ದೊಡ್ಡಬಳ್ಳಾಪುರ (Doddaballapura): ಕನ್ನಡ ಭಾಷೆಯ ಸಮೃದ್ಧ ಪದಕೋಶಕ್ಕೆ ನಾವು ಸದಾ ಕಿಟ್ಟಲ್ ಅವರನ್ನು ಸ್ಮರಿಸಬೇಕು. ಕನ್ನಡ ಭಾಷೆ ಸೇರಿದಂತೆ ಯಾವುದೇ ಒಂದು ಭಾಷೆಯ ಪ್ರೌಢಿಮೆ ಹೆಚ್ಚಲು ಶಬ್ಧಕೋಶಗಳು ಮುಖ್ಯವಾಗಿರುತ್ತವೆ ಎಂದು ರಾಜ್ಯದ ಹೈಕೋರ್ಟ್ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಹೇಳಿದರು.
ಅವರು ತಾಲ್ಲೂಕು ವಕೀಲರ ಸಂಘದ ವತಿಯಿಂದ ನಗರದ ನ್ಯಾಯಾಲಯ ಆವರಣದಲ್ಲಿ ನಡೆದ 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ವಕೀಲರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯೋತ್ಸವಗಳ ಆಚರಣೆಯ ಜೊತೆಗೆ ಪ್ರತಿಯೊಬ್ಬ ಕನ್ನಡಿಗರು ಎಲ್ಲಾ ಕ್ಷೇತ್ರಗಳಲ್ಲೂ ಭಾಷಾ ಬಳಕೆಯ ಕಡೆಗೂ ಆದ್ಯತೆ ನೀಡಬೇಕು. ಆಗ ಮಾತ್ರ ನಮ್ಮ ಭಾಷೆ ಬದಲಾದ ಕಾಲಮಾನದ ಶಬ್ಧಗಳನ್ನು ಒಳಗೊಂಡು ಬೆಳೆಯಲು ಸಹಕಾರಿಯಾಗಲಿದೆ.
ಅನ್ಯ ಭಾಷೆಯಿಂದ ನಮ್ಮ ಭಾಷೆಗೆ ಅನುವಾದ ಮಾಡುವಾಗ ನಮ್ಮ ಭಾಷೆ ಮೇಲಿನ ಹಿಡಿತ ಸಾಧಿಸಿರುವುದು ಮುಖ್ಯವಾಗುತ್ತದೆ. ನಮ್ಮ ಮನೆಗಳಿಂದಲೇ ಭಾಷೆಯ ಕ್ರಮಬದ್ದ ಕಲಿಕೆ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ನಗರದ ಹಿರಿಯ ವಕೀಲರಾದ ಅಸದುಲ್ಲಾಖಾನ್ ಮಾತನಾಡಿ, ಫಜಲ್ ಅಲಿ ಆಯೋಗ ನೀಡಿದ ವರದಿಯು ದೇಶದಲ್ಲಿ ಭಾಷಾವಾರು ರಾಜ್ಯಗಳ ಉದಯಕ್ಕೆ ನಾಂದಿಯಾಗಿದೆ. ರಾಜ್ಯದ ಏಕೀಕರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಲ್ಲರನ್ನೂ ಒಂದು ವೇದಿಕೆಯಡಿ ಬರುವಂತೆ ಮಾಡಿದೆ. ಏಕೀಕರಣ ಹೋರಾಟದಲ್ಲಿನ ಎಲ್ಲಾ ಮಹನೀಯರನ್ನು ನಾವು ರಾಜ್ಯೋತ್ಸವ ಸಂದರ್ಭದಲ್ಲಿ ಸ್ಮರಿಸಬೇಕು. ಕನ್ನಡ ಭಾಷೆಯನ್ನು ಮಾತನಾಡುವ ಎಲ್ಲಾ ಜಾತಿ,ಧರ್ಮದವರು ಒಂದು ಆಡಳಿತದ ಅಡಿಯಲ್ಲಿ ಬದುಕು ರೂಪಿಸಿಕೊಳ್ಳಲು ದಾರಿ ಮಾಡಿಕೊಟ್ಟಿದ್ದಾರೆ ಎಂದರು.
ನ್ಯಾಯಾಲಯದಲ್ಲೂ ಕನ್ನಡ ಭಾಷೆ ಬಳಕೆಯ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ನಮ್ಮ ನ್ಯಾಯಾಲಯದಲ್ಲಿನ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಮೇಶ್ ದುರಗಪ್ಪ ಏಕಬೋಟೆ ಅವರು ಆದೇಶಗಳಿಂದ ಮೊದಲುಗೊಂಡು ತೀರ್ಪುಗಳವರೆಗೂ ಕನ್ನಡ ಭಾಷೆ ಬಳಸುವುದು ಹಾಗೆಯೇ ಇಂಗ್ಲಿಷ್ ಭಾಷೆ ಮೇಲಿನ ಅವರ ಪ್ರಭುದ್ದತೆಯು ಎಲ್ಲಾ ಯುವ ವಕೀಲರಿಗೆ ಸ್ಪೂರ್ತಿಯಾಗಿದೆ. ಯಾರೂ ಸಹ ಯಾವುದೇ ಭಾಷೆಯ ಮೇಲು ಭಾಷಾ ಮತ್ಸರ ಬೆಳೆಸಿಕೊಳ್ಳಬಾರದು ಎಂದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಅವರು ಮಾತನಾಡಿ, ನ್ಯಾಯಾಲಯಗಳಲ್ಲಿ ಉತ್ತಮ ತೀರ್ಪು, ಆದೇಶಗಳು ಬರಲು ವಕೀಲರು ಅಷ್ಟೇ ಉತ್ತಮವಾಗಿ ವಾದಗಳನ್ನು ಮಂಡಿಸುವುದು ಮುಖ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರವಿಮಾವಿನಕುಂಟೆ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್.ಎ.ಶಿಲ್ಪ, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಜೆ.ಎಸ್.ಪ್ರವೀಣ್, 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ರವಿ ಬೆಟಗಾರ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.
ಎಂ.ಎಸ್.ನರಸಿಂಹಮೂರ್ತಿ ತಂಡದವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.