ದೊಡ್ಡಬಳ್ಳಾಪುರ, (ಮೇ.31): ತಾಲ್ಲೂಕಿನ ಮಧುರೆ ಹೋಬಳಿ ಕಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಾರಿಗೆ ಅಡ್ಡಲಾಗಿ ಚಪ್ಪಡಿ ಕಲ್ಲು ನಿಲ್ಲಿಸಿ ಬಂದ್ ಮಾಡಿದ್ದರಿಂದ ಶಾಲೆಗೆ ಬಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೀದಿಯಲ್ಲಿ ನಿಲ್ಲುವಂತಾಗಿದೆ.
ಶಾಲೆಗೆ ತೆರಳಲು ತನ್ನ ಜಮೀನಿನಲ್ಲಿ ದಾರಿ ಮಾಡಿಕೊಟ್ಟಿದ್ದ ರೈತ ಆ ರಸ್ತೆಯಲ್ಲಿ ಅಡ್ಡಲಾಗಿ ದೊಡ್ಡ ಚಪ್ಪಡಿ ಕಲ್ಲುಗಳನ್ನು ನೆಟ್ಟಿದ್ದಾನೆ. ಜಮೀನು ವಿವಾದದ ಕಾರಣದಿಂದ ರೈತ ಈ ಕ್ರಮ ಕೈಗೊಂಡಿದ್ದಾನೆ ಎಂದು ಹೇಳಲಾಗಿದೆ.
ಎಲ್ಲೆಡೆ ಸರ್ಕಾರಿ ಶಾಲೆಗಳು ಆರಂಭವಾಗುತ್ತಿವೆ. ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಸಿದ್ದರಾಗಿದ್ದಾರೆ. ಆದರೆ ಕಾಳಜಿ ಹೀನ ಅಧಿಕಾರಿಗಳಿಂದಾಗಿ ಸರ್ಕಾರಿ ಶಾಲೆಯ ಮಕ್ಕಳು ಬೀದಿಯಲ್ಲಿ ನಿಲ್ಲುವಂತಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈತ ಪುಟ್ಟಬೈರಪ್ಪ, ಶಾಲೆಗೆ ಅನುಕೂಲವಾಗಲಿ ಎಂದು ಸ್ವಂತ ಜಮೀನಿನಲ್ಲಿ ರಸ್ತೆ ಬಿಟ್ಟುಕೊಡಲಾಗಿತ್ತು. ಆದರೆ ಗ್ರಾಮ ಪಂಚಾಯಿತಿ ಸದಸ್ಯರು ಶ್ರೀಮಂತ ವ್ಯಕ್ತಿಯ ಜಮೀನಿಗೆ ರಸ್ತೆ ಮಾಡಿಕೊಡುವ ಸಲುವಾಗಿ ಸರ್ಕಾರಿ ನಕಾಶೆ ರಸ್ತೆಯನ್ನು ನಮ್ಮ ಜಮೀನಿನಲ್ಲಿ ಮಾತ್ರ ಮಾಡಿಸಿದ್ದಾರೆ.
ಹಾಗಾಗಿ ನಮ್ಮ ಖಾಸಗಿ ಜಮೀನಿನಲ್ಲಿ ಎರಡು ಕಡೆಯಲ್ಲೂ ರಸ್ತೆ ಬಿಡಲು ಸಾಧ್ಯ ಇಲ್ಲ. ಸರ್ಕಾರಿ ಅಧಿಕಾರಿಗಳು ಗುರುತಿಸಿದ್ದ ರಸ್ತೆಯನ್ನು ಮಾತ್ರ ಬಿಟ್ಟುಕೊಡಲಾಗಿದೆ. ಇದರಿಂದ ಶಾಲೆಗೆ ಹೋಗುವ ರಸ್ತೆ ಬಂದ್ ಆಗಿದೆ.
ಶಾಲಾ ಕಟ್ಟಡ ನಿರ್ಮಿಸಿರುವ ಜಮೀನಿಗೆ ಇಷ್ಟು ವರ್ಷಗಳಾದರು ಸಹ ಖಾತೆಯನ್ನೇ ಮಾಡಿಸಿಕೊಂಡಿಲ್ಲ. ಈಗಲು ಸಹ ಸರ್ಕಾರಿ ಶಾಲೆ ಖಾಸಗಿ ವ್ಯಕ್ತಿಯ ಹೆಸರಿನಲ್ಲೇ ಇದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಇದುವರೆಗೂ ಖಾತೆಯನ್ನೇ ಮಾಡಿಸಿಕೊಂಡಿಲ್ಲ.
ಕಂದಾಯ ಇಲಾಖೆ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….