ಬೆಂಗಳೂರು ಗ್ರಾಮಾಂತರ ಜಿಲ್ಲೆ: ಕೃಷಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆ ಹಾಗೂ ಆತ್ಮ ಯೋಜನೆಯಡಿ ಅಂತರರಾಷ್ಟ್ರೀಯ ಸಿರಿಧಾನ್ಯ (millet) ಮತ್ತು ಸಾವಯವ ಮೇಳದ ಅಂಗವಾಗಿ ಸಿರಿಧಾನ್ಯ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಜಿಲ್ಲೆಯ ವಿವಿಧ ಭಾಗಗಳಿಂದ ರೈತ ಮಹಿಳೆಯರು ಆಗಮಿಸಿ ಮನೆಯಿಂದಲೇ ಸಿರಿಧಾನ್ಯಗಳಿಂದ ತಯಾರಿಸಿದ್ದ ಸಿಹಿ, ಖಾರ ಮತ್ತು ಮರೆತು ಹೋದ ವಿವಿಧ ಖಾದ್ಯಗಳನ್ನು ಸ್ಪರ್ಧೆಯಲ್ಲಿ ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಹಾಗೂ ಜಿ.ಪಂ ಸಿ.ಇ.ಒ ಡಾ.ಕೆ.ಎನ್ ಅನುರಾಧ ಅವರು ವಿವಿಧ ಖಾದ್ಯಗಳನ್ನು ಸೇವನೆ ಮಾಡುವ ಮೂಲಕ ಸಿರಿಧಾನ್ಯಗಳ ಸೇವನೆಯಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ, ಸಿರಿಧಾನ್ಯಗಳು ರೈತರಿಗೆ ವರದಾನವಾಗಿದ್ದು ಅತಿ ಕಡಿಮೆ ಮಳೆ ನೀರಿನಲ್ಲಿಯೂ ಸಹ ಸಿರಿಧಾನ್ಯಗಳನ್ನು ಬೆಳೆಯಬಹುದು. ಸಿರಿಧಾನ್ಯಗಳಲ್ಲಿ ಅತಿ ಹೆಚ್ಚು ನಾರಿನಾಂಶ ಹಾಗೂ ಪೋಷಕಾಂಶಗಳ ಆಗರವಾಗಿದ್ದು ಇತ್ತಿಚೀನ ದಿನಗಳಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧನೆ ಅತ್ಯವಶ್ಯಕವಾಗಿದೆ. ಸಿರಿಧಾನ್ಯಗಳನ್ನು ಬಳಸುವುದರಿಂದ ಆರೋಗ್ಯವು ಕೂಡ ಸುಧಾರಿಸುತ್ತದೆ ಎಂದು ತಿಳಿಸಿದರು.
ಜಂಟಿ ಕೃ ನಿರ್ದೇಶಕಿ ಕಲಾವತಿ ಮಾತನಾಡಿ, ಜನವರಿ 23 ರಿಂದ ಜನವರಿ 25 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಅಂತರ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಸಿಹಿ/ಖಾರ ತಿನಿಸು/ಮರೆತು ಹೋದ ಖಾದ್ಯ ಪಾಕ ಸ್ಪರ್ಧೆಯನ್ನು ಆಯೋಜಿಸಿದ್ದು ರೈತ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿರುವುದು ಖುಷಿ ನೀಡಿದೆ ಎಂದರು.
ಉಪ ಕೃಷಿ ನಿರ್ದೇಶಕಿ ಗಾಯತ್ರಿ ಮಾತನಾಡಿ, ಸಿರಿಧಾನ್ಯಗಳನ್ನು ಅನಾದಿ ಕಾಲದಿಂದಲೂ ಬೆಳೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ಅವುಗಳ ಮೌಲ್ಯವರ್ಧನೆ ಮಾಡುವುದು ಮತ್ತು ದೈನಂದಿನ ಜೀವನದಲ್ಲಿ ಬಳಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ 32 ರೈತ ಮಹಿಳೆಯರು ಭಾಗವಹಿಸಿದ್ದರು.
ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯ ಅಥವಾ ತಿನಿಸುಗಳ ಪ್ರದರ್ಶನ, ತಯಾರಿಕೆಗೆ ಬಳಸಿದ ಪದಾರ್ಥಗಳ ಪ್ರದರ್ಶನ ತೋರಿಕೆ (presentation/ appearance), ರುಚಿ, ಸುವಾಸನೆಗಳ ಮೇಲೆ ಅಂತಿಮ ನಿರ್ಧಾರ ಕೈಗೊಂಡು ಮೂವರಿಗೆ ಬಹುಮಾನ ವಿತರಿಸಲಾಯಿತು.
ಮೂವರು ರೈತ ಮಹಿಳೆಯರು ರಾಜ್ಯ ಮಟ್ಟದಲ್ಲಿ ನಡೆಯುವ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಭಾಗವಹಿಸುವರು.
ಈ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಬೆಂಗಳೂರು ಉತ್ತರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ರೂಪ, ದೊಡ್ಡಬಳ್ಳಾಪುರ ಕೃಷಿ ನಿರ್ದೇಶಕ ರಾಘವೇಂದ್ರ, ಕೆವಿಕೆ ವಿಜ್ಞಾನಿ ಮೇಘನ, ಅಂತರ್ ಜಲ ಇಲಾಖೆ ಉಪ ನಿರ್ದೇಶಕಿ ಜಾನಕಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರೇಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕೃಷಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.