ಬೆಂಗಳೂರು: ಕರ್ನಾಟಕದ ಜಿಎಸ್ಟಿ ಹೆಚ್ಚಿದೆ. ತೆರಿಗೆ ಸಾಲಿನಲ್ಲಿ ನಮಗಿಂತ ಆಂಧ್ರಪ್ರದೇಶಕ್ಕೆ ಹೆಚ್ಚು ಹಣ ಕೊಟ್ಟಿದ್ದಾರೆ. ಅತಿಹೆಚ್ಚು ತೆರಿಗೆ ಪಾವತಿಸುವ ನಮಗೆ ತಾರತಮ್ಯವಾಗುತ್ತಿದ್ದು, ತೆರಿಗೆ ತಾರತಮ್ಯ ಖಂಡಿಸಿ “ನಮ್ಮ ತೆರಿಗೆ ನಮ್ಮ ಹಕ್ಕು” ಎಂದು ಪ್ರತಿಭಟನೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಸದಾಶಿವನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ನಮ್ಮ ತೆರಿಗೆ ಹಣ ಉತ್ತರ ಪ್ರದೇಶ, ದೆಹಲಿ, ಬಿಹಾರಕ್ಕೆ ಕೊಡುತ್ತಿದ್ದಾರೆ. ಆಂಧ್ರಕ್ಕಿಂತಲೂ ಕಡಿಮೆ ಹಣ ನಮಗೆ ನೀಡಿದ್ದಾರೆ. ಅವರಿಗಿಂತ ಕೀಳಾಗಿದ್ದೇವಾ? ಎಂದು ಪ್ರಶ್ನಿಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಕೇಂದ್ರ ಸರ್ಕಾರದಲ್ಲಿ ಐವರು ಸಚಿವರು ನಮ್ಮವರೇ ಇದ್ದಾರೆ. ನಮ್ಮಲ್ಲೇ ಇದ್ದುಕೊಂಡು ಈಗ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
ಸರ್ಕಾರದ ಜಾಹೀರಾತಿಗೆ ವಿರೋಧ ಪಕ್ಷಗಳ ಆಕ್ಷೇಪ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಮಗಿರುವ ಮಾಹಿತಿಯನ್ನು ಹಾಕಿದ್ದೇವೆ. ನಾವು ನಡೆದುಕೊಂಡು ಹೋಗ್ತಿರುವ ದಾರಿಯ ಆಧಾರದ ಮೇಲೆ ನೋಡುತ್ತಿದ್ದೇವೆ. ನಮ್ಮ ಭಾವನೆಗಳ ಮೇಲೆ ಜಾಹೀರಾತು ಹಾಕಿದ್ದೇವೆ. ಅದನ್ನು ಸದನದಲ್ಲಿ ಮಾತನಾಡುತ್ತೇವೆ. ಅವರು ಏನು ಬೇಕಾದರೂ ಮಾಡಲಿ ಎಂದರು.