ಕೊಳ್ಳೇಗಾಲ: ಮನೆಯಲ್ಲಿ ನಿತ್ಯ ಪೋಷಕರ ಜಗಳದಿಂದ ಬೇಸತ್ತ ಮಗ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ (Suicide) ಘಟನೆ ತಾಲೂಕಿನ ಶಿವನಸಮುದ್ರದ ಬಳಿ ಜರುಗಿದೆ.
ಬೆಂಗಳೂರಿನ ನಾಯಂಡಳ್ಳಿ ನಿವಾಸಿ ಶಿವಸ್ವಾಮಿ ಎಂಬುವರ ಪುತ್ರ 26 ವರ್ಷ ಸಂದೀಪ್ ಕುಮಾರ್ ಮೃತ ಯುವಕ. ಮೂಲತಹಃ ದೊಡ್ಡಬಳ್ಳಾಪುರದವರಾದ ಶಿವಸ್ವಾಮಿ ಅವರು ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಹಾಲಿ ವಾಸವಿದ್ದಾರೆ.
ಇವರ ಮಗ ಸಂದೀಪ್ ಕುಮಾರ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದು, ತಂದೆ-ತಾಯಿಯ ನಡುವೆ ನಿತ್ಯ ಜಗಳವಾಗುತಿತ್ತು. ಇದರಿಂದಾಗಿ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದ ಸಂದೀಪ್ ಕುಮಾರ್‌ಗೆ ಬೇಸರವಾಗುತ್ತಿತ್ತು ಎಷ್ಟು ಹೇಳಿದರೂ ಅವರು ನಡವಳಿಕೆ ಬದಲಿಸಿಕೊಂಡಿರಲಿಲ್ಲ ಎನ್ನಲಾಗಿದೆ.
ಮನೆಯಲ್ಲಿ ನಿತ್ಯ ಅಶಾಂತಿಯನ್ನು ನೋಡಿ ರೋಸಿ ಹೋಗಿದ್ದ ಸಂದೀಪ್ ಕುಮಾರ್ ಅಗಸ್ಟ್.2 ರಂದು ತನ್ನ ಬೈಕ್ ಏರಿ ನೇರವಾಗಿ ಪ್ರಯಾಣ ಬೆಳೆಸಿ, ಇಲ್ಲಿನ ಶಿವನಸಮುದ್ರದ ಕಾವೇರಿ ನದಿಯ ಬಳಿ ಬೈಕ್ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.
ನಿನ್ನೆ ಸಂಜೆ ಈತನ ಮೃತ ದೇಹ ಶಿವನಸಮುದ್ರದ ರಂಗನಾಥಸ್ವಾಮಿ ದೇವಾಲಯದ ಹಿಂಭಾಗ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.
ಈ ಸಂಬಂಧ ಮೃತನ ತಂದೆ ಶಿವಸ್ವಾಮಿ ಇಲ್ಲಿನ ಗ್ರಾಮಾಂತರ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ದೇಹವನ್ನು ನದಿಯಿಂದ ಹೊರತೆಗೆಸಿ ಪಂಚನಾಮೆ ನಡೆಸಿ ವಾರಸುದಾರರಿಗೆ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.