ಕಾರವಾರ: ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಲು ತೆರಳಿದ್ದ ಯುವಕನಿಗೆ ಹೋರಿ ತಿವಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಸಂಭವಿಸಿದೆ.
ಚಿಗಳ್ಳಿಯ ಪರಮೇಶ್ ಸಿದ್ದಪ್ಪ ಹರಿಜನ್ ಹೋರಿ ತಿವಿತಕ್ಕೆ ಬಲಿಯಾದ ಯುವಕ ಎಂದು ಗುರುತಿಸಲಾಗಿದೆ.
ಚಿಗಳ್ಳಿಯ ಕಲ್ವೇಶ್ವರ ಮಠದ ಬಳಿ ಹೋರಿ ಹಬ್ಬ ನೋಡಲು ಹೋಗಿದ್ದ ಯುವಕನಿಗೆ ಹೋರಿಯೊಂದು ಏಕಾಏಕಿ ದಾಳಿ ಮಾಡಿ ಬಲಭಾಗದ ಎದೆಗೆ ತಿವಿದಿತ್ತು. ತಕ್ಷಣ ಮುಂಡಗೋಡು ಆಸ್ಪತ್ರೆಗೆ ದಾಖಲಿಸಿದರೂ ತೀವ್ರ ರಕ್ತಸ್ರಾವದಿಂದ ಸಿದ್ದಪ್ಪ ಮೃತ ಪಟ್ಟಿದ್ದಾನೆ.
ಈ ಕುರಿತಂತೆ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನಲ್ಲಿ ಮುಳುಗಿ ಇಬ್ಬರ ಸಾವು
ತುಮಕೂರು: ಬಾವಿಯಲ್ಲಿ ಈಜಾಡಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಬೆಳಗುಂಬದಲ್ಲಿ ನಡೆದಿದೆ.
ಯಶವಂತ (17), ಮೊಹಮ್ಮದ್ ಸುಹೇಲ್ (17) ಸಾವನ್ನಪ್ಪಿದ ಯುವಕರು ಎಂದು ಗುರುತಿಸಲಾಗಿದೆ.
ತುಮಕೂರು ಹೊರವಲಯದ ಬೆಳಗುಂಬ ತಾಂಡ್ಯದ ವಾಸಿ ಶ್ರೀನಿವಾಸ್‌ನ ಮಗ ಯಶವಂತ್. ವಡ್ಡರಹಳ್ಳಿ ಗ್ರಾಮದ ವಾಸಿ ಬಾಬಾಜಾನ್‌ನ ಮಗ ಮೊಹಮ್ಮದ್ ಸುಹೇಲ್ ಬೆಳಗುಂಬದ ಕೃಷ್ಣಪ್ಪಗೆ ಸೇರಿದ ಬಾವಿಯಲ್ಲಿ ಈಜಾಡಲು ಹೋಗಿದ್ದರು. ಆದರೆ ನೀರಲ್ಲಿ ಮುಳುಗಿ ಸಾವನಪ್ಪಿದ್ದಾರೆ.
ಗ್ರಾಮಸ್ಥರ ಸಹಕಾರದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶವ ಹೊರತೆಗೆದು, ಶವ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಈ ಕುರಿತಂತೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.