ಮೈಸೂರು: ನವರಾತ್ರಿಯ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HDK) ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ಒಳ್ಳೆಯದಾಗಲು ಮತ್ತು ಬಡವರ ಪರವಾಗಿ ಉತ್ತಮ ಕೆಲಸವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ಶಕ್ತಿ ನೀಡುವಂತೆ ಕೇಳಿದ್ದೇನೆ ಎಂದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಜ್ಯವನ್ನು ವಾಮ ಮಾರ್ಗ, ಮೋಸದಿಂದ ಸ್ಥಿರಗೊಳಿಸುವ ಸರ್ಕಾರ ಇದು. ರಾಜ್ಯ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪತ್ರಿಕೆಗಳಲ್ಲಿ ದೊಡ್ಡದಾಗಿ ಜಾಹೀರಾತುಗಳನ್ನು ಹಾಕಿದ್ದಾರೆ. ದುಷ್ಟ ಶಕ್ತಿಯ ಎದುರು ಸತ್ಯತೆಯ ಜಯ. ಕರ್ನಾಟಕ ರಾಜ್ಯವನ್ನು ವಾಮ ಮಾರ್ಗ ಹಾಗೂ ಮೋಸದಿಂದ ಅಸ್ಥಿರಗೊಳಿಸುವ ಸರ್ಕಾರ ಅಂತ ಇದೆ. ಆದರೆ ನನ್ನ ಅಭಿಪ್ರಾಯದಲ್ಲಿ ರಾಜ್ಯವನ್ನು ವಾಮ ಮಾರ್ಗ, ಮೋಸದಿಂದ ಸ್ಥಿರಗೊಳಿಸುವ ಸರ್ಕಾರ ಇದು. ಯಾವ ಸತ್ಯ ಧರ್ಮವನ್ನು ಉಳಿಸಿದ್ದೀರಿ? ಇದನ್ನು ಸಿದ್ದರಾಮಯ್ಯ ಅವರಿಗೆ ಕೇಳಲು ಬಯಸುತ್ತೇನೆ ಎಂದು ಪ್ರಶ್ನಿಸಿದರು.
ಮುಡಾ ಪ್ರಕರಣದಲ್ಲಿ 15 ಸರ್ಕಾರಿ ಸೈಟನ್ನು ಸಿದ್ದರಾಮಯ್ಯ ಅವರು ವಾಪಸ್ ಮಾಡಿದ್ದಾರೆಯೇ ಹೊರತು ಅವರ ಮನೆಯದ್ದನ್ನಲ್ಲ. ಸರ್ಕಾರಕ್ಕೆ ಮೋಸ ಮಾಡಿ ಅವರು ತೆಗೆದುಕೊಂಡಿದ್ದರು. ಪರಿಸ್ಥಿತಿಗಳು ಯಾವಾಗ ಕೋರ್ಟ್ನಲ್ಲಿ ವ್ಯತಿರಿಕ್ತವಾಗಿ ಬಂತೋ ಆಗ ಸೈಟ್ ಕೊಟ್ಟಿದ್ದೇವೆ ಅಂತ ತೋರಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇನಕಲ್ ಸಾಕಮ್ಮನ ಕೇಳಿದ್ರೆ ಗೊತ್ತಾಗುತ್ತದೆ ಎಂದರು.
ಕ್ಯಾಬಿನೆಟ್ನಲ್ಲಿ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತೇವೆ, ಎಸ್ಐಟಿ ರಚನೆ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಎಂದಿದ್ದಾರೆ. ಅದಕ್ಕೆ ನನ್ನದೇನು ತಕರಾರು ಇಲ್ಲ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದಲ್ಲಿದ್ದಾಗ ಕೋವಿಡ್ ಸಮಯದಲ್ಲಿ ಆದಂತಹ ವೈಫಲ್ಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಂತಹ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಆಗಿ 15 ತಿಂಗಳುಗಳಾಯಿತು. ಇಲ್ಲಿಯವರೆಗೆ ಏನು ಮಾಡದೇ ಇದ್ದಂತವರು ಈಗ ತರಾತುರಿಯಲ್ಲಿ ಏನೇನೋ ಮಾಡಲು ಹೊರಟಿದ್ದಾರೆ. ಎಷ್ಟರ ಮಟ್ಟದಲ್ಲಿ ಸಫಲರಾಗುತ್ತಾರೆ ನೋಡೋಣ ಎಂದರು.
ಈ ವೇಳೆ ಹುಣಸೂರು ಶಾಸಕ ಹರೀಶ್ ಗೌಡ, ಎಂಎಲ್ಸಿ ಮಂಜೇಗೌಡ ಸೇರಿದಂತೆ ಸ್ಥಳೀಯ ಜೆಡಿಎಸ್ ನಾಯಕರು ಸಾಥ್ ನೀಡಿದರು.