ಉಳ್ಳಾಲ: ಸೋಮೇಶ್ವರ ಫೆರಿಬೈಲ್‌ನ ಖಾಸಗಿ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿನಿಯರು ಮೃತಪಟ್ಟ ಘೋರ ಘಟನೆ (crime news) ಭಾನುವಾರ ನಡೆದಿದೆ.
ಮೈಸೂರು ವಿಜಯನಗರದ ದೇವರಾಜ್ ಮೊಹಲ್ಲಾದ ನವೀನ್ ಕುಮಾರ್ ಪುತ್ರಿ 21 ವರ್ಷದ ಕೀರ್ತನಾ ಎನ್., ಮೈಸೂರು ಕುರುಬರ ಹಳ್ಳಿ ಮಲ್ಲೇಶ್‌ರ ಪುತ್ರಿ 21 ವರ್ಷದ ನಿಶಿತಾ ಎಂ.ಡಿ. ಹಾಗೂ ಮೈಸೂರು ಕೆ.ಆರ್.ಮೊಹಲ್ಲಾದ ರಾಮಾನುಜ ರಸ್ತೆಯ ಎಂ. ಎನ್.ಶ್ರೀನಿವಾಸ್ ಎಂಬವರ ಪುತ್ರಿ 20 ವರ್ಷದ ಪಾರ್ವತಿ ಎಸ್. ಮೃತಪಟ್ಟ ದುರ್ದೈವಿಗಳು.
ಈ ದುರಂತಕ್ಕೆ ರೆಸಾರ್ಟ್ ಮಾಲೀಕರು ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ನಿರ್ಲಕ್ಷ್ಯ ವಹಿಸಿದ್ದೇ ಕಾರಣವೆಂದು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ರೆಸಾರ್ಟ್‌ಗೆ ಬೀಗ ಜಡಿಯಲಾಗಿದೆ.
ಸೋಮೇಶ್ವರದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್‌ನ ಖಾಸಗಿ ರೆಸಾರ್ಟ್ ಗೆ ಶನಿವಾರ ಬೆಳಗ್ಗೆ ಮೂವರು ಆಗಮಿಸಿದ್ದರು. ಈ ಮೂವರು ಭಾನುವಾರ ಬೆಳಗ್ಗೆ ರೆಸಾರ್ಟ್ ಮುಂಭಾಗದ ಈಜುಕೊಳದಲ್ಲಿ ನೀರಾಟವಾಡುತ್ತಿದ್ದರು. ಈ ವೇಳೆ ಮೊಬೈಲ್ ಫೋನ್ ವೊಂದನ್ನು ಈಜುಕೊಳಕೆ ಗುರಿಯಾಗಿಸಿ ವಿಡಿಯೊ ರೆಕಾರ್ಡ್ ಚಾಲನೆಯಲ್ಲಿಟ್ಟು ಈಜುಕೊಳಕ್ಕೆ ಇಳಿದಿದ್ದಾರೆ. ಸರಿಯಾಗಿ ಈಜುಬಾರದ ಯುವತಿಯರು ಆಳವಿರುವ ಕಡೆ ತೆರಳಿದ್ದರಿಂದ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ರೆಸಾರ್ಟ್ ಸಿಬ್ಬಂದಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Doddaballapura: ಶಾಲೆ ಮರಕ್ಕೆ ವ್ಯಕ್ತಿ ನೇಣು..!
ಈಜುಕೊಳದಲ್ಲಿ ಸಹಾಯಕ್ಕಾಗಿ ಹಾಗೂ ವಿಶ್ರಾಂತಿಗಾಗಿ ಗಾಳಿ ತುಂಬಿದ ಟ್ಯೂಬ್‌ಗಳನ್ನು ಹಾಕಲಾಗಿತ್ತು. ಆದರೆ ಟ್ಯೂಬ್‌ಗಳು ಆಳ ನೀರಿನ ಮೇಲ್ಬಾಗದಲ್ಲಿತ್ತು. ಟ್ಯೂಬ್ ಮೇಲೆ ವಿಶ್ರಾಂತಿ ಪಡೆಯುವ ಅಥವಾ ಟ್ಯೂಬ್ ಬಳಸಿ ಮತ್ತಷ್ಟು ಜಲಕ್ರೀಡೆಯಾಡುವ ಆಲೋಚನೆಯಲ್ಲಿ ಒಬ್ಬ ಯುವತಿ ಟ್ಯೂಬ್ ತರಲು ನೀರಿನಲ್ಲಿ ನಡೆದು ಸಾಗಿದ್ದಾಳೆ.
ಆದರೆ ಆಕೆಗೆ ಟ್ಯೂಬ್ ಹಿಡಿದು ವಾಪಸ್ ತರಲು ಸಾಧ್ಯವಾಗಿಲ್ಲ. ಹೀಗಾಗಿ ಟ್ಯೂಬನ್ನು ಅಲ್ಲೇ ಬಿಟ್ಟಿದ್ದಾಳೆ. ಇದೇ ವೇಳೆ ಟ್ಯೂಬ್ ತರಲು ಹೋದ ಯುವತಿಯ ಹಿಂಭಾಗದಲ್ಲಿದ್ದ ಒಬ್ಬ ಯುವತಿ ನೀರಿನಲ್ಲೇ ಆಯತಪ್ಪಿ, ಪಾರಾಗಲು ಕೈಕಾಲು ಬಡಿದುಕೊಳ್ಳಲು ಆರಂಭಿಸಿದ್ದಾಳೆ. ಆಗ ಪಕ್ಕದಲ್ಲಿದ್ದ ಯುವತಿ ನೆರವಿಗೆ ಧಾವಿಸಿದ್ದು, ಕೈಚಾಚಿ ರಕ್ಷಿಸಲು ಮುಂದಾಗಿದ್ದಾಳೆ. ಆದರೆ ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ. ನೆರವಿಗೆ ಕೈಚಾಚಿದ ಯುವತಿ ಕೂಡ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾಳೆ.
ಈ ವೇಳೆ ಮತ್ತಷ್ಟು ಗಾಬರಿಗೊಂಡ ಮೂರನೇ ಯುವತಿ ಇಬ್ಬರನ್ನು ರಕ್ಷಿಸಲು ಕೈ ನೀಡಿದ್ದಾಳೆ. ಪರಿಣಾಮ ಮೂವರು ನೀರಿನಲ್ಲಿ ಮುಳುಗಿದ್ದಾರೆ. ಬದುಕುಳಿಯಲು ಹಲವು ಪ್ರಯತ್ನ ಮಾಡಿದರೂ ಯುವತಿಯರಿಗೆ ಸಾಧ್ಯವಾಗಿಲ್ಲ. ಸರಿಯಾಗಿ ಈಜುಬರದ ಕಾರಣ ಮೂವರು ಯುವತಿಯರು ನೀರಿನಲ್ಲೇ ಪ್ರಾಣ ಬಿಟ್ಟಿದ್ದಾರೆ.