ದೊಡ್ಡಬಳ್ಳಾಪುರ: ನಾಳೆಯಿಂದ ರಾಜ್ಯದಲ್ಲಿ ಮಳೆಯ ಪ್ರಮಾಣದಲ್ಲಿ ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಆದರೆ ಇಂದು ಬೆಳಗ್ಗೆಯಿಂದಲೇ ದೊಡ್ಡಬಳ್ಳಾಪುರ ಸೇರಿ ರಾಜ್ಯದ ಹಲವೆಡೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು ವ್ಯಾಪಾರ ವಹಿವಾಟು ಅಸ್ತವ್ಯಸ್ತವಾಗಿದೆ.
ಬೆಳಗ್ಗಿನ ಜಾವದಿಂದ ಒಂದೇ ಸಮಯ ಸುರಿದ ಜಿಟಿಜಿಟಿ ಮಳೆ ವಿಜಯದಶಮಿ ಹಬ್ಬದ ರಜೆ ಮುಗಿಸಿ, ಶಾಲೆ, ಕಾಲೇಜು, ನೌಕರಿಗೆ ಹೊರಟ್ಟಿದವರನ್ನು ಮಳೆಯಲ್ಲಿ ನೆನೆಯುವಂತೆ ಮಾಡಿತು.
ಬೆಳಗ್ಗೆ 11ಆದರೂ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದ್ದರೆ. ಮತ್ತೊಂದೆಡೆ ಟೀ, ಕಾಫಿ ಅಂಗಡಿ, ಹೋಟೆಲ್ಗಳಿಗೆ ಅಲ್ಪಮಟ್ಟದ ವ್ಯಾಪಾರ ನಡೆಯುತ್ತಿದೆ.
ರಾಜ್ಯದಲ್ಲಿ ಈಗಾಗಲೇ ರಾತ್ರಿಯಿಂದಲೇ ಸಾಧಾರಣ ಮಳೆ ಆಗುತ್ತಿದೆ. ಇದೇ ಮಳೆ ನಾಳೆಯಿಂದ ಭಾರೀ ಪ್ರಮಾಣದಲ್ಲಿ ಸುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 15 ರಿಂದ 17ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ ತಿಳಿಸಲಾಗಿದೆ.
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಶಿವಮೊಗ್ಗ, ಹಾಸನ, ಕೊಡಗು, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರಕ್ಕೆ ಅಕ್ಟೋಬರ್ 17 ರಂದು ಭಾರೀ ಮಳೆಯಾಗಲಿದೆ.
ಕರಾವಳಿಯ ಎಲ್ಲಾ ಜಿಲ್ಲೆಗಳು ಸೇರಿದಂತೆ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.