ದೊಡ್ಡಬಳ್ಳಾಪುರ: ಅಭಿವೃದ್ಧಿ ಕಾರ್ಯಗಳನ್ನು ಮರೆತಿರುವ ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಂಕಿ ಹಚ್ಚುವುದನ್ನೇ ಕಾಯಕ ಮಾಡಿಕೊಂಡಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ. (T Venkataramanaiah) ಆಕ್ರೋಶ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸದನದಲ್ಲಿ ಗೃಹ ಸಚಿವ ಲಘು ಹೇಳಿಕೆ ನೀರುವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸಮಿತಿವತಿಯಿಂದ ನಗರದ ತಾಲೂಕು ಕಚೇರಿ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ಎಲ್ಲಿಯೇ ಆಗಲಿ ಬಿಜೆಪಿ ಬೆಂಕಿ ಹಚ್ಚುವುದನ್ನೇ ಕಾಯಕ ಮಾಡಿಕೊಂಡಿದೆ. ಚಳಿಗಾಲದ ಅಧಿವೇಶನದಲ್ಲಿ ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಲಘುವಾಗಿ ಮಾತನಾಡಿದ್ದು, ಅಂಬೇಡ್ಕರ್ ಕುರಿತು ಅವರಿಗಿರುವ ಮನಸ್ಥಿತಿಯನ್ನು ಬಯಲು ಮಾಡಿದ್ದಾರೆ.
ಈ ರೀತಿ ಲಘು ಹೇಳಿಕೆ ನೀಡುವ ಅಮಿತ್ ಶಾ ಅವರಿಗೆ ಈ ಹಿಂದೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿಕೆ ನೆನಪಿಸುತ್ತೇನೆ. ಅಂಬೇಡ್ಕರ್ ಅವರು ಸಂವಿಧಾನದ ರಚನೆ ಮಾಡಿದಕ್ಕೆ ಕುರಿ ಕಾಯುತ್ತಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದರು, ಟೀ ಮಾಡುತ್ತಿದ್ದ ಮೋದಿ ಪ್ರಧಾನಿ ಆದರೂ, ಅಮಿತ್ ಶಾ ಗೃಹ ಸಚಿವರಾದರು, ಇಲ್ಲವಾಗಿದ್ದರೆ ಮೋದಿ ಟೀ ಮಾರುತ್ತಲೇ ಇರಬೇಕಿತ್ತು ಎಂದು ಕುಟುಕಿದರು.
ಇನ್ನೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಸದನದಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳಕರ್ ವಿರುದ್ದ ಅಶ್ಲೀಲವಾಗಿ ಮಾತನಾಡುತ್ತಾರೆ. ಇವರಿಗೆ ಹೆಣ್ಣು ಮಕ್ಕಳ ಬಗ್ಗೆ ಗೌರವವಿಲ್ಲ. ಆತನ ಬಚ್ಚಲು ಬಾಯಲ್ಲಿ ಬೇಕಾಬಿಟ್ಟಿ ಮಾತು ಹೊಸತೇನಲ್ಲ, ಈ ಮುಂಚೆ ನಿತ್ಯ ಸುಮಂಗಲಿಯರು ಪದ ಬಳಕೆ ಮಾಡಿ, ಛೀಮಾರಿಗೆ ಒಳಗಾಗಿದ್ದ.
ಬಿಜೆಪಿಯವರಿಗೆ ಅಧಿಕಾರ ಬೇಕೆ ಹೊರತು ಅಭಿವೃದ್ಧಿ ಬೇಕಾಗಿಲ್ಲ. ಬರೀ ಬೆಂಕಿ ಹಚ್ಚುವುದನ್ನು ಕಾಯಕ ಮಾಡಿಕೊಂಡು ಜನರನ್ನು ಮರಳು ಮಾಡುವುದೇ ಆಗಿದೆ. ಉದಾಹರಣೆಗೆ ದೊಡ್ಡಬಳ್ಳಾಪುರದ ಅಭಿವೃದ್ಧಿ ದಿಕ್ಕು ಎತ್ತ ಸಾಗುತ್ತಿದೆ ಎಂಬುದು ಜನರ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಆದರೂ ಜನಪರ ಕಾಳಜಿ ಇರುವವರು ಜನತೆ ಬೆಂಬಲಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯರಾದ ಜಿ.ಲಕ್ಷ್ಮೀಪತಿ, ಹೇಮಂತ್ ರಾಜ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಪಿ ಜಗನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿವೆಂಕಟೇಶ್ ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ನಿರ್ದೇಶಕ ಅಂಜನಮೂರ್ತಿ, ಭೂ ನ್ಯಾಯಮಂಡಳಿ ಸದಸ್ಯ ಆದಿತ್ಯ ನಾಗೇಶ್, ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ನಗರಸಭೆ ಸದಸ್ಯರಾದ ಹೆಚ್.ಎಸ್.ಶಿವಶಂಕರ್, ಆನಂದ್, ನಾಗರಾಜ್, ಅಖಿಲೇಶ್, ವಾಣಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇವತಿ ಅನಂತರಾಮ್, ಮುಖಂಡರಾದ ಮಂಜುನಾಥ್, ಮುನಿಕೃಷ್ಣಪ್ಪ, ಲಕ್ಷ್ಮೀಪತಿ, ರಘು ನಂದನ್ ಮತ್ತಿತರರಿದ್ದರು.