Daily Story: ಒಮೈ ಭೂಲೋಕವನ್ನು ಸುತ್ತಬೇಕೆಂಬ ಆಸೆಯಿಂದ ಕೈಲಾಸದಿಂದ ಶಿವ ಬಪಾರ್ವತಿ ಹಾಗೂ ನಂದಿ ಜೊತೆಯಾಗಿ ಬಂದಿದ್ದರು. ನಿಸರ್ಗವನ್ನು. ಅದರ ಚೆಲುವನ್ನು ಅನುಭವಿಸುತ್ತಾ ಹಾಗೆಯೇ ಗ್ರಾಮವೊಂದನ್ನು ಪ್ರವೇಶಿಸಿದರು.
ಶಿವ ಹಾಗೂ ಪಾರ್ವತಿ ತಮ್ಮ ಸ್ವಂತ ರೂಪದಿಂದ ಇರದೇ ಸಾಮಾನ್ಯ ಮನುಷ್ಯರಂತೆ ಬಂದಿದ್ದರು. ಅಂತೆಯೇ ನಂದಿಯು ಬಸವನಂತೆ ಬಂದಿತ್ತು.
ತುಂಬಾ ದೂರದಿಂದ ಕಾಲಿನ ನಡಿಗೆಯಲ್ಲಿ ಬಂದಿದ್ದರಿಂದ ಶಿವ ಹಾಗೂ ಪಾರ್ವತಿ ಬಹಳ ದಣಿದಿದ್ದರು. ಹಾಗಾಗಿ ಇಬ್ಬರೂ ನಂದಿಯ ಮೇಲೆ ಕುಳಿತು ಬರುತ್ತಿದ್ದಾಗ ಗ್ರಾಮದವನೊಬ್ಬ ಇವರನ್ನು ನೋಡಿ ‘ಪಾಪ, ಎಂತಹ ಮನುಷ್ಯರೋ ಇವರು, ಪಾಪದ ಪ್ರಾಣಿಯನ್ನೇರಿ ಬರುತ್ತಿದ್ದಾರೆ. ಕಠೋರ ಮನಸ್ಸಿನವರು’ ಎಂದು ಹೇಳುತ್ತಾ ಮುಂದೆ ಹೋದನು.
ಮುಂದೆ ಸಾಗುತ್ತಿದ್ದಂತೆ ಶಿವನು ನಂದಿಯಿಂದ ಇಳಿದನು. ಪಾರ್ವತಿಯೊಬ್ಬಳೇ ನಂದಿಯ ಬೆನ್ನೇರಿ ಬರುತ್ತಿದ್ದಳು. ಶಿವನು ನಡೆದುಕೊಂಡು ಬರುವಾಗ ಮುಂದೆ ಇದ್ದ ಹೆಂಗಸೊಬ್ಬಳು ‘ಆಹಾ! ಇಲ್ಲಿ ನೋಡಿ, ಬರೀ ಕಾಲಲ್ಲಿ ನಡೆದುಕೊಂಡು ಬರುತ್ತಿರುವ ಗಂಡ. ಗಂಡನನ್ನು ಬಿಸಿಲಿನಲ್ಲಿ ಒಣಗಿಸಿ,. ಹಾಯಾಗಿ ಬಸವನ ಮೇಲೆ ಹ್ಯಾಗೆ ಹೆಂಡತಿ ನಾಚಿಕೆಯಿಲ್ಲದೆ ಕುಳಿತು ಬರುತ್ತಿದ್ದಾಳೆ ನೋಡಿ’ ಎಂದು ಇತರ ಹೆಂಗಸರಿಗೆ ತೋರಿಸಿದಳು.
ಇನ್ನೂ ಮುಂದೆ ಸಾಗಿದಂತೆ ಪಾರ್ವತಿ ತಾನು ಮೈಕೈ ಆಡಿಸಬೇಕೆಂದೂ, ಕಾಲುನಡಿಗೆಯಲ್ಲಿ ಬರುವೆನೆಂದೂ ಹೇಳಿ ಶಿವನಿಗೆ ನಂದಿಯ ಮೇಲೆ ಬರುವಂತೆ ತಿಳಿಸಿದಳು. ಸರಿ, ಶಿವನು ನಂದಿಯನ್ನೇರಿದ. ಪಾರ್ವತಿ ನಡೆದುಕೊಂಡು ಪಕ್ಕದ ಗ್ರಾಮಕ್ಕೆ ಕಾಲಿಟ್ಟಾಗ ಅಲ್ಲಿದ್ದ ಮುದುಕನೊಬ್ಬ ‘ಎಂತಹ ಕೆಟ್ಟ ಗಂಡಸು ಇವನು, ಹೆಂಡತಿಯನ್ನು ನಡೆಸಿಕೊಂಡು ತಾನು ಮಾತ್ರ ಹಾಯಾಗಿ ಕನಿಕರವೇ ಇಲ್ಲ’ ಎಂದನು.
ಹೀಗೆಯೇ ಮುಂದೆ ಸಾಗುತ್ತಾ ಶಿವ, ಪಾರ್ವತಿ ಇಬ್ಬರೂ ನಂದಿಯ ಜೊತೆಯಲ್ಲಿ ಕಾಲು ನಡಿಗೆಯಲ್ಲಿ ಬರುತ್ತಿದ್ದರು. ಅಲ್ಲಿಯೇ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಇವರನ್ನು ನೋಡಿ ಮನಸ್ಸಿನಲ್ಲೇ ನಕ್ಕು ‘ಎಂತಹ ಪೆದ್ದು ಜನರಪ್ಪ, ಆ ಪ್ರಾಣಿ ಇರುವಾಗ ಅದರ ಮೇಲೆ ಹಾಯಾಗಿ ಬರದೇ ಈ ಉರಿ ಬಿಸಿಲಲ್ಲಿ ಕಾಲು ನಡಿಗೆಯಲ್ಲೇ ಬರುತ್ತಿದ್ದಾರೆ. ಯೋಚಿಸಲಾರದ ತಲೆಯವರು’ ಎಂದುಕೊಳ್ಳುತ್ತಿದ್ದ.
ಭೂಲೋಕ ಸಂಚಾರ ಮುಗಿಸಿ ಕೈಲಾಸಕ್ಕೆ ಬಂದ ನಂತರ ಶಿವನು ನಂದಿ ಹಾಗೂ ಪಾರ್ವತಿಗೆ ‘ಪಾರ್ವತಿ, ನಂದಿ ಕೇಳಿದಿರಲ್ಲ ಭೂಲೋಕದ ಜನರ ಮಾತುಗಳನ್ನು! ಒಬ್ಬ ಯೋಚಿಸಿದಂತೆ ಮಗದೊಬ್ಬ ಯೋಚಿಸಲಾರ.
ಅವರವರ ಮೂಗಿನ ನೇರಕ್ಕೆ ಅವರವರು ಮಾತಾಡಿಕೊಳ್ಳುತ್ತಾರೆ. ಒಬ್ಬೊಬ್ಬ ಮನುಷ್ಯನ ಯೋಚನೆ, ಭಾವನೆ ಎಲ್ಲವೂ ಬೇರೆಯೇ ಅಲ್ಲವೇ?’ ಎಂದ. ಪಾರ್ವತಿ ಹಾಗೂ ನಂದಿ ಇಬ್ಬರೂ ಒಟ್ಟಾಗಿ ‘ಹೌದು ಪರಮೇಶ್ವರ, ನೀನು ಹೇಳಿದ್ದು ಸರಿ’ ಎಂದು ತಲೆಯಾಡಿಸಿ ‘ಒಬ್ಬರಿಗೆ ಸರಿಯೆನಿಸಿದ್ದು ಇನ್ನೊಬ್ಬನಿಗೆ ತಪ್ಪಾಗಿ ಕಾಣುತ್ತದೆ. ಹಾಗಾಗಿ ಭೂಲೋಕದಲ್ಲಿ ಮನುಷ್ಯ ತನಗೆ, ತನ್ನ ಆತ್ಮಕ್ಕೆ ಸರಿಯೆನಿಸಿದ್ದನ್ನು ಮಾಡುತ್ತಾನೆ.
ಒಬ್ಬರು ಹೇಳಿದರೆಂದು ಅತಿಯಾಗಿ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗುವುದು ಅವರಿಗೆ ಒಳಿತು’ ಎಂದರು.
ಅದಕ್ಕೆ ಶಿವನು ನಕ್ಕು ‘ಹೌದು, ನೀವು ಹೇಳಿದ್ದು ಸರಿ, ಭೂಲೋಕದಲ್ಲಿ ಪರರ ಮಾತನ್ನು ಅಗತ್ಯವಿರುವಷ್ಟು ಮಾತ್ರ ಆಲಿಸಿ ತಮಗೆ ಸರಿ ಹಾಗೂ ಒಳಿತೆಂದು ತಿಳಿದು ಬಾಳಿದರೆ ಅವರಿಗೆಲ್ಲಾ ಮಂಗಳವಾಗುತ್ತದೆ’ ಎಂದು ಹೇಳಿ ಮುಗಿಸಿದನು.
ಕೃಪೆ; ಸಾಮಾಜಿಕ ಜಾಲತಾಣ ( ಲೇಖಕರ ಮಾಹಿತಿ ಲಭ್ಯವಾಗಿಲ್ಲ)