ಮೈಸೂರು: ಪ್ರಸಿದ್ಧ ಪ್ರಸೂತಿ ತಜ್ಞೆ ಡಾ.ಜಿ.ಎಸ್.ವಿದ್ಯಾಧರೆ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದು, ಮೈಸೂರಿನ ಆರ್ಟಿಒ ವೃತ್ತದ ಬಳಿಯ ಡೆನ್ಮಾರ್ ಅಪಾರ್ಟ್ಮೆಂಟ್ನ ಮನೆಯಲ್ಲಿ ಇಂದು ಬೆಳಿಗ್ಗೆ ಅವರ ಶವ ಪತ್ತೆಯಾಗಿದೆ.
ವಿದ್ಯಾಧರೆ ಅವರು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ವೈದ್ಯೆ ಆಗಿದ್ದರು. ಡಾ.ವಿದ್ಯಾಧರೆ ಅವರ ಪತಿ ಡಾ.ಷಣ್ಮುಖ ಕೆ.ಆರ್.ಆಸ್ಪತ್ರೆಯಲ್ಲಿ ಪ್ರಖ್ಯಾತ ಮೂಳೆ ತಜ್ಞರಾಗಿದ್ದಾರೆ.
ವೈದ್ಯೆ ವಿದ್ಯಾಧರೆ ಅವರು ಭಾನುವಾರ ತವರು ಮನೆಯಿಂದ ಮೈಸೂರಿನಲ್ಲಿನ ಗಂಡನ ಮನೆಗೆ ಬಂದಿದ್ದರು. ಆದರೆ, ಡಾ.ವಿದ್ಯಾಧರೆ ಬೆಳಿಗ್ಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಡಾ.ಷಣ್ಮುಖ ಕುಟುಂಬದ ವಿರುದ್ಧ ಡಾ.ವಿದ್ಯಾಧರೆ ತಾಯಿ ಆರೋಪ ಮಾಡಿದ್ದಾರೆ.
ಡಾ.ವಿದ್ಯಾಧರೆ ಪೋಷಕರು ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಜಾನ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.