ದೊಡ್ಡಬಳ್ಳಾಪುರ: ನಗರದ ಪ್ರಮುಖ ರಸ್ತೆಗಳಲ್ಲಿ ಬೇಕಾಬಿಟ್ಟಿ ನಿಲ್ಲಿಸುವ ದ್ವಿಚಕ್ರ ವಾಹಗಳಿಂದಾಗಿ Doddaballapura ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಇಂದು ಅಪರಾಹ್ನ 12 ಗಂಟೆ ಸುಮಾರಿಗೆ Doddaballapura ನಗರದ ತಾಲೂಕು ಕಚೇರಿ ರಸ್ತೆಯಿಂದ ರುಮಾಲೆ ಛತ್ರದ ನಡುವಿನ ರಸ್ತೆಯಲ್ಲಿ ಸುಮಾರು 20 ಕ್ಕೂ ಹೆಚ್ಚು ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ತೊಂದರೆಗೆ ಸಿಲುಕಿದರು.
ಎಸಿ ಕಚೇರಿ, ತಹಶಿಲ್ದಾರ್ ಕಚೇರಿ, ನೋಂದಣಿ ಕಚೇರಿ, ಗುರುಭವನ ಸೇರಿದಂತೆ ಪ್ರಮುಖ ಕಚೇರಿಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಾದ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ಜನ ಈ ರಸ್ತೆಯನ್ನು ಅವಲಂಬಿಸಿದ್ದಾರೆ.
ಈ ರಸ್ತೆಯಲ್ಲಿ ಸ್ಟಾಂಪ್ ವೆಂಡರ್, ಟೈಪಿಸ್ಟ್, ನೋಟರಿ, ಜೆರಾಕ್ಸ್ ಮುಂತಾದ ಅನೇಕ ಪ್ರಮುಖ ಅಂಗಡಿಗಳು ಇದ್ದು, ಇಲ್ಲಿಗೆ ಬರುವ ದ್ವಿಚಕ್ರ ವಾಹನ ಸವಾರರು ಎರಡು ಬದಿಯಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಗುತ್ತಿದೆ.
ನಗರ ಪೊಲೀಸ್ ಠಾಣೆಯಿಂದ ದ್ವಿಚಕ್ರ ವಾಹನ ನಿಲುಗಡೆ ಕುರಿತು ನಿಯಮ ರೂಪಿಸಿದ್ದಾರೆ. ಅಲ್ಲದೆ ಏಕ ಮುಖ ಸಂಚಾರದ ನಿಯಮಕೂಡ ಇದೆ. ಆದರೆ ಅದು ಜಾರಿಗೆ ಬಾರದೆ ಇರುವುದರಿಂದ ವಾಹನ ಸವಾರರು ತೊಂದರೆಗೆ ಸಿಲುಕುತ್ತಿದ್ದಾರೆಂದು ಜೆಡಿಎಸ್ ಮುಖಂಡ ಸಿಎಂ ಕೃಷ್ಣ ಆರೋಪಿಸಿದ್ದಾರೆ.
ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ಲೋಕಸಭೆ ಚುನಾವಣೆಗೂ ಮುನ್ನ ನಗರ ವ್ಯಾಪ್ತಿಯಯಲ್ಲಿ ಬೇಕಾ ಬಿಟ್ಟಿ ವಾಹನ ನಿಲುಗಡೆ, ಸಂಚಾರಕ್ಕೆ ಕಡಿವಾಣ ಹಾಕಿ. ನಗರದಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ತಡೆಗಟ್ಟಿದ್ದರು. ಆದರೆ ಚುನಾವಣೆ ಕಾರಣ ಅವರ ವರ್ಗಾವಣೆಯಾಗಿ ತೆರಳಿದ ನಂತರ ಅವ್ಯವಸ್ಥೆ ಆರಂಭವಾಗಿತ್ತು, ಈಗಲೂ ಮುಂದುವರಿದಿದೆ.
ಚುನಾವಣೆ ಪ್ರಕ್ರಿಯೆ ನಂತರ ಮತ್ತೆ ದೊಡ್ಡಬಳ್ಳಾಪುರಕ್ಕೆ ಬಂದಿರುವ ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ಮೊದಲಿನಂತೆ ಕಾರ್ಯಾಚರಣೆ ಆರಂಭಿಸಿ ನಿಯಮ ಮೀರಿ ವಾಹನ ಸಂಚಾರ, ಬೇಕಾಬಿಟ್ಟಿ ವಾಹನ ನಿಲುಗಡೆಯಿಂದ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂಬ ನಿರೀಕ್ಷೆಯಲ್ಲಿ ನಗರ ವಾಸಿಗಳು ಇದ್ದಾರೆ.