ಸಮುದ್ರ ಮಥನದ ಕಾಲ, ಸುರರು ಮತ್ತು ಅಸುರರು ಕಡೆದು ಸೋತಿದ್ದಾರೆ, ಸಾಕ್ಷಾತ್ ವಿಷ್ಣುವೇ ಮಂದರವನ್ನು ಎತ್ತಿ ಹಿಡಿದು ಮಥಿಸ ತೊಡಗಿದ್ದಾನೆ, ಬಲಗೈಯಿಂದ ವಾಸುಕಿಯ ಶಿರವನ್ನು ಹಿಡಿದು ವೇಗವಾಗಿ ಎಳೆದಾಗ ಮಂದರವು ಗಿರ್ರನೆ ನೂರಾರು ಸುತ್ತು ತಿರುಗಿದೆ, ಅಷ್ಟರಲ್ಲೇ ಎಡಗೈಯಿಂದ ವಾಸುಕಿಯ ಬಾಲವನ್ನು ಸೆಳೆದಾಗ ಇನ್ನೂ ವೇಗದಿಂದ ಬಲಮಗ್ಗುಲಿಗೆ ತಿರುಗುತ್ತಿದ್ದ ಪರ್ವತ ಫಕ್ಕನೆ ಎಡಮಗ್ಗುಲಿಗೆ ವಾಲಿ ರಭಸದಿಂದ ತಿರುಗ ತೊಡಗಿದೆ.
ಈ ವೇಗಕ್ಕೆ ಸಾಗರವು ಭೋರ್ಗರೆದು ಮೇಲೆ ಚಿಮ್ಮುತ್ತಿದೆ, ಇಂತಹ ಸ್ಥಿತಿ ಯಲ್ಲಿ ವೇಗವಾಗಿ ಅತ್ತಿತ್ತ ಚಲಿಸುತ್ತಿರುವ ಭಗವಂತನ ಶರೀರದಿಂದ ರೋಮಗಳು ಚಿಮ್ಮಿ ದಡದಲ್ಲಿ ಬಿದ್ದಿದೆ, ಆ ರೋಮದಿಂದ ಹರಿತ ಶಾದ್ವವರ್ಣದ ಗರಿಕೆ ಹುಟ್ಟಿದೆ, ಹೀಗೆ ದೂರ್ವೆ ವಿಷ್ಣುತನೂದ್ಬವೆ.
ಕ್ಷೀರಾಂಬುಧಿಯ ಅಲೆಗಳ ಪೆಟ್ಟಿಗೆ ಜಾರಿದ ವಿಷ್ಣುರೋಮದಿಂದ ಉದಿಸಿದ ಗರಿಕೆ ಮೇಲೆ ಅಮೃತ ಕಳಶವನ್ನು ಇರಿಸಲಾಯಿತು, ಅಮೃತದ ಸಂಪರ್ಕದಿಂದ ಗರಿಕೆ ಹುಲ್ಲು ಅಮೃತ ತೃಣವೆನಿಸಿತು, ರೋಗ ನಿವಾರಕ ಔಷದ ವೆನಿಸಿತು.
ಭಗವಂತನ ಆನಂದಭಾಷ್ಪದಿಂದುಸಿ ಬಂದ ಸಸ್ಯ ತುಳಸಿ, ಅಲ್ಲಿ ಲಕ್ಷ್ಮದೇವಿ ಸನ್ನಿಹಿತಳಾದಳು, ಹಾಗೆಯೆ ಭಗವಂತನ ರೋಮದಿಂದುಸಿ ಬಂದ ಹುಲ್ಲು ಹಾಗು ದರ್ಭೆ ಅಲ್ಲಿಯೂ ಲಕ್ಷ್ಮಿದೇವಿ ಸನ್ನಿಹಿತಳಾಗಿದ್ದಾಳೆ, ದೂರ್ವೆಯಲ್ಲಿ ಸನ್ನಿಹಿತಳಾದ ಲಕ್ಷ್ಮಿಗೆ ದೂರ್ವದೇವಿ ಎಂದೇ ಹೆಸರು.
ಗರಿಕೆ ರಸವು ದುಃಸ್ವಪ್ನವನ್ನು ಪರಿಹರಿಸುವ ಶಕ್ತಿಯುಳ್ಳದ್ದು, ಇದು ಮಾನಸ ಗೊಂದಲಗಳನ್ನು ಪರಿಹರಿಸಬಲ್ಲದು, ಹಲವು ಬಗೆಯ ಔಷದಿಗಳಲ್ಲಿ ದೂರ್ವೆಯ ವಿನಿಯೋಗವನ್ನು ಆಯುರ್ವೇದವು ನಿರೂಪಿಸಿದೆ, ಸ್ತಿಯರ ಗರ್ಭಧಾರಣ ಶಕ್ತಿಗಾಗಿ ದೂರ್ವಾರಸ ಸೇಚನದ ವಿಧಿಯನ್ನು, ಪುಂಸವನದಲ್ಲಿ ಅಳವಡಿಸಿದ್ದಾರೆ, ದೇವರ ಪೂಜೆಗೆ ಹೂವೇ ಸಿಗದಿದ್ದರು ಗರಿಕೆಯೊಂದನ್ನು ಏರಿಸಿದರೆ ಎಲ್ಲಾ ಪುಷ್ಟಗಳನ್ನು ಏರಿಸಿದ ಪುಣ್ಯವಂತೆ, ಭಕ್ತಿಯಿಂದ ದೂರ್ವಾಂಕುರ ಅರ್ಚನೆಯಿಂದ ಸರ್ವ ಯಜ್ಞಗಳ ಫಲವಂತೆ, ವೀರಮಿತ್ರೋದಯೇ ನಾರದವಚನಂ.
ಸರ್ವ ಯಜ್ಞಗಳಿಂದಲೂ ದುರ್ಲಭವಾದ ಫಲವನ್ನು ದೂರ್ವಾಂಕುರವನ್ನು ಭಕ್ತಿಯಿಂದ ಭಗವಂತನಿಗೆ ಭಕ್ತಿಯಿಂದ ಅರ್ಪಿಸಿ ಪೂಜಿಸುವುದರಿಂದ ಪಡೆಯಬಹುದಾಗಿದೆ – ಮಧ್ವಾಚಾರ್ಯರು.
ಹರಿಪೂಜೆಯ ಸಾಂಗತೆಗೆ ತುಳಸಿ ಮುಖ್ಯ, ಪರಿಪೂರ್ಣತೆಗೆ ಗರಿಕೆಯೂ ಮುಖ್ಯ.
ಕೃಪೆ : ಸಾಮಾಜಿಕ ಜಾಲತಾಣ