ಮಂಡ್ಯ: ಇಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (Kannada sahitya sammelana) ಉದ್ಘಾಟನಾ ಭಾಷಣ ಮಾಡಿದ ಸಮ್ಮೇಳನಾಧ್ಯಕ್ಷರಾದ ಡಾ.ಗೊ.ರು.ಚನ್ನಬಸಪ್ಪ ಅವರು, ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲೀ ಕೂಡಲೇ ನಿಲ್ಲಿಸಬೇಕು. ತಂತ್ರಜ್ಞಾನದ ನೆರವು ಪಡೆದು ಕನ್ನಡವನ್ನು ಕಿರಿಯ ಪೀಳಿಗೆಯ ಎದೆಗೆ ಬೀಳುವ ಅಕ್ಷರವಾಗಿಸಬೇಕು ಎಂದು ಕರೆ ನೀಡಿದರು.
ಅಗತ್ಯವೆನಿಸಿರುವ ಇಂಗ್ಲೀಷ್ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಬೋಧನೆಗೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು ಮತ್ತು ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು, ಎಲ್ಲ ಸೌಲಭ್ಯಗಳಿಂದ ಪೂರ್ಣವಾಗಿ ಸಜ್ಜುಗೊಳಿಸಬೇಕು. ರಾಜ್ಯದ ಆಯವಯ್ಯದಲ್ಲಿ ಕನಿಷ್ಟ ಶೇ.15 ರಷ್ಟು ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಹೇಳಿದರು.
ಕನ್ನಡ ಭಾಷೆ ಸಮೃದ್ಧ, ಶ್ರೀಮಂತವಾಗಿ ಬೆಳೆಯುತ್ತಿದೆ. ಕನ್ನಡ ವಿಸ್ತಾರವಾಗ್ತಿದೆ, ಆದರೆ ಬಳಕೆ ಆಗ್ತಿಲ್ಲ ಎಂದು ಸಮ್ಮೇಳನಾಧ್ಯಕ್ಷರಾದ ಡಾ.ಗೊ.ರು.ಚನ್ನಬಸಪ್ಪ ಅವರು ಬೇಸರ ವ್ಯಕ್ತಪಡಿಸಿದರು.
ಕನ್ನಡ ಮಾಧ್ಯಮದಲ್ಲೇ ಶಿಕ್ಷಣವಿರಬೇಕು. ನಾಡಿನ ಪ್ರತಿ ಮಕ್ಕಳಿಗೆ ಶಿಕ್ಷಣ ದೊರಕಿಸಲು ಕ್ರಮವಹಿಸಬೇಕು. ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು, ಎಲ್ಲ ಸೌಲಭ್ಯಗಳಿಂದ ಪೂರ್ಣವಾಗಿ ಸಜ್ಜುಗೊಳಿಸಬೇಕು. ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಇದರಿಂದ ಕನ್ನಡ ಸರ್ಕಾರಿ ಶಾಲೆ ಮುಚ್ಚಲಾಗುತ್ತಿದೆ. ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆ ಮುಚ್ಚದಂತೆ ಕ್ರಮವಹಿಸಬೇಕು. ಭಾರತಕ್ಕೆ ಮಾದರಿಯಾಗುವ ಶಿಕ್ಷಣ ಕ್ರಮವನ್ನ ಜಾರಿ ಮಾಡಬೇಕು. ಆಗ ಎಲ್ಲರಿಗೂ ಸಮಾನ ಶಿಕ್ಷಣ ಸಿಗುತ್ತದೆ ಎಂದರು.
ಭಾಷಣದ ಪ್ರಾರಂಭದಲ್ಲೇ ಹಾಸ್ಯ ಚಟಾಕಿ
ಪರಿಷತ್ ಧ್ವಜ ಸ್ವೀಕರಿಸದವರು, ಧ್ವಜ ಹಸ್ತಾಂತರಿಸಿದವರು ಮುದುಕರಾಗಿದ್ದಾರೆ. ಸಮ್ಮೇಳನ ಅಧ್ಯಕ್ಷತೆಗೆ ನಾನು ಅರ್ಹನೋ ಗೊತ್ತಿಲ್ಲ. ನನಗೆ ಅವಕಾಶ ಕೊಟ್ಟ ಸರ್ಕಾರಕ್ಕೆ ಕೃತಜ್ಞತೆ. ಅನಿರೀಕ್ಷವಾಗಿ ಬಂದ ಅವಕಾಶವನ್ನ ಹಿಂಜರಿಕೆಯಿಲ್ಲದೆ ಕರ್ತವ್ಯ ನಿರ್ವಹಿಸಿದ್ದೇನೆ. ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದೀರಿ ಎಂದಾಗ ನಾನು ಬೆರಗಾದೆ. ಇಷ್ಟು ವಯಸ್ಸಾದವರನ್ನ ಎಂದು ಸಮ್ಮೇಳನಾಧ್ಯಕ್ಷರಾಗಿ ಮಾಡಿಲ್ಲ. ಗಡುವು ತೀರಿದ ನನ್ನನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿದ್ದಾರೆ. ತಾನೂ ಮುದುಕ ಎಂದು ಹಾಸ್ಯ ಚಟಾಕಿ ಹಾರಿಸಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಮಂಡ್ಯ ಆರ್ಥಿಕವಾಗಿ ಸಮೃದ್ಧವಾಗಿದ್ದು, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಸಾಹಿತ್ಯಕವಾಗಿ ಹೆಸರು ಮಾಸಿರುವ ಜಿಲ್ಲೆಯಾಗಿದೆ. ಆದರೆ ರಾಜಕೀಯ, ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದೆ ಎಂದರು.