ದೊಡ್ಡಬಳ್ಳಾಪುರ: ದೀಪಾವಳಿ ಹಬ್ಬ ಸಂಭ್ರಮದಿಂದ ಮುಕ್ತಾಯಗೊಂಡರೂ, ಪಟಾಕಿ ಹಚ್ಚುವ ವೇಳೆ ನಡೆದ ಅವಘಡಗಳಲ್ಲಿ ಐದು ಮಕ್ಕಳು ಗಾಯಗೊಂಡಿದ್ದಾರೆ.
ಸರ್ಕಾರ ಮತ್ತು ಸಂಘ- ಸಂಸ್ಥೆಗಳು ಮಕ್ಕಳು ಪಟಾಕಿ ಹಚ್ಚುವ ವೇಳೆ ಪೋಷಕರು ಮುಂಜಾಗ್ರತೆ ಕೈಗೊಳ್ಳುವಂತೆ ಸಲಹೆ, ಸೂಚನೆಗಳನ್ನು ನೀಡಿದರೂ, ನಾಗರಿಕರ ನಿರ್ಲಕ್ಷ್ಯದಿಂದಾಗಿ ಈ ರೀತಿಯ ಅಪಾಯಗಳು ಸಂಭವಿಸುತ್ತಿವೆ.
ಗುರುವಾರದಿಂದ ಪ್ರಾರಂಭವಾದ ದೀಪಾವಳಿ ಹಬ್ಬ ಶನಿವಾರ ರಾತ್ರಿ ಅಂತ್ಯಗೊಂಡಿದ್ದು, ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಈ ನಡುವೆ ಪಟಾಕಿ ಹಚ್ಚುವ ವೇಳೆ ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯ ಮೂರು ಮಕ್ಕಳ ಕಣ್ಣಿಗೆ ಪಟಾಕಿ ಕಿಡಿ ತಗುಲಿ ಗಾಯಗಳಾಗಿವೆ. ಗಾಯಗೊಂಡ ಮಕ್ಕಳು ಅಭಿಷೇಕ್ ನೇತ್ರದಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಇವರಲ್ಲಿ ಒಂದು ಮಗುವಿನ ಕಣ್ಣಿನ ಕಪ್ಪು ಗುಡ್ಡೆಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಉಳಿದ ಇಬ್ಬರು ಮಕ್ಕಳು ಕೈಯಲ್ಲಿ ಪಟಾಕಿ ಹಿಡಿದು ಹಚ್ಚುವ ವೇಳೆ ಕೈಗಳಿಗೆ ಗಾಯಗಳಾಗಿದ್ದು, ಶ್ರೀರಾಮ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಅದ್ಧೂರಿ ದೀಪಾವಳಿ ಆಚರಣೆ ಸಂದರ್ಭದಲ್ಲಿ ಈ ರೀತಿಯ ಅವಘಡಗಳು ಮಕ್ಕಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದಾಗ್ಯೂ ಪೋಷಕರು ಮುಂಜಾಗ್ರತೆ ವಹಿಸದೆ ಇರುವುದು ವಿಪರ್ಯಾಸ ಎಂದು ಡಾ.ವಿಜಯಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ..