ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿರುವ ಪಾಲನಜೋಗಿಹಳ್ಳಿ ಕೆರೆಯನ್ನು ಖಾಸಗಿ ಬಡಾವಣೆಯವರು ಅಕ್ರಮವಾಗಿ ಒತ್ತುವರಿ (Illegal occupation) ಮಾಡಿಕೊಂಡು ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾರೆಂದು ಆರೋಪಿಸಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ದೊಡ್ಡಬಳ್ಳಾಪುರ ತಾಲೂಕು ಘಟಕದ ಉಪಾಧ್ಯಕ್ಷ ಜೋಗಹಳ್ಳಿ ಅಮ್ಮು, ನಗರಾಧ್ಯಕ್ಷ ಶ್ರೀನಗರ ಬಶೀರ್, ಗೌರವ ಅಧ್ಯಕ್ಷ ಪು.ಮಹೇಶ್, ಪಾಲನಜೋಗಿಹಳ್ಳಿ ಕೆರೆಗೆ ಹೊಂದಿಕೊಂಡಂತೆ ಖಾಸಗಿಯವರು ಬಡಾವಣೆ ಮಾಡುತ್ತಿದ್ದು, ಕೆರೆಯ ಅಂಗಳವನ್ನು ಮುಚ್ಚಿ ಸುಮಾರು 60 ಅಡಿ ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆಂದು ಆರೋಪಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಅತಿ ವೇಗವಾಗಿ ಬೆಳೆಯುತ್ತಿದ್ದು, ಕೆಲವು ಖಾಸಗಿಯವರು ಇದನ್ನು ತಿಳಿದು, ಯಾವುದೇ ಸರಿಯಾದ ಅನುಮತಿಗಳಿಲ್ಲದೆ ಬಡಾವಣೆಗಳನ್ನು ಮಾಡಿ ಗ್ರಾಹಕರಿಗೆ ಟೋಪಿ ಹಾಕಿ ಮೋಸ ಮಾಡುತ್ತಿದ್ದಾರೆಂದು ದೂರಿದರು.
ಬೆಂಗಳೂರು ಅನಂತಪುರ ಅಂತರ್ ರಾಜ್ಯ ಹೆದ್ದಾರಿಯಲ್ಲಿ ಪಾಲನಜೋಗಳ್ಳಿಯ ಸರ್ವೇ ನಂಬರ್ 21ರಲ್ಲಿ ಸುಮಾರು 13 ಎಕರೆಯಲ್ಲಿ ಕೆರೆ ಇದ್ದು, ಖಾಸಗಿಯವರು ಕೆರೆಯನ್ನು ಸಂಪೂರ್ಣವಾಗಿ ಮುಚ್ಚುತ್ತಿರುವುದು ಕಂಡುಬಂದಿದೆ.
ಈ ಖಾಸಗಿ ಬಡಾವಣೆ ಯಾವುದೇ ಪೂರ್ಣ ಅನುಮತಿಯನ್ನು ಪಡೆದಿರುವುದಿಲ್ಲ, ಅಲ್ಲದೆ ಕೆರೆಯನ್ನು ಮುಚ್ಚಿ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಕುರಿತು ಕ್ರಮಕೈಗೊಳ್ಳಬೇಕಾದ ಕಂದಾಯ ಅಧಿಕಾರಿಗಳು ಇದನ್ನು ನೋಡಿ ನೋಡದಂತೆ ವರ್ತಿಸುತ್ತಿದ್ದು, ಬಡಾವಣೆ ಅಧಿಕಾರಿಗಳಿಗೆ ಯಾವುದೇ ನೋಟಿಸ್ ಅನ್ನು ನೀಡಿರುವುದಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಈ ಕೂಡಲೇ ಸ್ಥಳ ಪರಿಶೀಲಿಸಿ, ಕೆರೆಯ ಸಂರಕ್ಷಣೆಯನ್ನು ಮಾಡಲು ಒತ್ತಾಯಿಸಿದ್ದು, ಅಧಿಕಾರಿಗಳು ಸ್ಪಂದಿಸದೆ ಇದ್ದರೆ ಕೆರೆಯ ಸ್ಥಳದಲ್ಲೇ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ದೊಡ್ಡಬಳ್ಳಾಪುರ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಲ್‌ಎನ್ ವೇಣು, ಕಾನೂನು ಸಲಹೆಗಾರ ನ್ಯಾಯವಾದಿ ಆನಂದ್, ಕಾರ್ಯದರ್ಶಿಗಳಾದ ಮಂಜು, ಮುಕ್ಕೇನಹಳ್ಳಿ ರವಿ, ಖಜಾಂಚಿ ಆನಂದ್, ಪ್ರಧಾನ ಕಾರ್ಯದರ್ಶಿ ರಘುನಂದನ್, ಸೂರಿ, ಸಿರಾಜ್, ಶ್ರೀನಿವಾಸ್, ನೂರುಲ್ಲ, ಪಂಚಾಯಿತಿ ಸದಸ್ಯರಾದ ಯಾಕೋಬ್ ಬೇಗ್, ಮುನಿರಾಜು, ಉಮೇಶ್, ಮಂಜುನಾಥ್, ಮುಖಂಡರಾದ ಮುನಿಕೃಷ್ಣ, ರಾಜಣ್ಣ, ಇಮ್ತಿಯಾಜ್, ಮೋಹನ್ ಮತ್ತಿತರರಿದ್ದರು.