆಸಿ’ ಎಂದು ಸಮಾಧಾನವನ್ನು ಹೇಳಿತು. ಅವು ಸ್ಥಿರ ಮನಸ್ಸಿನಿಂದ ಆಟ ಮುಂದುವರೆಸಿದವು.
ಅವಸರದಿಂದ ಓಡುತ್ತಿದ್ದ ವಿರೋಧಿ ಹುಲಿಯನ್ನು ಎರಡು ಆನೆಗಳು ಎರಡು ಕಡೆಯಿಂದ ಮುತ್ತಿಗೆ ಹಾಕಿ ಕೊಂದವು. ಜಾಣತನದಿಂದ ಒಂದೊಂದು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಾ ವಿರೋಧಿ ಆನೆಗಳನ್ನು ಖೆಡ್ಡಾದಲ್ಲಿ ಕೆಡವಿ ಕೊನೆಗೆ ರಾಜನಾದ ಸಿಂಹವನ್ನು ಮುತ್ತಿಗೆ ಹಾಕಿದ್ದರಿಂದ ಬೆದರಿ ತಮ್ಮ ಸೋಲನ್ನು ಒಪ್ಪಿ ಶರಣಾದವು.
ಆತ್ಮವಿಶ್ವಾಸದಿಂದ ಆನೆಗಳು ತಮ್ಮ ರಾಜ್ಯವನ್ನು ವಿಸ್ತರಿಸಿ ರಾಜನ ಗೌರವ ಇಮ್ಮಡಿಗೊಳಿಸಿದವು. ಹುಲಿಗೆ ಬುದ್ದಿ ಕಲಿಸಿದವು. ಕೊನೆಗೆ ಬುದ್ದಿ ಬಂದ ಹುಲಿ ತನ್ನಲ್ಲಿರುವ ಅಹಂಕಾರವನ್ನು ತೆಗೆದುಹಾಕಿ ಕಾಡಿನಲ್ಲಿ ಎಲ್ಲರೊಂದಿಗೆ ಸಂತೋಷದಿಂದ ಬಾಳ ತೊಡಗಿತು.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)