ವಿಜಯಪುರ: ಕರ್ನಾಟಕದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯ (BJP) ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಇಂತಹ ಸೋಲನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಕರ್ನಾಟಕದಲ್ಲಿನ ಬಿಜೆಪಿಯ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ.
ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದನ್ನು ಜನ ತಿರಸ್ಕರಿಸಿದ್ದಾರೆ. ಪಕ್ಷದ ಹೀನಾಯ ಸೋಲು ನನಗೂ ನೋವಾಗಿದೆ.
ವಕ್ಫ್ ವಿವಾದ ಈಗ ಆರಂಭವಾಗಿದೆ. ಜನರಿಗೆ ಇನ್ನೂ ಗೊತ್ತಾಗಬೇಕಿದೆ. ಆದರೆ, ಮಹಾ ರಾಷ್ಟ್ರದಲ್ಲಿ ವಕ್ಫ್ ವಿಚಾರ ಚುನಾವಣೆಯ ವಿಷಯವಾಯಿತು. ಅಲ್ಲಿ ಠಾಕ್ರೆಯವರು ಔರಂಗಜೇಬ್ ಸಮಾಧಿಗೆ ಹೋಗಿ ನಮಸ್ಕರಿಸಿದರು. ಆದರೆ, ಅವರನ್ನು ಜನ ಮುಳುಗಿಸಿದರು.
ಯತ್ನಾಳ್ ಹಗುರ ಮಾತು ನಿಲ್ಲಿಸಬೇಕು
ಯಾರೇ ಹಗುರವಾಗಿ ಮಾತನಾಡಿದರೂ ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಹಗುರವಾಗಿ ಮಾತನಾಡಿದರೂ ಪಕ್ಷದ ಕಾರ್ಯಕರ್ತರೇ ಚೀ..ಥ.. ಎಂದು ಉಗಿಯುತ್ತಾರೆ. ಅದು ಯಾರೇ ಆದರೂ ಬಿಡುವ ಪ್ರಶ್ನೆಯೇ ಇಲ್ಲ. ಮನಬದಂತೆ ಮಾತನಾಡುವಂತಿಲ್ಲ.
ನಮ್ಮದು ರಾಷ್ಟ್ರೀಯ ಪಕ್ಷ. ಯತ್ನಾಳ್ ಕೇಂದ್ರ ಸಚಿವರಾಗಿದ್ದವರು. ಅವರು ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಒಳ್ಳೆಯ ಕೆಲಸ ಮಾಡಬೇಕು ಎಂದು ನೇರವಾಗಿ ಎಚ್ಚರಿಕೆ ನೀಡಿದರು.