ಬೆಂಗಳೂರು: ದಾವಣಗೆರೆ ಸಮಾವೇಶದಲ್ಲಿ ಅಖಂಡ ಬಿಜೆಪಿ ನಮ್ಮೊಂದಿಗೆ ಇರಲಿದ್ದು, ಆ ಕಡೆ ಅಪ್ಪ ಮಕ್ಕಳು ಇಬ್ಬರು ಮಾತ್ರ ಉಳಿತಾರೆ ಎಂದು ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಯಡಿಯೂರಪ್ಪ, ಬಿವೈ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದರು.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನಮ್ಮದು ಜನಪರ ಹೋರಾಟ.. ಅವರದು ಹೋರಾಟವಲ್ಲ, ಕುಟುಂಬ ಶಾಹಿ ಪತ್ರಿಕಾಗೋಷ್ಠಿ ಅಷ್ಟೆ.. ಈಗ ಹೇಳಿದ್ದಾರಲ್ವಾ ದಾವಣಗೆರೇಲಿ ದೊಡ್ಡ ಸಭೆ ಮಾಡ್ತಿವಿ ಅಂತೇಳಿ ಮಾಡ್ಲಿ.. ಅದ್ರ ಮರುದಿನವೇ ನಮ್ಮದಿರುತ್ತೆ. ನಮ್ಮ ಶಕ್ತಿ ಪ್ರದರ್ಶನ ಮಾಡ್ತಿವ್ರೀ, ಸಮಸ್ತ ಕರ್ನಾಟಕದ ಹಿಂದೂಗಳು, ನಿಷ್ಠಾವಂತ ಕಾರ್ಯಕರ್ತರು ನಮ್ಮೊಂದಿಗಿದ್ದಾರೆ. ಅಪ್ಪಾಜಿ ಅನ್ನೋ ನನ್ಮಕ್ಕಳು ಅವರ ಜೊತೆ ಇದ್ದಾರೆ.
ನಾವಾಗೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಉದ್ದೇಶವಿಲ್ಲ, ಅವರಾಗಿಯೇ ಇಳಿಸಿಕೊಳ್ಳುತ್ತಾರೆ. ಅವರಪ್ಪನಂತೆ ಸರ್ವಾಧಿಕಾರಿ ಆಗಬೇಕು ಎಂದು ವಿಜಯೇಂದ್ರ ಬಯಸಿದ್ದಾನೆ.
ಇದು ಪ್ರಜಾಪ್ರಭುತ್ವದ ಪಕ್ಷ, ಬಿಜೆಪಿ ಇಂಟರ್ ನಲ್ ಡೆಮಾಕ್ರಸಿ ಪಾರ್ಟಿ, ಇದೇ ಯಡಿಯೂರಪ್ಪ ಡೈಲಾಗ್ ಹೊಡಿತಿದ್ದ ಮುಲಾಯಂ ಸಿಂಗ್ ಕುಟುಂಬದ ಬಗ್ಗೆ, ಲಾಲು ಪ್ರಸಾದ್ ಯಾದವ್ ಕುಟುಂಬದ ಬಗ್ಗೆ, ದೇವೇಗೌಡರ ಕುಟುಂಬದ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಕುಟುಂಬದ ಬಗ್ಗೆ ಮಾತನಾಡುತ್ತಿದ್ದ ಕುಟುಂಬ ರಾಜಕಾರಣ ಎಂದು ಮಾತಾಡ್ತಾ ಇದ್ದ.. ನಿಮತ್ರ ಅದೇನೋ ವಿಷಲ್ ಬಿಡುಗಡೆ ಮಾಡಿ.
ಯಡಿಯೂರಪ್ಪಗೆ ಎಷ್ಟು ವ್ಯಾಮೋಹ ಅಂದರೆ ದೊಡ್ಡ ಮಗ ಕೇಂದ್ರ ಮಂತ್ರಿ ಆಗಬೇಕು, ಸಣ್ಣ ಮಗ ರಾಜ್ಯದ ಅಧ್ಯಕ್ಷ ಆಗಿ, ಎಂಎಲ್ಎ ಆಗಿ ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕು.. ಇನ್ನೂ ಚಿಣ್ಣಿಮಿಣ್ಣಿ ಇದ್ದಾರೆ ಮನೇಲ್ ಅವರಿಗೆಲ್ಲ ಸ್ಥಾನಮಾನ ಕೊಡಬೇಕು ಅವಾಗ ಮೇಲುಕ್ ಹೋಗ್ತಾರೆ... ಇಲ್ಲ ಮೇಲುಕ್ ಹೋಗಲ್ಲ ಕೆಳಕ್ಕೆ ಹೋಗ್ತಾರೆ, ಅವರಿಗೆ ಸ್ವರ್ಗದಲ್ಲಿ ಪ್ರವೇಶವಿಲ್ಲ ಎಂದರು.
ಹೈಕಮಾಂಡ್ ಭೇಟಿ ಬಳಿಕ ವಿಜಯೇಂದ್ರ ನಾಯಕತ್ವ ಬದಲಾವಣೆ ಕುರಿತು ಯಾವುದೇ ರೀತಿಯ ಮಾತುಕತೆ ನಡೆದಿಲ್ಲ ಎಂದಿದ್ದಾರೆ ಎಂದ ಸುದ್ದಿಗಾರ ಪ್ರಶ್ನೆಗೆ ಮತ್ತೇನ್ ಹೇಳಬೇಕಿತ್ತು ವಿಜಯೇಂದ್ರ..? ನನ್ನನ್ನು ತಗಿತಾ ಇದ್ದರೆ ಅಂತ ಅವರಪ್ಪನಂತೆ ಅಳಬೇಕಿತ್ತಾ..? ನೀವ್ ಒಳ್ಳೆ ಕಥೆ ಹೊಡಿತಾರಲ್ಲ ಎಂದು ಲೇವಡಿ ಮಾಡಿದರು.
ನೀವೆಲ್ಲ ತಿಳ್ಕೋಳ್ರಿ ಯತ್ನಾಳ್ನ ಉಚ್ಚಾಟನೆ ಮಾಡ್ತಾರೆ, ಯತ್ನಾಳ್ ಕಥೆ ಮುಗಿತು ಅಂದ್ಕೋಂಡ್ರೆ.. ಏನ್ ಆಗಲ್ಲ, ನಾ ಮತ್ತಷ್ಟು ಗಟ್ಟಿಯಾಗಿದ್ದೀನಿ.
ಯಡಿಯೂರಪ್ಪ ಕಥೆ ಮುಗಿದಿದೆ. ಯಡಿಯೂರಪ್ಪ ಏನಿದೆ.. ಲಿಂಗಾಯತರಲ್ ಏನಾದ್ರೂ ಉಳಿಸಿಕೊಂಡಿದ್ದಾರೆನು..? ಸುಮ್ಮನೆ ಹೇಳಿಕೋತಾರೆ ಲಿಂಗಾಯತರು ನನ್ನಿದ್ದಾರೆ ಎಂದು ಕೆಜಿಪಿ ಕಟ್ಟಿ ಎಷ್ಟು ಸೀಟ್ ತಂದ್ರು ಯಡಿಯೂರಪ್ಪ ಎಂದು ಯತ್ನಾಳ್ ಪ್ರಶ್ನಿಸಿದರು.
ಅಪ್ಪನ ಸಹಿಯನ್ನೇ ನಕಲಿ ಮಾಡಿದ್ದ ವಿಜಯೇಂದ್ರನಿಂದ ಡೂಪ್ಲಿಕೇಟ್ ನೋಟಿಸ್ ಎಂದು ಶಾಸಕ ಬಸನ ಗೌಡ ಯತ್ನಾಳ್ ಟೀಕಿಸಿದರು.
ನೋಟಿಸ್‌ಗೆ ಸರಿಯಾಗಿ ಉತ್ತರ ಕೊಡುತ್ತೇನೆ. ಈವರೆಗೂ ಮೂರು ಸಾರಿ ನೋಟಿಸ್ ಕೊಟ್ಟಿದ್ದರು. ಈಗಾಗಲೇ 2 ಬಾರಿ ಉತ್ತರ ಕೊಟ್ಟಿದ್ದೇನೆ ಎಂದು ಹೇಳಿದರು.
3ನೇ ಬಾರಿಯ ನೋಟಿಸ್ ಡೂಪ್ಲಿಕೇಟ್ ಅನ್ಸುತ್ತೆ. ಇದನ್ನು ವಿಜಯೇಂದ್ರನೇ ಮಾಡಿಸಿರಬಹುದು. ಅಪ್ಪನ ಸಹಿಯನ್ನೇ ವಿಜಯೇಂದ್ರ ನಕಲಿ ಮಾಡಿಸಿದ್ದ. ಪಕ್ಷದಿಂದ ಅಧಿಕೃತವಾಗಿ ನೋಟಿಸ್ ಬಂದಿಲ್ಲ. ಇಮೇಲ್ ಆಗಲಿ, ರಿಜಿಸ್ಟರ್ ಲೆಟರ್ ಆಗಲೀ ಬಂದಿಲ್ಲ ಎಂದು ಹೇಳಿದರು.