ಬೆಳಗಾವಿ: ತಾಂತ್ರಿಕ ಕಾರಣಗಳಿಂದ ವಿಳಂಬ ಗೊಂಡಿದ್ದ ಜುಲೈ ಹಾಗೂ ಆಗಸ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇದೇ 7 ಮತ್ತು 9 ರಂದು ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳರ್ ಹೇಳಿದ್ದಾರೆ.
ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ಗುರುವಾರ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಯಜಮಾನಿಯರ ಖಾತೆಗೆ ಎರಡೂ ಕಂತಿನ ಹಣವನ್ನು ಹಾಕಲಾಗುವುದು. ಕೆಲವೊಂದು ತಾಂತ್ರಿಕ ಕಾರಣಗಳಿಂದ ಹಣ ಹಾಕುವುದು ವಿಳಂಬವಾಗಿತ್ತು ಎಂದರು.
ಈ ಲಕ್ಷ್ಮೀ ಹೆಬ್ಬಾಳರ್ ಹಿಡಿದ ಕೆಲಸವನ್ನು ಮಾಡದೇ ಬಿಡುವುದಿಲ್ಲ ಎಂದು ಮೊನ್ನೆ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ನನ್ನ ಬಗ್ಗೆ ಹೇಳಿದ್ದಾರೆ.
ಈ ಹೆಣ್ ಮಗಳು ತುಂಬಾ ಕಿಲಾಡಿ, ಹಠ ಮಾಡಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದೇ ಲಕ್ಷ್ಮೀ ಹೆಬ್ಬಾಳರ್ ಅಂತ ಸಿಎಂ ಸಿದ್ದರಾಮಯ್ಯ ನನ್ನ ಬಗ್ಗೆ ಹೇಳಿದ್ದಾರೆ.
ಹೀಗಾಗಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಪಟ್ಟು ಹಿಡಿದು ಯೋಜನೆ ಮಾಡಿಸಿದ್ದೇನೆ. ಯೋಜನೆಯನ್ನು ಸಮರ್ಪಕ ವಾಗಿ ಜಾರಿಗೊಳಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು.
ಕಲ್ಲೋಳಿ ಗ್ರಾಮದಲ್ಲಿ ಕಳೆದ 41 ವರ್ಷಗಳಿಂದ ದಸರಾ ಉತ್ಸವ ಮತ್ತು ದೇವಿ ಪುರಾಣ ಏರ್ಪಡಿಸಿಕೊಂಡು ಬಂದಿರುವುದು ಶ್ಲಾಘನೀಯ, ಇಲ್ಲಿನ ಜನರ ದೈವಭಕ್ತಿಯು ನಿಜಕ್ಕೂ ಪ್ರಶಂಸನೀಯ ಎಂದರು
ಈ ವೇಳೆ ಬಂಡಿಗಣಿಯ ಬಸವಗೋಪಾಲ ನೀಲ ಮಾಣಿಕ್ಯ ಮಠದ ದಾಸೋಹರತ್ನ ಅನ್ನದಾನೇಶ್ವರರು, ಮಹಾರಾಷ್ಟ್ರ ರಾಜ್ಯದ ಸುಕ್ಷೇತ್ರ ಭೂಕೈಲಾಸ ಹುಲಜಂತಿಯ ಪೂಜ್ಯಶ್ರೀ ಮಾಳಿಂಗರಾಯ ಮಹಾರಾರು, ಅರಿಕೇರಿಯ ಅಮೋಘಸಿದ್ಧ ಪೀಠದ ಶ್ರೀ ಅವಧೂತ್ ಮಹಾರಾಜರು, ಸಿದ್ಧ ಓಂಕಾರ ಆಶ್ರಮದ ಹುಲ್ಯಾಳದ ಮಾತೋಶ್ರೀ ಜಯಶ್ರೀ ದೇವಿ, ಹೊಳೆ ಬಬಲಾದಿಯ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ಸಂಸದರಾದ ಈರಣ್ಣ ಕಡಾಡಿ, ಶಾಸಕರಾದ ಬಾಬಾಸಾಹೇಬ್ ಪಾಟೀಲ, ಡಾ.ಮಹಾಂತೇಶ್ ಕಡಾಡಿ, ಲಖಣ್ಣಾ ಸವಸುದ್ದಿ, ರಾವಸಾಹೇಬ್ ಬೆಳಕೂಡ, ಬಸವರಾಜ ಬೆಳಕೂಡ, ಬಸವರಾಜ ಕಡಾಡಿ, ರಾಮಪ್ಪ ಬೆಳಕೂಡ, ಉಮೇಶ ಪಾಟೀಲ, ಭೀಮರಾಯ ಕಡಾಡಿ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.