ಚಿಕ್ಕಬಳ್ಳಾಪುರ: ಕಾಂಗ್ರೆಸ್ ನಲ್ಲಿ ಎಷ್ಟೇ ಬಣ ಮತ್ತು ಬಿನ್ನಾಭಿಪ್ರಾಯಗಳಿದ್ದರೂ ಮುಖ್ಯಮಂತ್ರಿ ಮತ್ತು ಉಪಮುಖ್ಯ ಮಂತ್ರಿ ತೋರ್ಪಡಿಸಿಕೊಳ್ಳದೆ ಒಂದೆ ವೇದಿಕೆಯಲ್ಲಿ ಒಟ್ಟಿಗೆ ಇದ್ದು ಒಂದು ಒಗ್ಗಟ್ಟಿನ ರಾಜಕೀಯ ಸಂದೇಶವನ್ನು ಈ ರಾಜ್ಯದಲ್ಲಿ ಅವರು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ ಎಂದು ಬಿಜೆಪಿ ಬಣ ರಾಜಕೀಯದ ಕುರಿತು ಡಾ.ಕೆ.ಸುಧಾಕರ್ (Dr k sudhakar) ಹೇಳಿದರು.
ನಗರದ ನಗರಸಭೆ ಆವರಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕಾರಣದಲ್ಲಿ ಅಧಿಕಾರ ದಲ್ಲಿದ್ದಾಗ ಒಂದು ತರ ಬಣ, ಅಧಿಕಾರದಲ್ಲಿಲ್ಲ ಎಂದಾಗ ಮತ್ತೊಂದು ರೀತಿಯ ಬಣ, ಕಾಂಗ್ರೆಸ್‌ನಲ್ಲಿ ಎಷ್ಟು ಬಣಗಳಿವೆ ಎಂದು ಪ್ರಶ್ನಿಸಿದರು. ಆದಾಗ್ಯೂ ಅವರು ಯಶಸ್ವಿಯಾಗಲು ಒಗ್ಗಟ್ಟು ಕೂಡ ಒಂದು. ಅದೇ ಕಾರಣದಿಂದಲೇ 2023ರಲ್ಲಿ ಇಷ್ಟು ದೊಡ್ಡಸಂಖ್ಯೆಯಲ್ಲಿ ಶಾಸಕರನ್ನು ಗೆಲ್ಲಿಸಿಕೊಂಡಿದ್ದಾರೆ. ಹಿಂದೆ ನಮ್ಮ ಸರ್ಕಾರವಿದ್ದಾಗ ನಡೆದ ಉಪ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೆವು ಎಂದರು.
ಇತ್ತೀಚೆಗೆ ನಮ್ಮ ಹಿರಿಯರು ಸಚಿವ ಕೆ.ಎಚ್. ಮುನಿಯಪ್ಪನವರು ತಾವು ಸೀನಿಯರ್‌ಮೋಸ್ಟ್ ಇದ್ದೇನೆ ತಮಗೇ ಮುಖ್ಯಮಂತ್ರಿ ಸ್ಥಾನ ನೀಡಿ ಎಂದು ಕೇಳಿದ್ದಾರೆ. ಅದರಲ್ಲಿ ತಪ್ಪೇನಿದೆ. ಅದಕ್ಕೆ ಈಗ ಕೆ.ಎಚ್.ಮುನಿಯಪ್ಪನವರ ಗುಂಪಾಗಿದೆ ಎಂದು ಹೇಳಲಿಕ್ಕೆ ಬರುತ್ತದಾ, ಹಾಗೇಯೇ ಎಲ್ಲ ಪಕ್ಷಗಳಲ್ಲೂ ಬಣಗಳರುತ್ತವೆ.
ವಿರೋಧ ಪಕ್ಷವಾಗಿ ಬಿಜೆಪಿ ಈಗ ಒಗ್ಗಟ್ಟು ಪ್ರದರ್ಶನ ಮಾಡಬೇಕಿತ್ತು. ಆದರೆ ಬಹಿರಂಗವಾಗಿ ಬಣಗಳಾಗಿರುವುದು ದುರಾದೃಷ್ಟಕರ. ಬಿಜೆಪಿ ಹೈಕಮಾಂಡ್ ಎಲ್ಲವನ್ನು ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ನಿರ್ಣಯ ಕೈಗೊಳ್ಳಲಿದೆ ಎಂದರು.