ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿರುವ ವಕ್ಸ್ ಕಾನೂನಿನಿಂದಾಗಿ (waqf board) ರೈತರು ಕಂಗಾಲಾಗಿದ್ದಾರೆ. ತಲೆತಲಾಂತರಗಳಿಂದ ಬೇಸಾಯ ಮಾಡಿಕೊಂಡು ಬಂದ ಜಮೀನುಗಳಿಗೆ ಜಮೀನುಗಳಿಗೆ ಏಕಾಏಕಿ ವಕ್ಫ್ ಬೋರ್ಡ್ ಗಳನ್ನು ನಡೆಸಲಾಗುತ್ತಿದ್ದು ಇದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘ ನ. 26ರಂದು ಬೃಹತ್ ರೈತ ಘರ್ಜನಾ ರ್‍ಯಾಲಿ ಹಮ್ಮಿಕೊಂಡಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಮಿತಿ ಸದಸ್ಯ ದೊಡ್ಡತುಮಕೂರು ಆನಂದ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಪ್ರಸ್ತುತ ವಕ್ಫ್ ಇಲಾಖೆಯ ಹಾವಳಿ ಅತಿರೇಕದ ಹಂತ ತಲುಪಿದೆ. ಇದನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಿಂದ ವಿಧಾನಸೌಧದವರೆಗೆ ಬೃಹತ್ ರ್ಯಾಲಿ ಆಯೋಜಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ವಕ್ಫ್ ಬೋರ್ಡ್ ನ ಮೂಲಕ ರೈತರ ಜಮೀನನ್ನು ಕಬಳಿಸುವ ಹುನ್ನಾರ ನಡೆಯುತ್ತಿದ್ದು ಈಗಾಗಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೈತರಿಗೆ ಸರಕಾರ ನೋಟಿಸ್ ಅನ್ನು ಜಾರಿ ಮಾಡಿದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ತುಷ್ಟಿ ಕರಣದ ಭಾಗವಾಗಿ ಅನೇಕ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಅಲ್ಪಸಂಖ್ಯಾತರ ವೋಟಿನಿಂದಲೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಅನ್ನುವ ಮಾತನ್ನು ರಾಜ್ಯದ ಉಪ ಮುಖ್ಯಮಂತ್ರಿಗಳು ಹೇಳುತ್ತಲೇ ಇದ್ದಾರೆ.
ರಾಜ್ಯದ ಅಲ್ಪಸಂಖ್ಯಾತ ಇಲಾಖೆಯ ಸಚಿವರಂತೂ ದಿನಕ್ಕೊಂದು ಹೇಳಿಕೆಯನ್ನು ಕೊಟ್ಟು ರಾಜ್ಯದಲ್ಲಿ ಭಿನ್ನತೆಯನ್ನು ತರುತ್ತಿದ್ದಾರೆ. ವಕ್ಫ್ ಹೆಸರಿನಲ್ಲಿ ರೈತರ ಭೂಮಿಯನ್ನು ಕಬಳಿಸುವ ಹುನ್ನಾರದ ವಿರುದ್ಧ ಭಾರತೀಯ ಕಿಸಾನ್ ಸಂಘ ನವಂಬರ್ 26ರಂದು ಕರೆ ಕೊಟ್ಟಿರುವ ಬೆಂಗಳೂರು ಚಲೋ ಜನಂದೋಲನಕ್ಕೆ ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತವು ಸಂಪೂರ್ಣ ಬೆಂಬಲವನ್ನು ನೀಡಿದೆ.
ಅಂದು ಬೆಂಗಳೂರಿನಲ್ಲಿ ನಡೆಯಲಿರುವ ಜನಾಂದೋಲನ ಜಾಗೃತಿ ಸಭೆಯಲ್ಲಿ ಸಮಸ್ತ ಹಿಂದುಗಳು ಪಾಲ್ಗೊಂಡು ಈ ವಕ್ಫ್ ಭೂ ಅತಿಕ್ರಮಣದ ವಿರುದ್ಧ ಜನಾಕ್ರೋಶವನ್ನು ವ್ಯಕ್ತಪಡಿಸಬೇಕೆಂದು ದೊಡ್ಡತುಮಕೂರು ಆನಂದ್ ಮನವಿ ಮಾಡಿದ್ದಾರೆ.