ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ, ತುಕಾರಂ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸದರಾಗಿ ಆಯ್ಕೆಯಾದ ಕಾರಣ ತೆರವಾಗಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಮುಕ್ತಾಯಗೊಂಡಿದೆ.
ಮತದಾರರು ಸರತಿ ಸಾಲಿನಲ್ಲಿ ಬಂದು ತಮ್ಮ ಮತ ಹಕ್ಕು ಚಲಾಯಿಸಿದ್ದು ಎಲ್ಲೆಡೆ ಕಂಡುಬಂದಿತು. ಅಭ್ಯರ್ಥಿಗಳ ಹಣೆ ಬರಹ ಇವಿಎಂಗಳಲ್ಲಿ ಭದ್ರವಾಗಿದೆ.
ಇನ್ನೂ ಈ ಚುನಾವಣೆಯ ಫಲಿತಾಂಶ ನವೆಂಬರ್ 23ರಂದು ಪ್ರಕಟವಾಗಲಿದ್ದು, ಅಭ್ಯರ್ಥಿಗಳು ಅಲ್ಲಿಯವರೆಗೂ ಕಾಯಬೇಕಿದೆ
ಕಳೆದ 2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿ ನೋಡುವುದಾದರೆ ಈ ಬಾರಿ ಮತದಾನ ಪ್ರಮಾಣದಲ್ಲಿ ಏರಿಕೆಯಾಗಿದೆ.
ಚನ್ನಪಟ್ಟಣದಲ್ಲಿ ಯೋಗೇಶ್ವರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಣಕ್ಕಳಿದರೆ, ಶಿಗ್ಗಾಂವಿಯಲ್ಲಿ ಬಸವರಾಜ್ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
ಭರತ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ನಿಂದ ಯಾಸಿರ್ ಖಾನ್ ಪಠಾಣ್ ಸ್ಪರ್ಧಿಸಿದ್ದು, ಸಂಡೂರಿನಲ್ಲಿ ಸಂಸದ ತುಕಾರಂ ಅವರ ಪತ್ನಿ ಅನ್ನಪೂರ್ಣ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.
ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟಿದ್ದ ಚನ್ನಪಟ್ಟಣದಲ್ಲಿ ಬರೋಬ್ಬರಿ 88.80% ರಷ್ಟು ಮತದಾನವಾಗಿದ್ದು, ಶಿಗ್ಗಾಂವಿಯಲ್ಲಿ 80.48% ರಷ್ಟು ಮತದಾನವಾಗಿದೆ. ಎಸ್‌ಟಿ ಮೀಸಲು ಕ್ಷೇತ್ರ ಸಂಡೂರಿನಲ್ಲಿ 76.24 % ರಷ್ಟು ಮತದಾನ ಆಗಿದೆ ಎಂದು ಕರ್ನಾಟಕ ಚುನಾವಣಾ ಆಯೋಗ ಪ್ರಕಟಣೆ ಮೂಲಕ ಅಧಿಕೃತವಾಗಿ ತಿಳಿಸಿದೆ.
ಇಂದು ನಡೆದ ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕುಟುಂಬ ಸದಸ್ಯರನ್ನೇ ಕಣಕ್ಕಿಳಿಸಿರುವ ಕಾರಣ ಚುನಾವಣಾ ಕಣ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು.