ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ (Cyclone) ರೂಪುಗೊಂಡಿರುವ ಕಾರಣ, ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಇಂದು (ಗುರುವಾರ) ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಒಂದರಿಂದ 5 ನೇ ತರಗತಿಗಳಿಗೆ ರಜೆ ಘೋಷಿಸಿದ್ದಾರೆ.
ಕಾಂಚೀಪುರಂ, ಚೆಂಗಲ್ಪಟ್ಟು, ರಾಮನಾಥಪುರಂ, ಮೈಲಾಡುತುರೈ, ತಂಜಾವೂರು, ಪುದುಕೊಟ್ಟೈ ಮತ್ತು ಅರಿಯಲೂರ್ ಸೇರಿದಂತೆ ಎಲ್ಲೆಡೆ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂದು ಜಿಲ್ಲಾಡಳಿತ ಘೋಷಿಸಿದೆ.
ಅಲ್ಲದೆ ವೆಲ್ಲೂರಿನ ತಿರುವಳ್ಳುವರ್ ವಿಶ್ವವಿದ್ಯಾಲಯವು ಪರೀಕ್ಷೆಗಳನ್ನು ಮುಂದೂಡಿದೆ ಎಂದಯ ವರದಿಯಾಗಿದೆ.
ಇನ್ನೂ ಬಂಗಾಳ ಕೊಲ್ಲಿಯಲ್ಲಿ ಮತ್ತೆ ಉಂಟಾಗಿರುವ ಚಂಡಮಾರುತದ (Cyclone) ಪರಿಣಾಮದಿಂದ ಕರ್ನಾಟಕದಲ್ಲಿ ಗುರುವಾರ ಮಳೆಯಾಗುವ ಸಂಭವವಿದ್ದು, ದಕ್ಷಿಣ ಒಳನಾಡಿನ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮ ರಾಜನಗರ, ಚಿತ್ರದುರ್ಗ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಡಿ.12ರಂದು ಭಾರೀ ಮಳೆಯಾಗ ಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.
ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮಳೆಯಾಗುವ ಸಂಭವವಿದೆ.
ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ. ಉತ್ತರ ಒಳನಾಡಿನ ಒಂದೆರಡು ಕಡೆ ಗಳಲ್ಲಿ ಹಗುರದಿಂದ ಸಾಧಾರಣ ಮಂಜು ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರು ನಗರ ಮತ್ತು ಸುತ್ತಲಿನ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 26 ಮತ್ತು 18 ಡಿಗ್ರಿ ತಾಪಮಾನ ದಾಖಲಾಗಲಿದೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)