ದೊಡ್ಡಬಳ್ಳಾಪುರ: ತಾಲೂಕಿನಲ್ಲಿ 108 ಆಂಬುಲೆನ್ಸ್ (108 ambulance) ಸಮಸ್ಯೆ ಮತ್ತೆ ಮಿತಿಮೀರಿದ್ದು, ಕೇವಲ ಮೂರು ಆಂಬುಲೆನ್ಸ್ ಇಡೀ ತಾಲೂಕಿನ ತುರ್ತು ಸಂದರ್ಭದಲ್ಲಿ ಸೇವೆ ಒದಗಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇತ್ತೀಚೆಗಷ್ಟೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯೋರ್ವ ತುರ್ತು ಸಮಯದಲ್ಲಿ 108 ಆಂಬುಲೆನ್ಸ್ ಸಿಗದೆ ಸಾವನಪ್ಪಿರುವ ಪ್ರಕರಣ ತಾಲೂಕಿನಲ್ಲಿ 108 ಆಂಬುಲೆನ್ಸ್ ಸಮಸ್ಯೆ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು.
ಈ ಕುರಿತು ಕನ್ನಡ ಪರ ಸಂಘಟನೆಗಳು ಅಧಿಕಾರಿಗಳು, ಜನಪ್ರತಿನಿದಿಗಳ ಗಮನಕ್ಕೂ ತಂದಿದ್ದರು. ನಂತರ ಏಕಾಏಕಿ ಕಾಣೆಯಾಗಿದ್ದ ಅಂಬುಲೆನ್ಸ್ ರಸ್ತೆಗಿಳಿದವು. ಆದರೆ ಕೇವಲ ಒಂದು ವಾರದ ನಂತರ ಎರಡು ಆಂಬುಲೆನ್ಸ್ ಕಾಣೆಯಾಗಿದ್ದು, ಹಲವು ತಿಂಗಳು ಕಳೆದರು ಪತ್ತೆಯಿಲ್ಲ.
ದೊಡ್ಡಬಳ್ಳಾಪುರ ತಾಲೂಕಿನ ನಗರ, ಘಾಟಿ ಮಧುರೆ, ದೊಡ್ಡಬೆಳವಂಗಲ ಹಾಗೂ ಸಾಸಲು ಹೋಬಳಿಯ ಒಟ್ಟು ಐದು 108 ಅಂಬುಲೆನ್ಸ್ ಕಾರ್ಯ ನಿರ್ವಹಿಸಬೇಕಿದೆ. ಆದರೆ ಪ್ರಸ್ತುತ ಕಾರ್ಯನಿರ್ವವಹಿಸುತ್ತಿರುವುದು ಮೂರು ಆಂಬುಲೆನ್ಸ್ ಮಾತ್ರ.
ನಿರ್ಲಕ್ಷ್ಯ; 108 ಆಂಬುಲೆನ್ಸ್ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ತುರ್ತು ಸಂದರ್ಭದಲ್ಲಿ ವರದಾನವಾಗಿದ್ದ ಯೋಜನೆ ಸಂಪೂರ್ಣವಾಗಿ ಹಳ್ಳಹಿಡಿಯುತ್ತಿದೆ ಎಂದು ಪದೇ ಪದೇ ಮಾಧ್ಯಮಗಳು, ಸಂಘ ಸಂಸ್ಥೆಗಳು ದನಿ ಎತ್ತಬೇಕಿದೆ.
ಪ್ರಸ್ತುತ ದೊಡ್ಡಬೆಳವಂಗಲ, ಎಸ್‌ಎಸ್ ಘಾಟಿ 108 ಅಂಬುಲೆನ್ಸ್ ದುರಸ್ತಿಗೆ ತೆರಳಿ ಹಲವು ತಿಂಗಳು ಕಳೆದರು ಪತ್ತೆಯಿಲ್ಲವಾಗಿದೆ. ಈ ಕುರಿತು ಮಾಧ್ಯಮಗಳು ವರದಿ ಮಾಡಿದಾಗ ಪ್ರತ್ಯಕ್ಷವಾಗಿ ಮತ್ತೆ ಕಣ್ಮರೆಯಾಗುತ್ತವೆ.
ಆಗಸ್ಟ್ 09 ರಂದು ಟಿಬಿ ವೃತ್ತದ ಬಳಿ ಮೊಗಚಿ ಬಿದ್ದ ವೇಳೆ ಗ್ಯಾರೆಜ್ ಸೇರಿದ ಘಾಟಿ ಸುಬ್ರಮಣ್ಯ ವ್ಯಾಪ್ತಿಯ ಅಂಬುಲೆನ್ಸ್ 5 ತಿಂಗಳುಗಳು ಕಳೆದರು ಇದುವರೆಗೂ ಪತ್ತೆ ಇಲ್ಲ ಎಂದರೆ ಇದರ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಎಷ್ಟಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.
ಉಳಿದಿರುವ ದೊಡ್ಡಬಳ್ಳಾಪುರ ನಗರ ಮಧುರೆ, ಸಾಸಲು ವ್ಯಾಪ್ತಿಗೆ ಸೇರಿದ 108 ಅಂಬುಲೆನ್ಸ್ಗಳು ಇಡೀ ತಾಲೂಕು ಅಲ್ಲದೆ ಅಕ್ಕಪಕ್ಕದ ತಾಲೂಕಿಗೂ ಸೇವೆ ನೀಡಬೇಕಾದ ಅನಿವಾರ್ಯತೆಯಲ್ಲಿವೆ
ತಾಲೂಕಿನಲ್ಲಿ ಖಾಸಗಿ ಆಂಬುಲೆನ್ಸ್ ಹೆಚ್ಚಾಗಿದ್ದು, ಕೆಲವರ ಲಾಭಿಯಿಂದಾಗಿ 108 ಆಂಬುಲೆನ್ಸ್ ವ್ಯವಸ್ಥೆ ಹಾಳಾಗುತ್ತಿದೆ ಎಂಬ ಆರೋಪ ಕೂಡ ವ್ಯಾಪಕವಾಗಿದೆ.
ಶಡ್ಯಂತ್ರದ ಶಂಕೆ: ತುರ್ತು ಸಂದರ್ಭದಲ್ಲಿ 108 ಆಂಬುಲೆನ್ಸ್ ಆದರೆ ಸರ್ಕಾರಿ ಆಸ್ಪತ್ರೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಿಗೆ ಹಿನ್ನಡೆಯಾಗುತ್ತದೆ. ಅದೇ ಖಾಸಗಿ ಆಂಬುಲೆನ್ಸ್ ಆದರೆ ಖಾಸಗಿ ಆಸ್ಪತ್ರೆಗಳಿಗೆ ಲಾಭ ಎಂಬ ದುರುದ್ದೇಶದಿಂದ 108 ಆಂಬುಲೆನ್ಸ್ ವ್ಯವಸ್ಥೆ ಹಾಳುಗೆಡವಲು ಕೆಲ ಪ್ರಭಾವಿಗಳು ಈ ರೀತಿ ಶಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣ್ಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ಆರೋಪಿಸಿದ್ದಾರೆ.
ಇದೇ ಕಾರಣಕ್ಕೆ 108 ಆಂಬುಲೆನ್ಸ್ ಸೌಲಭ್ಯ ಸಮರ್ಪಕವಾಗಿ ದೊರಕುವಂತಾಗಲು ಯಾರು ಕ್ರಮಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ವ್ಯಾಪಕವಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)