ಹೈದರಾಬಾದ್: ನಿನ್ನೆ ಸದನದಲ್ಲಿ ಸಿಎಂ ರೇವಂತ್ ರೆಡ್ಡಿ ಅವರು ಪುಷ್ಪ 2 ಸಿನಿಮಾ ಪ್ರೀಮಿಯರ್ ಶೋ ವೇಳೆ ಉಂಟಾದ ಕಾಲ್ತುಳಿತ, ಅಲ್ಲು ಅರ್ಜುನ್ ಬಂಧನದ ಬಗ್ಗೆ ವಿಸ್ತ್ರುತ ವರದಿ ನೀಡುತ್ತಿದ್ದಂತೆ, ನಟ ಅಲ್ಲು ಅರ್ಜುನ್ (Allu Arjun) ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇದರಿಂದ ಕೆರಳಿರುವ ಕೆಲ ಅಭಿಮಾನಿಗಳು ಸಿಎಂ ರೇವಂತ್ ರೆಡ್ಡಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡು ಅಶ್ಲೀಲ ಭಾಷೆಯಲ್ಲಿ ನಿಂದಿಸುತ್ತಿದ್ದಾರೆ.
ಈ ಕುರಿತು ಮಾಹಿತಿ ತಿಳಿದ ನಟ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಮನವಿ ಮಾಡಿದ್ದು, ಅಭಿಮಾನಿಗಳ ಹೆಸರಲ್ಲಿ ನಕಲಿ ಖಾತೆ ಬಳಸಿ ಅಶ್ಲೀಲ ಸಂದೇಶ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ತಮ್ಮ ಅಭಿಮಾನಿಗಳು ಎಂದು ಹೇಳಿಕೊಂಡು ಯಾರಾದರೂ ಅಸಭ್ಯವಾಗಿ ಪೋಸ್ಟ್ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಲ್ಲು ಅರ್ಜುನ್ ಅವರು ಎಚ್ಚರಿಸಿದ್ದಾರೆ.
‘ನನ್ನ ಅಭಿಮಾನಿಗಳು ನಿಮ್ಮ ಭಾವನೆಗಳನ್ನು ಜವಾಬ್ದಾರಿಯುತವಾಗಿ ವ್ಯಕ್ತಪಡಿಸಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಯಾವುದೇ ರೀತಿಯ ಅಸಭ್ಯ ಭಾಷೆ ಬಳಸಬೇಡಿ’.
‘ನಕಲಿ ಖಾತೆಗಳ ಮೂಲಕ ನನ್ನ ಅಭಿಮಾನಿಗಳು ಎಂದು ಹೇಳಿಕೊಂಡು ಯಾರಾದರೂ ಅಶ್ಲೀಲ ಭಾಷೆ ಬಳಕೆ ಮಾಡಿದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಂಥ ಪೋಸ್ಟ್ಗಳ ಕಡೆಗೆ ಅಭಿಮಾನಿಗಳು ಗಮನ ಕೊಡಬಾರದು ಎಂದು ಅಭಿಮಾನಿಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ’ ಎಂದು ಅಲ್ಲು ಅರ್ಜುನ್ ಪೋಸ್ಟ್ ಮಾಡಿದ್ದಾರೆ.