Daily story: ಒಂದೊಂದು ಹಳ್ಳಿ. ಆ ಹಳ್ಳಿಯಲ್ಲಿ ವಯಸ್ಸಾದ ದಂಪತಿ ಮಕ್ಕಳಿಲ್ಲದ ಕಾರಣ ಅವರೇ ದುಡಿದುಕೊಂಡು ಜೀವಿಸುತ್ತಿದ್ದರು. ಒಂದು ದಿನ ಬೆಳಿಗ್ಗೆ ಅವರು ಕೆಲಸಕ್ಕಾಗಿ ಹೊರಟಿದ್ದರು.
ರಸ್ತೆಯ ಪಕ್ಕದಲ್ಲಿ ಬೇಡನೊಬ್ಬ ಹಾಕಿಕೊಂಡಿದ್ದ ಬಲೆಗೆ ಪಕ್ಷಿಯೊಂದು ಸಿಕ್ಕಿಕೊಂಡಿರುವುದನ್ನು ನೋಡಿದರು. ತಕ್ಷಣವೇ ಅದನ್ನು ಅಲ್ಲಿಂದ ಬಿಡಿಸಿದರು. ಪಕ್ಷಿ ಸಂತೋಷದಿಂದ ಹಾರಿಹೋಯಿತು.
ಕೆಲಸ ಮುಗಿಸಿಕೊಂಡು ದಂಪತಿ ಮನೆಗೆ ಹಿಂದಿರುಗಿದರು. ಅದೇ ದಿನ ರಾತ್ರಿ ಇವರ ಮನೆಯ ಹತ್ತಿರ ಯುವತಿಯೊಬ್ಬಳು ಬಂದು ‘ತಾನು ಕಷ್ಟದಲ್ಲಿದ್ದೇನೆ ಸಹಕರಿಸಿ’ ಎಂದು ಬೇಡಿಕೊಂಡಳು. ಆಕೆಯ ಕಷ್ಟವನ್ನು ನೋಡಿ ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ಕೊಟ್ಟರು.
ವಯಸ್ಸಾದ ದಂಪತಿಗೆ ಆ ಯುವತಿ ಆಸರೆಯಾದಳು. ದಿನನಿತ್ಯವೂ ತಾನಿದ್ದ ಕೋಣೆಯಲ್ಲಿ ಬಟ್ಟೆಯನ್ನು ತಯಾರಿಸಿ ಕೊಡುತ್ತಿದ್ದಳು. ದಂಪತಿ ಅದನ್ನು ಮಾರಿ ಸಿರಿವಂತರಾಗುತ್ತಾ ಬಂದರು.
ಒಂದು ದಿನ ಮುದುಕಿ ಯುವತಿಯನ್ನು ‘ಏನಮ್ಮಾ ನಿನ್ನ ಕೋಣೆಗೆ ಬಂದು ಬಟ್ಟೆ ತಯಾರಿಸುವುದನ್ನು ನೋಡಬಹುದೆ?’ ಎಂದು ಕೇಳಿದಳು. ಅದಕ್ಕೆ ಯುವತಿ ‘ನಾನು ಬಟ್ಟೆ ತಯಾರಿಸುವುದನ್ನು ಯಾರೂ ನೋಡಬಾರದು. ಇದು ನನ್ನ ನಿಬಂಧನೆ’ ಎಂದಳು. ಅವಳ ಮಾತಿನಂತೆ ಆ ದಂಪತಿ ನಡೆದುಕೊಳ್ಳುತ್ತಾ ಬಂದರು.
ಒಂದು ರಾತ್ರಿ ಮುದುಕಿಗೆ ಕುತೂಹಲ ಉಂಟಾಗಿ ಆ ಯುವತಿಯ ಕೋಣೆಯ ಬಾಗಿಲನ್ನು ಸ್ವಲ್ಪ ಮುಂದೆ ತಳ್ಳಿ ನೋಡಿದಳು. ಅಲ್ಲಿ ಪಕ್ಷಿಯೊಂದು ತನ್ನ ಕೊಕ್ಕಿನಿಂದ ಬಟ್ಟೆ ನೇಯತೊಡಗಿತ್ತು.
ಮುದುಕಿ ತನ್ನ ಕೋಣೆಗೆ ಬಂದಿರುವುದು ಪಕ್ಷಿ ರೂಪದಲ್ಲಿದ್ದ ಯುವತಿಗೆ ಗೊತ್ತಾಗಿ ಆ ಮುದುಕಿಗೆ, ‘ಅಮ್ಮಾ ನೀವು ನನ್ನನ್ನು ಬಲೆಯಿಂದ ಅಂದು ರಕ್ಷಿಸಿದಿರಿ.
ಆ ಉಪಕಾರ ಸ್ಮರಣೆಯಿಂದ ನಿಮ್ಮ ಬದುಕಿಗೆ ನೆರವಾದೆ. ಆದರೆ ಈಗ ನನ್ನ ನಿಬಂಧನೆಯನ್ನು ನೀವು ಪಾಲಿಸಲಿಲ್ಲ. ಇನ್ನು ನಾನಂತೂ ಇಲ್ಲಿರುವುದಿಲ್ಲ ಕ್ಷಮಿಸಿ’ ಎಂದು ಹೇಳಿ ಅಲ್ಲಿಂದ ಹಾರಿ ಹೋಯಿತು.
ಕೃಪೆ: (ಸಾಮಾಜಿಕ ಜಾಲತಾಣ)